More

    ಅಶ್ವಮೇಧದ ಮೇಕೆ ಕಟ್ಟಿದ ಮೆಕ್ಕೆಕಟ್ಟು ಶ್ರೀ ನಂದಿಕೇಶ್ವರ ದೇವಾಲಯದಲ್ಲಿ ಉತ್ಸವ: ಕಾಷ್ಠಶಿಲ್ಪಗಳಿಗೆ ಪ್ರಸಿದ್ಧಿ ಪಡೆದ ದೇವಸ್ಥಾನ

    ಅನಂತ ನಾಯಕ್ ಮುದ್ದೂರು ಕೊಕ್ಕರ್ಣೆ
    ಉಡುಪಿ ಜಿಲ್ಲೆಯ ಶಿರಿಯಾರ ಗ್ರಾಮದ ಮೆಕ್ಕೆಕಟ್ಟು ಶ್ರೀ ನಂದಿಕೇಶ್ವರ ದೇವಾಲಯ ವಿಶಿಷ್ಟ ಕಾಷ್ಠ ಶಿಲ್ಪ(ದೇವರ ಮರದ ಮೂರ್ತಿಗಳು) ಮತ್ತು ನಂದಿಕೇಶ್ವರ ಸಪರಿವಾರ ದೇವರ ಕಾರಣಿಕದಿಂದ ರಾಜ್ಯವ್ಯಾಪಿ ಪ್ರಸಿದ್ಧಿ ಪಡೆದಿದೆ. ಇಲ್ಲಿ ಪ್ರತಿವರ್ಷ ಮೀನ ಸಂಕ್ರಾಂತಿಯಂದು ಪ್ರಾರಂಭಗೊಂಡು ಮೂರು ದಿನಗಳ ಕಾಲ ಗೆಂಡಸೇವೆ, ಢಮರು ಸೇವೆ, ಶೆಡಿ ಸೇವೆ, ಬಸವನ ಕಾಣಿಕೆ ಮುಂತಾದ ಜಾತ್ರಾ ಮಹೋತ್ಸವ ನಡೆಯುತ್ತದೆ.

    ದೇವಾಲಯದ ಹಿನ್ನೆಲೆ

    ಹಿಂದೆ ಜಾಬಾಲಿ ಸತ್ಯಕಾಮ ಮುನಿಗಳ ಆದೇಶದ ಮೇರೆಗೆ ಮಹಾರಾಜನೊಬ್ಬ ಅಶ್ವಮೇಧ ಯಾಗ ಮಾಡಲು ಈಗಿನ ಮೆಕ್ಕೆಕಟ್ಟು ಸೂಕ್ತ ಸ್ಥಳವೆಂದು ಆರಿಸಿ, ಶಿರಿಯಾರ ಗ್ರಾಮದ ಒಂದು ತುದಿಯಲ್ಲಿ ಕುದುರೆ ಕಟ್ಟಿ, ಈಗ ದೇವಸ್ಥಾನವಿರುವ ಸ್ಥಳದಲ್ಲಿ ಮೇಕೆ ಕಟ್ಟಿ ನಂದಿಕೇಶ್ವರನ ಅನುಗ್ರಹದಿಂದ ಯಾಗವನ್ನು ವಿಘ್ನವಿಲ್ಲದೆ ಪೂರೈಸಿದ. ಮೇಕೆಯನ್ನು ಕಟ್ಟಿದ ಸ್ಥಳ ಮೆಕ್ಕೆಕಟ್ಟು ಎಂದು ಹಾಗೂ ಕುದುರೆಯನ್ನು ಕಟ್ಟಿದ ಸ್ಥಳ ಕುದುರೆಕಟ್ಟೆ ಎಂದು ಪ್ರಸಿದ್ಧಿ ಪಡೆಯಿತು ಎಂದು ಗ್ರಂಥಗಳಲ್ಲಿ ಉಲ್ಲೇಖಿಸಲಾಗಿದೆ. ಇಲ್ಲಿಯ ಅಗ್ನಿಕುಂಡದಲ್ಲಿ ಗೌರಿ ಅಗ್ನಿ ಪ್ರವೇಶ ಮಾಡಿದ ಸಂಕೇತವಾಗಿ ಈಗಲೂ ಕುಂಭ ಮಾಸದ ಅಂತ್ಯದಲ್ಲಿ ಸಾರ್ವಜನಿಕರಿಂದ ಶೆಡಿ ಉತ್ಸವ ನಡೆಯುತ್ತದೆ. ವಿಜಯನಗರ ಸಾಮ್ರಾಜ್ಯದ ಕಾಲದಲ್ಲಿ ದೇವಳಕ್ಕೆ ವಿಶೇಷ ಪ್ರೋತ್ಸಾಹ ದೊರಕಿತ್ತು ಎನ್ನುವುದಕ್ಕೆ ಸಾಕ್ಷಿಯಾಗಿ ಪೂಜಾದಿ ಕೈಂಕರ್ಯ ನಡೆಸಲು ಜಂಬೂರು, ಶಿರ್ಣಿ ಮುಂತಾದ ಪ್ರದೇಶದಲ್ಲಿ ದೇವಾಲಯಕ್ಕೆ ಉಂಬಳಿ ಕೊಟ್ಟ ಕುರಿತು ಉಲ್ಲೇಖವಿದೆ.

    ಅಶ್ವಮೇಧದ ಮೇಕೆ ಕಟ್ಟಿದ ಮೆಕ್ಕೆಕಟ್ಟು ಶ್ರೀ ನಂದಿಕೇಶ್ವರ ದೇವಾಲಯದಲ್ಲಿ ಉತ್ಸವ: ಕಾಷ್ಠಶಿಲ್ಪಗಳಿಗೆ ಪ್ರಸಿದ್ಧಿ ಪಡೆದ ದೇವಸ್ಥಾನ

    172 ಉರುಗಳು, ಬೊಬ್ಬರ್ಯನ ಶಿಲಾ ವಿಗ್ರಹ

    ದೇವಾಲಯದಲ್ಲಿ 172 ಮರದ ವಿಗ್ರಹಗಳಿವೆ. ಪ್ರಧಾನ ದೇವತೆ ನಂದಿಕೇಶ್ವರ. ವೃಷಭಾಕಾರದ ಪ್ರಧಾನ ನಂದಿ ಹರಿನಂದಿಯೆಂದು ಪ್ರಸಿದ್ಧವಾಗಿದೆ. ಬಲಭಾಗದಲ್ಲಿ ಪಂಚಮುಖ ನಂದಿಯ ಮೇಲೆ ದುರ್ಗಿ, ಎಡಭಾಗದಲ್ಲಿ ಪಾರ್ಶ್ವಮುಖ ನಂದಿ ಮತ್ತು ಆಕಾಶ ನಂದಿ, ತ್ರಿಮುಖ ನಂದಿ, ಬಾಲ ನಂದಿ, ಯಕ್ಷ-ಯಕ್ಷಿಣಿ, ದ್ವಿಮುಖೇಶ್ವರ, ನಾಗೇಶ್ವರ, ಧೂಮ್ರಾಕ್ಷ, ಅರ್ಭಕೇಶ್ವರಿ,ದಾರಕೇಶ್ವರಿ ಮುಂತಾದ 27 ವಿಗ್ರಹಗಳಿವೆ. ದ್ವಾರದಲ್ಲಿ ದ್ವಾರಪಾಲಕನೂ, ವೀರಭದ್ರ, ಭೃಂಗಿ, ಶೃಂಗಿ ಮೊದಲಾದ ಗಣಗಳೂ, ಹೊರದ್ವಾರದಲ್ಲಿ ಜಟಾಧರ, ಹನುವಂತ, ವಕುಟನಾಥ ವಿಗ್ರಹಗಳೂ,ಮೇಲ್ಛಾವಣಿಯಲ್ಲಿ ಸವಾಹನ ಪರಿವಾರ ಬ್ರಾಹ್ಮ್ಯಾದಿ ಸಪ್ತಮಾತೃಕಾ ಗಣಗಳ ವಿಗ್ರಹಗಳಿವೆ. ಎದುರುಗಡೆ ಕ್ಷೇತ್ರಪಾಲನ ದೊಡ್ಡ ಶಿಲಾಸ್ತಂಭ ಇದ್ದು ಪಶ್ಚಿಮ ದ್ವಾರದಲ್ಲಿ ಬಾಗಿಲ ಬೊಬ್ಬರ್ಯನ ಶಿಲಾವಿಗ್ರಹವಿದೆ. ಇಲ್ಲಿರುವ ಶಿಲಾ ವಿಗ್ರಹ ಇದೊಂದೇ.

    ರಾಷ್ಟೀಯ ವಸ್ತುಸಂಗ್ರಹಾಲಯದಲ್ಲಿ ರಕ್ಷಣೆ

    ಮುಂಭಾಗದ ಎಡ ಬದಿಯಲ್ಲಿ ಪ್ರೇತಸ್ಥಾನ, ಹೆಬ್ಬಾಗಿಲ ಹೊರಗೆ ಕಿರಾತರಾಜ(ಹಸ್ರತಿಮ್ಮ) ಹಾಗೂ ಇತರ ರಕ್ತಹಾರಿ ಗಣಗಳು ಇದ್ದು ಇವುಗಳಿಗೆ ಬ್ರಾಹ್ಮಣೇತರರಿಂದ ಪೂಜಾ ಬಲಿಗಳೂ ನಡೆಯುತ್ತವೆ. ಇಲ್ಲಿದ್ದ ಪ್ರಾಚೀನ ಕಾಷ್ಠ ವಿಗ್ರಹಗಳನ್ನು ರಾಷ್ಟ್ರೀಯ ಆಸ್ತಿಯನ್ನಾಗಿ ಪರಿಗಣಿಸಿ ಈಗ ದೆಹಲಿಯ ರಾಷ್ಟ್ರೀಯ ವಸ್ತು ಸಂಗ್ರಹಾಲಯದಲ್ಲಿ ರಕ್ಷಿಸಿಡಲಾಗಿದೆ. ಅವುಗಳ ತದ್ರೂಪ ರಚನೆ ಮಾಡಿ ದೇಗುಲದಲ್ಲಿ ಇರಿಸಲಾಗಿದೆ.

    ಬಲಿಪೀಠ(ಶೆಡಿಕಂಬ)ದಲ್ಲಿ ತೊಟ್ಟಿಲು ತೂಗುವ ಸೇವೆ

    ಪ್ರತಿ ವರ್ಷ ಮೀನ ಸಂಕ್ರಾಂತಿಯ ಮೊದಲ ದಿನದಿಂದ ಪ್ರಾರಂಭಗೊಂಡು ಮೂರು ದಿನ ನಡೆಯುವ ಜಾತ್ರೆಯ ಸಂಬಂಧ ಸಾವಿರಾರು ಭಕ್ತರು ಆಗಮಿಸುತ್ತಾರೆ. ಇಲ್ಲಿಯ ಯಜ್ಞಕುಂಡದಲ್ಲಿ ಗೌರಿಯು ಅಗ್ನಿಪ್ರವೇಶ ಮಾಡಿದ ಸಂಕೇತವಾಗಿ ಈಗಲೂ ಕುಂಭ ಮಾಸದ ಅಂತ್ಯದಲ್ಲಿ ಸಾರ್ವಜನಿಕರಿಂದ ಕೆಂಡಸೇವೆಯೂ, ಮಾರನೆಯ ದಿನ ಯಜ್ಞ ಋತ್ವಿಜರನ್ನೆಲ್ಲಾ ಓಡಿಸಿದ ಸಂಕೇತವಾಗಿ ಮಾಹಾಬಲಿಪೀಠ(ಶೆಡಿಕಂಬ)ದಲ್ಲಿ ತೊಟ್ಟಿಲು ತೂಗುವ ಸೇವೆಯೂ ನಡೆಯುತ್ತದೆ.

    ಹಾಲಿಟ್ಟು ಸೇವೆ

    ಮಾರ್ಚ್ 14ರಂದು ಮೆಕ್ಕೆಕಟ್ಟು ಮೇಳದವರಿಂದ ಯಕ್ಷಗಾನ, ರಾತ್ರಿ ಗೆಂಡಸೇವೆ, ನಾಗದೇವರ ಹಾಲಿಟ್ಟು ಸೇವೆ, ಮಹಾಪೂಜೆ, ಡಮರು ಸೇವೆ, ಮಾರ್ಚ್ 15ರಂದು ಸಂಜೆ ಶೆಡಿ ಸೇವೆ, ಮಹಾಪೂಜೆ, ಢಮರು ಸೇವೆ, ಮಾರ್ಚ್ 16ರಂದು ತುಲಾಭಾರ, ಬಸವನ ಕಾಣಿಕೆ, ಬಲಿಗಲ್ ಫಲ ಸಮರ್ಪಣೆ, ಭೂತಬಲಿ, ಢಮರು ಸೇವೆ, ಮಾರ್ಚ್ 17ರಂದು ಮಧ್ಯಾಹ್ನ ಸಂಪ್ರೋಕ್ಷಣೆ, ಮರುಪೂಜೆ ಕಾರ್ಯಕ್ರಮ ಜರುಗಲಿರುವುದು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts