ಮುಂಡ್ಲಿಯಲ್ಲಿ ಜಲಮಟ್ಟ ಕುಸಿತ: ಕಾರ್ಕಳ ನಗರಕ್ಕೆ ಕಾದಿದೆ ಸಂಕಷ್ಟ, ಎರಡು ದಿನಕೊಮ್ಮೆ ನೀರು ಬಿಡಲು ತೀರ್ಮಾನ

mundli
ಜಲಮಟ್ಟ ಕಡಿಮೆಯಾಗಿರುವ ಮುಂಡ್ಲಿ ಜಲಾಶಯ.
Published on

ಹರಿಪ್ರಸಾದ್ ನಂದಳಿಕೆ ಕಾರ್ಕಳ
ದಿನದಿಂದ ದಿನಕ್ಕೆ ಏರಿಕೆಯಾಗುತ್ತಿರುವ ತಾಪಮಾನದಿಂದ ಜಲಮಟ್ಟ ಕುಸಿಯುತ್ತಿದ್ದು, ಕಾರ್ಕಳ ತಾಲೂಕಿನ ಪುರಸಭೆ ವ್ಯಾಪ್ತಿಯಲ್ಲಿ ನೀರಿಗೆ ತತ್ವಾರ ಎದುರಾಗುವ ಸಾಧ್ಯತೆಗಳಿವೆ.

ಕಾರ್ಕಳದ ಪಟ್ಟಣ ಪ್ರದೇಶಗಳಿಗೆ ಪ್ರಮುಖವಾಗಿ ನೀರು ಪೂರೈಕೆ ಮಾಡುವ ಮುಂಡ್ಲಿ ಅಣೆಕಟ್ಟೆಯಲ್ಲಿ ಜಲಮಟ್ಟ ಕುಸಿಯುತ್ತಿದ್ದು, ನೀರಿನ ಸಮಸ್ಯೆ ಮುಂದಿನ ದಿನಗಳಲ್ಲಿ ಎದುರಾಗುವ ಸಾಧ್ಯತೆ ದಟ್ಟವಾಗಿದೆ. ದುರ್ಗಾ ಗ್ರಾಮ ಪಂಚಾಯತಿಯ ಗಡಿ ಭಾಗದಲ್ಲಿ ಹರಿಯುವ ಸ್ವರ್ಣ ನದಿಗೆ ಕಟ್ಟಲಾದ ಅಣೆಕಟ್ಟೆ ಇದಾಗಿದ್ದು, ಇಲ್ಲಿ ನೀರು ಸಂಗ್ರಹಿಸಿ ಕಾರ್ಕಳಕ್ಕೆ ಹರಿಸುವ ಪ್ರಕ್ರಿಯೆ 1994ರಿಂದ ಆರಂಭಗೊಂಡಿದೆ.

ಸುಮಾರು 22 ಅಡಿ ಎತ್ತರದ ಈ ಅಣೆಕಟ್ಟಿನಲ್ಲಿ ಈ ಬಾರಿ ಬಹುಬೇಗನೆ ನೀರಿನ ಪ್ರಮಾಣ ಕಡಿಮೆಯಾಗುತ್ತಿರುವುದರಿಂದ ಅಧಿಕಾರಿಗಳಿಗೆ ಹಾಗೂ ಜನ ಸಾಮಾನ್ಯರಿಗೆ ನೀರಿನ ಸಮಸ್ಯೆಯ ಬಗ್ಗೆ ಆತಂಕ ಎದುರಾಗಿದೆ. ಕಳೆದ ಜನವರಿ ತಿಂಗಳಲ್ಲಿ ಸುರಿದ ಅಕಾಲಿಕ ಮಳೆಯಿಂದ ಕೊಂಚ ನೀರಿನ ಮಟ್ಟ ಏರಿಕೆಯಾಗಿತ್ತು. ಇದೀಗ ಬಿಸಿಲ ಬೇಗೆಯಿಂದ ಅಣೆಕಟ್ಟಿನಲ್ಲಿ ನೀರಿನ ಮಟ್ಟ ಕುಸಿಯುತ್ತಿದೆ.

ಎರಡು ದಿನಕೊಮ್ಮೆ ನೀರು

ಜಲಾಶಯದಲ್ಲಿ ನೀರಿನ ಮಟ್ಟ ಕಡಿಮೆಯಾಗುತ್ತಿರುವ ಹಿನ್ನಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಪುರಸಭೆ ಮುಂದಿನ ದಿನಗಳಲ್ಲಿ ಹೊಸ ಕ್ರಮಕ್ಕೆ ಮುಂದಾಗಿದೆ. ಈ ಹಿಂದೆ ಪ್ರತಿ ನಿತ್ಯ ವಾರ್ಡಿನ ಎಲ್ಲ ಮನೆಗಳಿಗೆ ನೀರು ಬರುತ್ತಿದ್ದು, ಮುಂದಿನ ಮಳೆಗಾಲದವರೆಗೆ ನೀರನ್ನು ಜನ ಮಿತವಾಗಿ ಬಳಸಿಕೊಳ್ಳುವಂತೆ ವಿನಂತಿಸಿಕೊಂಡಿದೆ. ಅಲ್ಲದೆ ಪ್ರತಿ ನಿತ್ಯ ಬರುತ್ತಿದ್ದ ನೀರು ಇನ್ನು ಎರಡು ದಿನಗಳಿಗೊಮ್ಮೆ ಬರಲಿದೆ. ಹೀಗಾಗಿ ಜನರು ನೀರನ್ನು ಸಂಗ್ರಹಿಸಿಟ್ಟುಕೊಳ್ಳಬೇಕಾಗುತ್ತದೆ ಎಂದು ಅಧಿಕರಿಗಳು ತಿಳಿಸಿದ್ದಾರೆ.

23 ವಾರ್ಡ್‌ಗಳಿಗೆ ಪೂರೈಕೆ

ಮುಂಡ್ಲಿ ಜಲಾಶಯದಲ್ಲಿ ಸಂಗ್ರಹವಾಗುವ ನೀರನ್ನು ರಾಮಸಮುದ್ರ ಸಂಪುಗೆ ಹಾಯಿಸಿ, ಬಳಿಕ ಅಲ್ಲಿ ಶುದ್ದೀಕರಿಸಿ ಕಾರ್ಕಳದ ಸುಮಾರು 23 ವಾರ್ಡ್‌ಗಳಿಗೆ ನಿತ್ಯ ಪೂರೈಕೆ ಮಾಡಲಾಗುತ್ತಿತ್ತು. ರಾಮಸಮುದ್ರದಲ್ಲಿ ನಿರ್ಮಿಸಿದ ಸಂಪು 2 ಲಕ್ಷ ಲೀಟರ್ ನೀರು ಸಂಗ್ರಹದ ಸಾಮರ್ಥ್ಯ ಹೊಂದಿದೆ.

ರಾಮಸಮುದ್ರವೇ ಆಧಾರ

ಮುಂಡ್ಲಿಯ ಜಲಾಶಯ ಬತ್ತುತ್ತಿರುವ ಪರಿಣಾಮ ಮುಂದಿನ ದಿನಗಳಲ್ಲಿ ರಾಮಸಮುದ್ರದ ನೀರು ಇಡೀ ಪುರಸಭಾ ವ್ಯಾಪ್ತಿಗೆ ಆಧಾರವಾಗಲಿದೆ. ಬಾಹುಬಲಿ ಬೆಟ್ಟದ ಮತ್ತೊಂದು ಪಾರ್ಶ್ವದಲ್ಲಿ ಕಾಣಸಿಗುವಂತಹ ಈ ರಾಮ ಸಮುದ್ರದಲ್ಲಿ ಮಳೆಗಾಲದ ವೇಳೆಯಲ್ಲಿ ಸಂಗ್ರಹವಾಗುವ ನೀರು ಯಾವುದೇ ಋತುವಿನಲ್ಲಿಯೂ ಬತ್ತಿಹೋಗದಿರುವ ಪರಿಣಾಮ ಪುರಸಭೆಗೆ ಈ ನೀರೇ ವರದಾನವಾಗಿದೆ. ಮುಂಡ್ಲಿ ಜಲಾಶಯ ಬತ್ತುತ್ತಿದ್ದಂತೆ ರಾಮಸಮುದ್ರದಿಂದ ನೀರು ಸರಬರಾಜು ಮಾಡುವ ಯೋಚನೆಗಳಿವೆ.

ಕಳೆದ ಬೇಸಿಗೆಯಲ್ಲೂ ತೀವ್ರ ಸಂಕಷ್ಟ

ಕಾರ್ಕಳ ತಾಲೂಕಿನಲ್ಲಿ ಕಳೆದ ಬೇಸಿಗೆಯಲ್ಲೂ ನೀರಿಗಾಗಿ ಹಾಹಾಕಾರ ಉಂಟಾಗಿತ್ತು. ಪುರಸಭೆ ನೀರು ರೇಷನಿಂಗ್ ಆರಂಭಿಸಿ ಮೇ ತಿಂಗಳಿಗಾಗುವಾಗ ವಾರಕ್ಕೊಂದು ಸಲ ಮಾತ್ರ ನೀರು ಬಿಡುವ ದುಃಸ್ಥಿತಿ ಎದುರಾಗಿತ್ತು. ಬಾವಿ, ಕೆರೆಗಳೆಲ್ಲ ಬತ್ತಿಹೋಗಿ ಹಲವು ವಾರ್ಡ್‌ಗಳ ಜನರು ಕುಡಿಯಲು ಕೂಡ ನೀರು ಸಿಗದೆ ಪರಿತಪಿಸಿದ್ದರು. ಬಹುಮಹಡಿ ಕಟ್ಟಡಗಳಿಗೆ ನೀರು ಸರಬರಾಜು ಸಾಕಾಗದೆ ಬಹಳ ಸಮಸ್ಯೆ ಎದುರಾಗಿತ್ತು. ಈ ವರ್ಷವೂ ಬೇಗನೆ ಮಳೆಯಾಗದಿದ್ದರೆ ಇದೇ ಪರಿಸ್ಥಿತಿ ಪುನರಾವರ್ತನೆಯಾಗಲಿದೆ.

ಮುಂಡ್ಲಿಯ ಜಲಾಶಯದಲ್ಲಿ ನೀರಿನ ಮಟ್ಟ ಕಡಿಮೆಯಾಗುತ್ತಿದ್ದು ಜನ ನೀರನ್ನು ಮಿತವಾಗಿ ಬಳಸಬೇಕಾಗಿದೆ. ಈ ಹಿಂದೆ ಪ್ರತಿ ನಿತ್ಯ ಬರುತ್ತಿದ್ದ ನೀರು ಮುಂದಿನ ದಿನಗಳಲ್ಲಿ ಎರಡು ದಿನಗಳಿಗೊಮ್ಮೆ ನೀರು ಪೂರೈಕೆಯಾಗಲಿದ್ದು ಜನ ನೀರನ್ನು ಸಂಗ್ರಹಿಸಿಟ್ಟು ಮಿತ ಬಳಕೆ ಮಾಡಬೇಕಾಗಿದೆ. ಪರ್ಯಾಯವಾಗಿ ರಾಮಸಮುದ್ರದ ನೀರನ್ನು ಜನತೆಗೆ ನೀಡುವಲ್ಲಿ ಸಿದ್ಧತೆ ನಡೆಯುತ್ತಿದೆ.-ರೂಪಾ ಶೆಟ್ಟಿ, ಮುಖ್ಯಾಧಿಕಾರಿ ಪುರಸಭೆ ಕಾರ್ಕಳ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net