More

    ನಿವಾಸಿಗಳಿಗೆ ಮೂಲಸೌಲಭ್ಯ ಕಲ್ಪಿಸಲು ಆಗ್ರಹ

    ದಾವಣಗೆರೆ : ಸ್ಥಳಾಂತರಗೊಂಡಿರುವ ರಾಮಕೃಷ್ಣ ಹೆಗಡೆ ನಗರದ ನಿವಾಸಿಗಳಿಗೆ ಮೂಲಸೌಲಭ್ಯ ಕಲ್ಪಿಸಬೇಕು ಎಂದು ವಿವಿಧ ಸಂಘಟನೆಗಳು ಆಗ್ರಹಿಸಿವೆ.
     ಎತ್ತಂಗಡಿಗೊಂಡ ರಾಮಕೃಷ್ಣ ಹೆಗಡೆ ನಗರ ನಿವಾಸಿಗಳ ಸಮಿತಿ, ಸ್ಲಂ ಜನರ ಸಂಘಟನೆ ಕರ್ನಾಟಕ, ಸ್ಲಂ ಮಹಿಳೆಯರ ಸಂಘಟನೆ, ದಾವಣಗೆರೆ ಜಿಲ್ಲಾ ಪ್ರಗತಿಪರ ಸಂಘಟನೆಗಳ ಒಕ್ಕೂಟ ಹಾಗೂ ನೆರಳು ಬೀಡಿ ಕಾರ್ಮಿಕರ ಯೂನಿಯನ್ ಸಂಘಟನೆಗಳ ಮುಖಂಡರು ಶನಿವಾರ ಮಹಾನಗರ ಪಾಲಿಕೆ ಉಪ ಆಯುಕ್ತೆ ನಳಿನಿ ಅವರಿಗೆ ಈ ಕುರಿತು ಮನವಿ ಸಲ್ಲಿಸಿದರು.
     ವಸತಿ ಸೌಲಭ್ಯ ಕಲ್ಪಿಸುವವರೆಗೂ ಸಂತ್ರಸ್ತರ ಮನೆಗಳ ಬಾಡಿಗೆ ಹಣವನ್ನು ಪಾಲಿಕೆಯೇ ಭರಿಸಬೇಕು. ಸಂತ್ರಸ್ತರಿಗೆ ತಕ್ಷಣವೇ ಜಾಗ ಹಾಗೂ ಮನೆಗಳ ಹಕ್ಕುಪತ್ರ ನೀಡಬೇಕು. ಹೆಗಡೆ ನಗರದ 500 ಕುಟುಂಬಗಳಿಗೆ ಮನೆ ಕಟ್ಟಿಕೊಡಬೇಕು ಎಂದು ಒತ್ತಾಯಿಸಿದರು.
     ರಸ್ತೆ, ಚರಂಡಿ, ಒಳಚರಂಡಿ, ನೀರು, ನ್ಯಾಯಬೆಲೆ ಅಂಗಡಿ, ಆಸ್ಪತ್ರೆ, ಶಾಲೆ, ಶೌಚಗೃಹ, ಸಾರಿಗೆ ಸೌಲಭ್ಯ ಕಲ್ಪಿಸಬೇಕು. ಎಷ್ಟು ದಿನಗಳಲ್ಲಿ ಸಂತ್ರಸ್ತರಿಗೆ ಮನೆ ಕಟ್ಟಿಕೊಡುತ್ತೇವೆ ಎಂಬ ಬಗ್ಗೆ ಪಾಲಿಕೆ ಲಿಖಿತ ರೂಪದಲ್ಲಿ ನೀಡಬೇಕು. ಪ್ರತಿ 3 ತಿಂಗಳಿಗೊಮ್ಮೆ ಜಿಲ್ಲಾಧಿಕಾರಿ, ನಗರ ಪಾಲಿಕೆ ಆಯುಕ್ತರ ಸಮ್ಮುಖದಲ್ಲಿ ಸಂತ್ರಸ್ತರ ಕುಂದುಕೊರತೆ ಸಭೆ ಆಯೋಜಿಸಬೇಕು ಎಂದು ಮುಖಂಡರು ಮನವಿ ಮಾಡಿದರು.
     ಸ್ಥಳಾಂತರಗೊಂಡಿದ್ದ ನಿವಾಸಿಗಳು ಗಾಳಿ, ಮಳೆಯಿಂದಾಗಿ ಬಿದ್ದ ಶೆಡ್‌ಗಳ ಸಾಮಗ್ರಿಯೊಂದಿಗೆ ಹೆಗಡೆ ನಗರಕ್ಕೆ ವಾಪಸ್ ಬಂದ ಹಿನ್ನೆಲೆಯಲ್ಲಿ ಸ್ಥಳಾಂತರಗೊಂಡ ಜಾಗದಲ್ಲೇ ತಾತ್ಕಾಲಿಕವಾಗಿ ಒಂದೇ ಕಡೆ ಟೆಂಟ್‌ಗಳನ್ನು ನಿರ್ಮಿಸುತ್ತಿದ್ದಾರೆ.
     ಹಲವು ಬಾರಿ ಪ್ರತಿಭಟನೆ ನಡೆಸಿದರೂ ಚುನಾವಣೆ ನೀತಿ ಸಂಹಿತೆ ಕಾರಣದಿಂದ ಮುಂದೂಡುತ್ತಾ ಬರಲಾಗಿದೆ. ಈಗ ಮಳೆ, ಗಾಳಿ ಬಂದರೆ ಸಂತ್ರಸ್ತರು ಎಲ್ಲಿ ಹೋಗಬೇಕು. ಕೂಡಲೇ ಸಭೆ ಕರೆದು ನಮ್ಮ ಹಕ್ಕೊತ್ತಾಯಗಳ ಬಗ್ಗೆ ಚರ್ಚೆ ನಡೆಸಬೇಕು ಎಂದು ನೆರಳು ಬೀಡಿ ಕಾರ್ಮಿಕರ ಯೂನಿಯನ್ ಅಧ್ಯಕ್ಷೆ ಜಬೀನಾಖಾನಂ ಆಗ್ರಹಿಸಿದರು.
     ಸಿಪಿಐ ಜಿಲ್ಲಾ ಕಾರ್ಯದರ್ಶಿ ಆವರೆಗೆರೆ ಚಂದ್ರು, ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಹೆಗ್ಗೆರೆ ರಂಗಪ್ಪ, ಸ್ಲಂ ಜನರ ಸಂಘನೆ ಕರ್ನಾಟಕದ ಎಂ. ಕರಿಬಸಪ್ಪ, ಶಿರೀನ್, ನೂರ್ ಫಾತಿಮಾ, ನಿವಾಸಿಗಳಾದ ಅಸ್ಲಂ, ಸುಹೀಲ್, ಮೊಹಮ್ಮದ್ ಅಲಿ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts