More

    30 ವರ್ಷ ಹಿಂದೆ ಸತ್ತ ಆರೋಪಿಗಾಗಿ ಪೊಲೀಸರ ಹುಡುಕಾಟ: ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದಾತನ ಬಂಧನಕ್ಕೆ ತಯಾರಿ

    ವಿಜಯವಾಣಿ ಸುದ್ದಿಜಾಲ ಕಾರ್ಕಳ
    ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ ಆರೋಪಿಯ ಪತ್ತೆಗೆ ಪೊಲೀಸರು ಪ್ರಯತ್ನ ನಡೆಸಿದ್ದು, ಆರೋಪಿ 30 ವರ್ಷಗಳ ಹಿಂದೆಯೇ ಮೃತಪಟ್ಟಿದ್ದಾನೆ ಎಂಬ ಅಚ್ಚರಿಯ ಸಂಗತಿ ಬೆಳಕಿಗೆ ಬಂದಿದೆ.

    1981 ಏಪ್ರಿಲ್ 8ರಂದು ನಡೆದ ಪ್ರಕರಣ

    1981 ಏಪ್ರಿಲ್ 8ರಂದು ನಡೆದ ಪ್ರಕರಣವೊಂದರಲ್ಲಿ ಭಾಗಿಯಾಗಿ ವಿಚಾರಣೆಯ ಸಂದರ್ಭ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ ಆರೋಪಿಯ ಪತ್ತೆಗೆ ಪಡುಬಿದ್ರಿ ಪೊಲೀಸರು ಪ್ರಯತ್ನ ನಡೆಸಿದ್ದು, ಆರೋಪಿ 30 ವರ್ಷಗಳ ಹಿಂದೆ ಅನಾರೋಗ್ಯಕ್ಕೆ ತುತ್ತಾಗಿ ಸಾವಿಗೀಡಾಗಿದ್ದಾನೆಂಬ ಮಾಹಿತಿ ತಿಳಿದು ಬಂದಿದೆ.

    ಜಾಮೀನು ಪಡೆದಿದ್ದ ಆರೋಪಿಗಳು

    ಕಾರ್ಕಳ ತಾಲೂಕಿನ ಬೆಳ್ಮಣ್ ಗ್ರಾಮದ ವಿಶ್ವನಾಥ, ಬಾಬು, ದಿವಾಕರ, ಜಗ್ಗು ಹಾಗೂ ಮಂಜರಪಲ್ಕೆಯ ಸುಧಾಕರ ಶೆಟ್ಟಿ ಎಂಬುವವರು ಸರ್ಕಾರಿ ಜಾಗದಿಂದ ಪರವಾನಗಿ ಇಲ್ಲದೆ ಮರಗಳನ್ನು ಕಡಿದು ಲಾರಿಯಲ್ಲಿ ಸಾಗಿಸುತ್ತಿದ್ದಾಗ ಮಂಗಳೂರು ವಿಶೇಷ ಅರಣ್ಯ ದಳದ ಅಧಿಕಾರಿ ಹಾಗೂ ಸಿಬ್ಬಂದಿ ನಂದಿಕೂರು ಪೇಟೆಯಲ್ಲಿ ಲಾರಿ ಸಮೇತ ಆರೋಪಿಗಳನ್ನು ದಸ್ತಗಿರಿ ಮಾಡಿ ಶಿರ್ವ ಪೊಲೀಸ್ ಠಾಣೆಗೆ ಹಸ್ತಾಂತರಿಸಿದ್ದರು. ಆರೋಪಿಗಳ ವಿರುದ್ಧ ಅರಣ್ಯ ಕಾಯಿದೆ ಹಾಗೂ ಕಳವು ಪ್ರಕರಣ ದಾಖಲಾಗಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿತ್ತು. ಪ್ರಕರಣದ ಕಡತ ಪಡುಬಿದ್ರಿ ಪೊಲೀಸ್ ಠಾಣೆಗೆ ವರ್ಗಾವಣೆಗೊಂಡು ಆರೋಪಿಗಳು ನ್ಯಾಯಾಲಯದಿಂದ ಜಾಮೀನು ಪಡೆದಿದ್ದರು.

    ಆರೋಪಿಗಳಲ್ಲಿ ಒಬ್ಬನಾದ ಸುಧಾಕರ ಶೆಟ್ಟಿ ವಿಚಾರಣೆಯ ಸಂದರ್ಭ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದು, ಕಾರ್ಕಳ ಪಿಸಿಜೆ ಮತ್ತು ಜೆಎಂಎಫ್‌ಸಿ ಈತನ ವಿರುದ್ಧ ಎಲ್‌ಪಿಸಿ ಪ್ರಕರಣ ದಾಖಲಿಸಿ ದಸ್ತಗಿರಿ ಬಗ್ಗೆ ವಾರಂಟ್ ಹೊರಡಿಸಿತ್ತು.

    ಹಲವು ವರ್ಷಗಳ ಬಳಿಕ ಮತ್ತೆ ಪ್ರಕರಣ ಚುರುಕು

    ಹಲವು ವರ್ಷಗಳ ಬಳಿಕ ಮತ್ತೆ ಪ್ರಕರಣ ಚುರುಕು ಪಡೆದಿದ್ದು ಪಡುಬಿದ್ರಿ ಪೊಲೀಸ್ ಠಾಣೆಯ ಪಿಎಸ್‌ಐ ಪ್ರಸನ್ನ ಎಂ.ಎಸ್. ನಿರ್ದೇಶನದಂತೆ ಎಎಸ್‌ಐ ರಾಜೇಶ್ ಪಿ. ವಾರಂಟ್ ಆರೋಪಿ ಸುಧಾಕರ ಶೆಟ್ಟಿ ಬಗ್ಗೆ ವಿಚಾರಿಸಿದ್ದಾರೆ. ಆದರೆ ಸುಧಾಕರ ಶೆಟ್ಟಿ 1994 ಮಾರ್ಚ್ 29ರಂದು ಕಾರ್ಕಳ ಸರ್ಕಾರಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾನೆ. ಈ ಬಗ್ಗೆ ಮಾಹಿತಿ ಸಂಗ್ರಹಿಸಿದ ಪಡುಬಿದ್ರಿ ಪೊಲೀಸರು, ಕಾರ್ಕಳ ಪುರಸಭೆಯಿಂದ ಮರಣದ ದೃಢಪತ್ರವನ್ನು ಪಡೆದು ನ್ಯಾಯಾಲಯಕ್ಕೆ ಸಲ್ಲಿಸಿದ್ದು, ನ್ಯಾಯಾಲಯ ಪ್ರಕರಣವನ್ನು ಮುಕ್ತಾಯಗೊಳಿಸಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts