More

    ಬಡವರ ಮಕ್ಕಳಿಗೆ ಒಳ್ಳೆಯ ಶಿಕ್ಷಣ, ದೊಡ್ಡ ಕೈಗಾರಿಕೆ

    ದಾವಣಗೆರೆ : ನನಗೆ ಒಂದು ಅವಕಾಶ ನೀಡಿದರೆ ಬಡವರ ಮಕ್ಕಳಿಗೆ ಒಳ್ಳೆಯ ಶಿಕ್ಷಣ, ದೊಡ್ಡ ಕೈಗಾರಿಕೆಗಳನ್ನು ತಂದು ನಿಮ್ಮ ಪರವಾಗಿ ಮನೆ ಮಗನಂತೆ ಕೆಲಸ ಮಾಡಿ ತೋರಿಸುತ್ತೇನೆ ಎಂದು ಲೋಕಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಜಿ.ಬಿ. ವಿನಯ್ ಕುಮಾರ್ ಭರವಸೆ ನೀಡಿದರು.
     ಮಾಯಕೊಂಡ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ತೋಳಹುಣಸೆ, ಹಿರೇತೊಗಲೇರಿ, ಚಿಕ್ಕತೊಗಲೇರಿ, ಅತ್ತಿಗೆರೆ, ರಾಮಗೊಂಡನಹಳ್ಳಿ, ದ್ಯಾಮೇನಹಳ್ಳಿ, ಕಂದಗಲ್ಲು, ಮಾಯಕೊಂಡ ಇನ್ನಿತರ ಗ್ರಾಮಗಳಲ್ಲಿ ಪ್ರಚಾರ ನಡೆಸಿದರು.
     ಮಾಯಕೊಂಡ ಕ್ಷೇತ್ರದಲ್ಲಿ ದೊಡ್ಡ ಕೈಗಾರಿಕೆಗಳು ಹಾಗೂ ಶಿಕ್ಷಣ ಸಂಸ್ಥೆಗಳನ್ನು ಏಕೆ ತರಲು ಆಗಿಲ್ಲ. 30 ವರ್ಷಗಳ ಕಾಲ ಅಧಿಕಾರ ಅನುಭವಿಸಿದರೂ ಜನಸೇವೆ ಏಕೆ ಮಾಡಲಿಲ್ಲ ಎಂದು ಪ್ರಶ್ನಿಸಿದರು.
     ಪಕ್ಷೇತರ ಅಭ್ಯರ್ಥಿಯಾಗಿ ನಾನು ಇಲ್ಲಿಗೆ ಬಂದಿದ್ದೇನೆ. ಯಾವ ಪಕ್ಷಕ್ಕೂ ಸೀಮಿತವಾಗಿಲ್ಲ. ನಾನು ಕೂಡ ಹಳ್ಳಿಯಿಂದಲೇ ಬಂದವನು. ಐಎಎಸ್ ಮಾಡಬೇಕೆಂದು ಕಷ್ಟಪಟ್ಟೆ. ಆದರೆ ಸಾಧ್ಯವಾಗಲಿಲ್ಲ. ಕೆಎಎಸ್‌ನಲ್ಲಿ ಉತ್ತೀರ್ಣನಾಗಿದ್ದೆ. ಬೆಂಗಳೂರು, ದೆಹಲಿ, ಲಕ್ನೋ, ಹೈದರಾಬಾದ್, ಜಮ್ಮು ಕಾಶ್ಮೀರ ಸೇರಿ ಆರು ಕಡೆಗಳಲ್ಲಿ ಐಎಎಸ್ ಸಂಸ್ಥೆ ಇದೆ. ನಿಮ್ಮ ಮಕ್ಕಳು ಜಿಲ್ಲಾಧಿಕಾರಿ ಆಗಬಹುದು, ಪೊಲೀಸ್ ವರಿಷ್ಠಾಧಿಕಾರಿ ಆಗಬಹುದು. ಇಂಥ ವ್ಯವಸ್ಥೆ ನಿರ್ಮಿಸೋಣ ಎಂದು ಹೇಳಿದರು.
     ನಾನು ಸ್ವಾಭಿಮಾನಿ ಅಭ್ಯರ್ಥಿಯಾಗಿ ನಿಮ್ಮ ಮುಂದೆ ಬಂದಿದ್ದೇನೆ. ಬಡವರು, ಹಿಂದುಳಿದವರು, ಹಳ್ಳಿಯಿಂದ ಬಂದವರು ಎಂಎಲ್ಎ, ಎಂಪಿ ಆಗುವುದು ಅಷ್ಟು ಸುಲಭವಿಲ್ಲ. ನಮ್ಮನ್ನು ಬೆಳೆಸುವುದಿಲ್ಲ, ಪ್ರೋತ್ಸಾಹಿಸುವುದೂ ಇಲ್ಲ. ನಮ್ಮನ್ನು ಬಳಸಿಕೊಂಡು ಜನರಿಂದ ಮತ ಪಡೆದು ಅವರು ಬೆಳೆಯುತ್ತಾರೆ ಎಂದು ಬೇಸರ ವ್ಯಕ್ತಪಡಿಸಿದರು.
     ಶಿಕ್ಷಣ ಕ್ಷೇತ್ರದಿಂದ ಬಂದವರು, ಶಿಕ್ಷಣ ಪ್ರೇಮಿಗಳು ರಾಜಕಾರಣಕ್ಕೆ ಬರಬೇಕು. ಡಿಪ್ಲೊಮಾ, ಐಟಿಐ ಓದಿ ಮನೆಯಲ್ಲಿದ್ದಾರೆ. ಎಲ್ಲಿಯೂ ಕೆಲಸ ಸಿಗುತ್ತಿಲ್ಲ. ಶಾಮನೂರು ಶಿವಶಂಕರಪ್ಪ ಹಾಗೂ ಜಿ.ಎಂ. ಸಿದ್ದೇಶ್ವರ ಕುಟುಂಬದವರು ಅಧಿಕಾರದಲ್ಲಿದ್ದರೂ ಲಕ್ಷಾಂತರ ಯುವಕರು ಜಿಲ್ಲೆಯಲ್ಲಿ ನಿರುದ್ಯೋಗಿಗಳಾಗಿದ್ದಾರೆ. ಶ್ರೀಮಂತರು ಶ್ರೀಮಂತರಾಗುತ್ತಿದ್ದಾರೆ, ಬಡವರು ಬಡವರಾಗುತ್ತಿದ್ದಾರೆ. ಲೋಕಸಭೆಯಲ್ಲಿ ನಿಮ್ಮ ಪರವಾಗಿ ಮಾತನಾಡದಿರುವುದು, ಹೆಚ್ಚಿನ ಅನುದಾನ ತಂದು ಅಭಿವೃದ್ಧಿ ಕಾರ್ಯಗಳನ್ನು ಮಾಡದೆ ಇರುವುದೇ ಇದಕ್ಕೆಲ್ಲಾ ಕಾರಣ ಎಂದು ಹೇಳಿದರು.
     ಕುಟುಂಬ ರಾಜಕಾರಣ ಅಂತ್ಯವಾಗಬೇಕಾದರೆ ಈ ಚುನಾವಣೆಯಲ್ಲಿ ಗ್ಯಾಸ್ ಸಿಲಿಂಡರ್‌ಗೆ ಮತ ನೀಡಿ. ಹಳ್ಳಿ ಹುಡುಗ, ಸಾಮಾನ್ಯ ವ್ಯಕ್ತಿ, ಬಡತನ, ಹಸಿವಿನ ನೋವು ಅರ್ಥ ಮಾಡಿಕೊಂಡ ಅಭ್ಯರ್ಥಿಯನ್ನು ಲೋಕಸಭೆಗೆ ಕಳುಹಿಸಿದರೆ ನಿಮಗೆ ಪುಣ್ಯ ಬರುತ್ತದೆ ಎಂದು ವಿನಯ್ ಕುಮಾರ್ ಹೇಳಿದರು.
     ನಾನು ಹಿಂದಕ್ಕೆ ಹೋಗುವ ಪ್ರಶ್ನೆಯೇ ಇಲ್ಲ. ನನ್ನನ್ನು ನೋಡಿ ಮತ ನೀಡಿ. ಪಕ್ಷೇತರನಾಗಿ ಕಣಕ್ಕಿಳಿಯುವುದಿಲ್ಲ ಎಂದು ಎಷ್ಟೋ ಜನರು ಕುಹಕವಾಡಿದ್ದರು. ಅವರಿಗೆಲ್ಲಾ ನಾನು ಸ್ಪರ್ಧಿಸಿ ಉತ್ತರ ಕೊಟ್ಟಿದ್ದೇನೆ. ನೀವು ಈ ಚುನಾವಣೆಯಲ್ಲಿ ನನ್ನನ್ನು ಗೆಲ್ಲಿಸಿದರೆ ಅದಕ್ಕೊಂದು ಅರ್ಥ ಬರುತ್ತದೆ. ಸ್ವಾಭಿಮಾನ ಉಳಿಯುತ್ತದೆ ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts