More

    ವೀರಭದ್ರೇಶ್ವರ ಸ್ವಾಮಿಯ ಗುಗ್ಗಳ ಮಹೋತ್ಸವ

    ದಾವಣಗೆರೆ : ನಗರದ ಹಳೇಪೇಟೆ ಶ್ರೀ ವೀರಭದ್ರೇಶ್ವರ ಸ್ವಾಮಿ ರಥೋತ್ಸವ ಅಂಗವಾಗಿ ಗುಗ್ಗಳ ಮತ್ತು ಕೆಂಡ ತುಳಿಯುವ ಕಾರ್ಯಕ್ರಮ ಸೋಮವಾರ ಅಪಾರ ಭಕ್ತರ ಸಮ್ಮುಖದಲ್ಲಿ ಶ್ರದ್ಧಾ ಭಕ್ತಿಯಿಂದ ನೆರವೇರಿತು.
     ಉತ್ಸವದ ಹಿನ್ನೆಲೆಯಲ್ಲಿ ದೇವಸ್ಥಾನದ ಆವರಣವನ್ನು ತೆಂಗಿನ ಗರಿ, ಮಾವಿನ ಚಪ್ಪರ, ಬಾಳೆಕಂದು, ಬಗೆ ಬಗೆಯ ಹೂವುಗಳು ಮತ್ತು ವಿದ್ಯುದ್ದೀಪಗಳಿಂದ ಅಲಂಕರಿಸಲಾಗಿತ್ತು. ದೇಗುಲ ಮುಂಭಾಗದಲ್ಲಿ ಅಗ್ನಿಕುಂಡವನ್ನು ನಿರ್ಮಿಸಲಾಗಿತ್ತು.
     ‘ಶ್ರೀq, ವೀರಭದ್ರೇಶ್ವರ ಮಹಾರಾಜಕೀ ಜೈ’, ‘ಹರ ಹರ ಮಹಾದೇವ’ ಘೋಷಣೆಗಳು ಕೇಳಿಬಂದವು. ವಾದ್ಯಗಳ ಸದ್ದು ಆವರಿಸಿತ್ತು. ಭಕ್ತರು ಬರಿಗಾಲಿನಲ್ಲಿ ದೈವ ಸನ್ನಿಧಿಗೆ ಬಂದಿದ್ದರು. ಹಣ್ಣು, ತೆಂಗಿನಕಾಯಿ, ಹೂವು, ಎಡೆಯನ್ನು ತಂದಿದ್ದರು. ಕೆಲವರು ವೀರಭದ್ರ ದೇವರ ಹಲಗೆಯೊಂದಿಗೆ ಬಂದಿದ್ದರು. ಮಹಿಳೆಯರು, ಮಕ್ಕಳು ಸೇರಿ ಕುಟುಂಬದ ಸದಸ್ಯರೆಲ್ಲ ಭಾಗಿಯಾಗಿದ್ದರು.
     ಪುರವಂತರು ದೇಗುಲಕ್ಕೆ ಆಗಮಿಸಿ ಮೊದಲು ಸ್ವಾಮಿಯ ದರ್ಶನ ಪಡೆದರು. ನಂತರ ದೇವರ ನಿಶಾನಿಯನ್ನು ಹರಾಜು ಮಾಡಲಾಯಿತು. ಅಗ್ನಿ ಕುಂಡದಲ್ಲಿ ಮೊದಲು ಪುರವಂತರು ಕೆಂಡ ತುಳಿದರು. ನಂತರ ದೇವರ ಮೂರ್ತಿಯನ್ನು ಹೊತ್ತುಕೊಂಡವರು ಅಗ್ನಿಕುಂಡದ ಮೂಲಕ ಹಾದು ಹೋದರು. ಗುಗ್ಗಳದ ಕೊಡವನ್ನು ತರಲಾಯಿತು.
     ನಂತರ ಹರಕೆ ಹೊತ್ತಿದ್ದ ಭಕ್ತರು ಒಬ್ಬೊಬ್ಬರಾಗಿ ವೀರಭದ್ರ ದೇವರ ಸ್ಮರಣೆ ಮಾಡುತ್ತ ಕೆಂಡ ತುಳಿದರು. ಅವರಲ್ಲಿ ಹಲವರು ಮಹಿಳೆಯರೂ ಇದ್ದರು. ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಪ್ರತಿ ವರ್ಷದಂತೆ ಈ ಬಾರಿಯೂ ಕೆಂಡ ತುಳಿದರು. ಅವರ ಮಕ್ಕಳೂ ಅವರನ್ನು ಅನುಸರಿಸಿದರು. ಡಾ.ಪ್ರಭಾ ಮಲ್ಲಿಕಾರ್ಜುನ್, ಉದ್ಯಮಿ ಎಸ್.ಎಸ್. ಗಣೇಶ್ ಇನ್ನಿತರ ಗಣ್ಯರು ಪಾಲ್ಗೊಂಡರು.
     ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಮಲ್ಲಿಕಾರ್ಜುನ್, ನಾಡಿನಲ್ಲಿ ಒಳ್ಳೆಯ ಮಳೆ, ಬೆಳೆಯಾಗಲಿ ಎಂದು ದೇವರಲ್ಲಿ ಪ್ರಾರ್ಥನೆ ಮಾಡಿಕೊಂಡಿದ್ದಾಗಿ ತಿಳಿಸಿದರು. ದೇವಸ್ಥಾನದ ನೂತನ ಕಲ್ಯಾಣ ಮಂಟಪ ನಿರ್ಮಾಣಕ್ಕೆ ದಾವಣಗೆರೆ ದಕ್ಷಿಣ ಶಾಸಕ ಡಾ. ಶಾಮನೂರು ಶಿವಶಂಕರಪ್ಪ 3 ಕೋಟಿ ರೂ. ಅನುದಾನ ನೀಡಿದ್ದಾರೆ ಎಂದು ತಿಳಿಸಿದರು.
     ಶ್ರೀ ವೀರಭದ್ರೇಶ್ವರ ಸ್ವಾಮಿಯ ರಥೋತ್ಸವ ಮಂಗಳವಾರ ಸಂಜೆ 7 ಗಂಟೆಗೆ ನಡೆಯಲಿದೆ. ಬುಧವಾರ ರಾತ್ರಿ 8 ಗಂಟೆಗೆ ಓಕಳಿ ಉತ್ಸವ ಹಮ್ಮಿಕೊಳ್ಳಲಾಗಿದೆ.
     …
     (((ಬಾಕ್ಸ್)))
     ಪಲ್ಲಕ್ಕಿ ಉತ್ಸವ
     ಶ್ರೀ ವೀರಭದ್ರೇಶ್ವರ ಸ್ವಾಮಿಯ ಪಲ್ಲಕ್ಕಿ ಉತ್ಸವವು ವಿಜೃಂಭಣೆಯಿಂದ ನಡೆಯಿತು. ಪುಷ್ಪಾಲಂಕೃತವಾಗಿದ್ದ ಪಲ್ಲಕ್ಕಿಯು ದೇವಸ್ಥಾನದಿಂದ ಹೊರಟು ಶ್ರೀ ಕನ್ನಿಕಾ ಪರಮೇಶ್ವರಿ ರಸ್ತೆ, ಪಾತಾಳೇಶ್ವರ ದೇವಸ್ಥಾನ ರಸ್ತೆ, ಕಾಯಿಪೇಟೆ, ವಿಜಯಲಕ್ಷ್ಮೀ ರಸ್ತೆ, ಚೌಕಿಪೇಟೆ, ಮಹಾರಾಜ ಪೇಟೆ, ಕಾಳಿಕಾ ದೇವಿ ರಸ್ತೆ, ಅನೇಕೊಂಡ ಪೇಟೆ ಮೂಲಕ ದೇವಸ್ಥಾನಕ್ಕೆ ವಾಪಸಾಯಿತು. ನಂತರ ಗುಗ್ಗಳ ಕೊಡಕ್ಕೆ ಹಾಲು ಉಕ್ಕಿಸಲಾಯಿತು.
     …

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts