101 ಬಾವಿಗಳಿದ್ದ ಪ್ರದೇಶದಲ್ಲಿ ದೇವಳ: ಇಂದಿನಿಂದ ನಾಲ್ಕೂರು ಮಿಯ್ಯರು ಜಂಗಮೋತ್ಸವ

kokkarne jangameshwara
ಶ್ರೀ ಸಹಪರಿವಾರ ಜಂಗಮೇಶ್ವರ ದೇವರು ನಾಲ್ಕೂರು-ಮಿಯ್ಯರು.
Published on

ಅನಂತ ನಾಯಕ್ ಮುದ್ದೂರು ಕೊಕ್ಕರ್ಣೆ
ಉಡುಪಿ ಜಿಲ್ಲೆಯ ಬ್ರಹ್ಮಾವರ ತಾಲೂಕಿನ ನಾಲ್ಕೂರು ಗ್ರಾಮದ ಮಿಯ್ಯರು ಎಂಬಲ್ಲಿ ಪುರಾತನ ಸಾವಿರಾರು ವರ್ಷ ಇತಿಹಾಸ ಹೊಂದಿರುವ ಜಂಗಮೇಶ್ವರ ದೇವಸ್ಥಾನದ ಜಂಗಮೋತ್ಸವವು ಮಾರ್ಚ್ 8 ಮತ್ತು 9ರಂದು ಜರುಗಲಿರುವುದು.

ಶ್ರೀಕ್ಷೇತ್ರದಲ್ಲಿ ನಡೆಯುವ ಸೇವೆಗಳು

ಎಳ್ಳೆಣ್ಣೆ ಸೇವೆ, ಮಂಗಳಾರತಿ, ಕುಂಕುಮಾರ್ಚನೆ, ಬಿಲ್ವಾರ್ಚನೆ, ಪಂಚಾಮೃತ ಅಭಿಷೇಕ, ರುದ್ರಾಭಿಷೇಕ, ವಾಹನ ಪೂಜೆ, ನಿತ್ಯ ಪೂಜೆ, ಸಂಕ್ರಾಂತಿ ಪೂಜೆ, ರಂಗಪೂಜೆ ಇತ್ಯಾದಿ.

ಜಂಗಮೋತ್ಸವ ಧಾರ್ಮಿಕ ಕಾರ್ಯಕ್ರಮಗಳು

ಜಂಗಮೋತ್ಸವ ಧಾರ್ಮಿಕ ಕಾರ್ಯಕ್ರಮಗಳು ದೇವಸ್ಥಾನದ ಪ್ರಧಾನ ಅರ್ಚಕ ಶಶಾಂಕ ಭಟ್ ಮತ್ತು ಶ್ರೀಕಾಂತ್ ಭಟ್ ನೇತೃತ್ವದಲ್ಲಿ ಜರುಗಲಿರುವುದು. ಮಾರ್ಚ್ 8ರಂದು ಬೆಳಗ್ಗೆ ರುದ್ರಾಭಿಷೇಕ, ನಾಗ ಸಾನ್ನಿಧ್ಯದಲ್ಲಿ ನವಕ ಪ್ರಧಾನ, ಮಧ್ಯಾಹ್ನ ಮಹಾಪೂಜೆ, ತುಲಾಭಾರ, ಸಂಜೆ ಭಜನೆ ನಡೆಯಲಿದೆ. ಮಾರ್ಚ್ 9ರಂದು ಬೆಳಗ್ಗೆ ಗುರುಗಣಪತಿ ಪೂಜೆ, ಸ್ವಸ್ತಿ ಪುಣ್ಯಾಹ ವಾಚನಾ, ಗಣಪತಿ ಹಾಗೂ ವನದುರ್ಗಾ ಹೋಮ, ಜಂಗಮೇಶ್ವರನ ಸಾನ್ನಿಧ್ಯದಲ್ಲಿ ಪಂಚವಿಂಶತಿ ಕಲಶ, ಶತರುದ್ರಾಭಿಷೇಕ, ಕಲಾತತ್ವ ಹೋಮ, ಕಲಶಾಭಿಷೇಕ, ಮಧ್ಯಾಹ್ನ ಮಹಾಮಂಗಳಾರತಿ, ಮಹಾಅನ್ನಸಂತರ್ಪಣೆ, ಭಜನಾ ಮೆರವಣಿಗೆಯೊಂದಿಗೆ ರಥೋತ್ಸವ ನಡೆಯಲಿದೆ.

ರಾತ್ರಿ ಧಾರ್ಮಿಕ ಸಭಾ ಕಾರ್ಯಕ್ರಮದ ಅಧ್ಯಕ್ಷತೆ ದೇವಳ ಉತ್ಸವ ಸಮಿತಿ ಅಧ್ಯಕ್ಷ ಶಶಿಧರ ಶೆಟ್ಟಿಗಾರ್ ವಹಿಸುವರು. ಶಾಸಕ ಯಶ್‌ಪಾಲ್ ಎ.ಸುವರ್ಣ, ದೇವಳ ಗೌರವಾಧ್ಯಕ್ಷ ಸಂತೋಷ್ ಹೆಗ್ಡೆ ಮಾರಾಳಿ, ಜಿಪಂ ನಿಕಟಪೂರ್ವ ಸದಸ್ಯ ಪ್ರತಾಪ್ ಹೆಗ್ಡೆ ಮಾರಾಳಿ, ನಾಗಾರಾಧಕ ಡಾ.ಬಾಲಕೃಷ್ಣ ವೈದ್ಯ ಮುದ್ದೂರು, ನಾಲ್ಕೂರು ಗ್ರಾಪಂ ಅಧ್ಯಕ್ಷೆ ಪ್ರತಿಮಾ ರವಿಚಂದ್ರ ಆಚಾರ್ಯ, ನೇತಾಜಿ ಸೇವಾ ವೇದಿಕೆ ಅಧ್ಯಕ್ಷ ನಾಗೇಂದ್ರ ಆಚಾರ್ಯ, ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಶಿಕ್ಷಕ ಎನ್.ಕರುಣಾಕರ ಶೆಟ್ಟಿ ಕಜ್ಕೆ, ಉದ್ಯಮಿ ಕಾಶಿನಾಥ್ ಶೆಣೈ ಕಜ್ಕೆ, ಸುಧಾಕರ ಶೆಟ್ಟಿ ಮಿಯ್ಯರು ಮತ್ತಿತರರು ಉಪಸ್ಥಿತರಿರುವರು.
ರಾತ್ರಿ ರಂಗಪೂಜಾಬಲಿ, ಕಲಾಸಂಗಮ ಕಲಾವಿದರಿಂದ ಶಿವದೂತ ಗುಳಿಗ ಕನ್ನಡ ನಾಟಕ, ಹಣಬು ಸೇವೆ ಮುಂತಾದ ಕಾರ್ಯಕ್ರಮ ಜರುಗಲಿರುವುದು ಎಂದು ಉತ್ಸವ ಸಮಿತಿಯ ಅಧ್ಯಕ್ಷ ಶಶಿಧರ ಶೆಟ್ಟಿಗಾರ್ ಮತ್ತು ಗೌರವ ಅಧ್ಯಕ್ಷ ಸಂತೋಷ್ ಹೆಗ್ಡೆ ಮಾರಾಳಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಧೀಂಸಾಲ್ ಪದ್ಯ ಜತೆ ಜಾಗರಣೆ

ಇಲ್ಲಿ ವಿಶೇಷವಾಗಿ ಹಣಬು ಸೇವೆ ಜರುಗುತ್ತದೆ. ದೇವರ ಮುಂಭಾಗದಲ್ಲಿ ಬೆಳಗಿದ ಮಂಗಳಾರತಿಯನ್ನು ದೇವಸ್ಥಾನದ ಮುಂಭಾಗದಲ್ಲಿ ಮಾಡಿದ ಕಾಮನ ಪ್ರತಿರೂಪಕ್ಕೆ ತಾಗಿಸಲಾಗುತ್ತದೆ. ನಂತರ ತಂಡ ತಂಡವಾಗಿ ಊರಿನಲ್ಲಿ ಇರುವ ಮನೆಗೆ ತೆರಳುತ್ತಾರೆ. ಹೀಗೆ ಸಾಗುವಾಗ ಧೀಂಸಾಲ್‌ಗಳಂತಹ ಪದ್ಯಗಳನ್ನು ಹಾಡುತ್ತಾ ಶಿವರಾತ್ರಿ ಜಾಗರಣೆ ಪ್ರಾರಂಭವಾಗುತ್ತದೆ. ತಿರುಗಾಟದಲ್ಲಿ ದೊರೆತ ಅಕ್ಕಿ, ಭತ್ತ, ಕಾಯಿ, ತರಕಾರಿ, ಕಾಣಿಕೆ ಮುಂತಾದವುಗಳನ್ನು ದೇವಸ್ಥಾನಕ್ಕೆ ತಂದು ಏಲಂ ಮಾಡಿ ಹಣವನ್ನು ದೇವಸ್ಥಾನಕ್ಕೆ ಒಪ್ಪಿಸಲಾಗುತ್ತದೆ. ಮೂಲ ಮನೆ, ಕಟ್ಟುಕಟ್ಟಲೆ ಮನೆ ಮುಂತಾದ ಮನೆಗಳಿಗೆ ಕಡ್ಡಾಯವಾಗಿ ತೆರಳಲೇಬೇಕು. ಈ ಆಚರಣೆಯಲ್ಲಿ ಜಾತಿ, ಮತ ಅಂತರವಿರುವುದಿಲ್ಲ ಎಂದು ಹಿರಿಯರಾದ ಎನ್.ಕರುಣಾಕರ ಶೆಟ್ಟಿ ಕಜ್ಕೆ ತಿಳಿಸಿದ್ದಾರೆ.

101 ಬಾವಿಗಳಿದ್ದ ಪ್ರದೇಶ

ದೇವಸ್ಥಾನವು 2015ರಲ್ಲಿ ಗ್ರಾಮಸ್ಥರು ಮತ್ತು ಭಕ್ತರು, ದಾನಿಗಳ ನೆರವಿನಿಂದ ಜೀರ್ಣೋದ್ಧಾರಗೊಂಡಿತು. ಈ ಸ್ಥಳದಲ್ಲಿ ಜಂಗಮರು ವಾಸಿಸುತ್ತಿದ್ದುದರಿಂದ ಜಂಗಮರಜೆಡ್ಡು ಎನ್ನುವ ಹೆಸರು ಬಂದಿದ್ದು ಲಿಖಿತ ಕುರುಹು ಲಭ್ಯವಿಲ್ಲ. ಸುತ್ತಮುತ್ತಲ ಪ್ರದೇಶಗಳಲ್ಲಿ 101 ಬಾವಿಗಳು ಇದ್ದ ಕುರುಹುಗಳಿವೆ. ಈ ಬಾವಿಯು ಕಲ್ಲು ಚಪ್ಪಡಿಗಳಿಂದ ಮುಚ್ಚಲ್ಪಟ್ಟಿತ್ತು. ಶಿಥಿಲಾವಸ್ಥೆಯಲ್ಲಿದ್ದ ದೇವಾಲಯದ ತೀರ್ಥನಾಳ, ಅಡಿಕಲ್ಲು, ಆನೆ ಸೊಂಡಿಲು ತರಹದ ಚಪ್ಪಡಿ, ಕಲ್ಲುಕಂಬಗಳು, ಲಿಂಗ, ಗಂಟೆ ಮುಂತಾದವುಗಳು ದೊರೆತಿದೆ. ಅಷ್ಟಮಂಗಲ ಪ್ರಶ್ನಾ ಚಿಂತನೆಯಲ್ಲಿ ತೋರಿಬಂದಂತೆ ದೇವಸ್ಥಾನ ಜೀರ್ಣೋದ್ಧಾರಗೊಂಡಿದೆ. ಇಲ್ಲಿನ ಕಾರಣಿಕವೆಂದರೆ ಪವಾಡ ರೀತಿಯಲ್ಲಿ ಕೆಲವೇ ಕೆಲವು ತಿಂಗಳಲ್ಲಿ ದೇವಾಲಯ ನಿರ್ಮಾಣಗೊಂಡಿರುವುದು.

2014ಕ್ಕಿಂತ ಮೊದಲು ಪಾಳು ಬಿದ್ದಿದ್ದ ಈಶ್ವರನ ದೇವಸ್ಥಾನವನ್ನು 2015ರಲ್ಲಿ ಊರ-ಪರವೂರ ದಾನಿಗಳ ಸಹಾಯದಿಂದ ಒಂದು ಕೋಟಿ ರೂ. ವೆಚ್ಚದಲ್ಲಿ ಜೀರ್ಣೋದ್ಧಾರ ಮಾಡಲಾಯಿತು. ಕೆಲವೊಂದು ಅಗತ್ಯ ಕಾಮಗಾರಿಗಳು ಬಾಕಿ ಉಳಿದಿರುವುದರಿಂದ ಅದನ್ನು ಪೂರ್ಣಗೊಳಿಸಲು ಸುಮಾರು 25 ಲಕ್ಷ ರೂ. ಅವಶ್ಯಕತೆಯಿದೆ. ಅನ್ನಸಂತರ್ಪಣೆಯ ಅಡುಗೆ ಕೋಣೆ, ರಥದ ಕೊಠಡಿ, ಕಂಪೌಂಡ್ ಗೋಡೆ ಕಾಮಗಾರಿಗಳಿಗೆ ಭಕ್ತರು ಸಹಕರಿಸಬೇಕಿದೆ.-ಸಂತೋಷ್ ಹೆಗ್ಡೆ ಮಾರಾಳಿ ಗೌರವಾಧ್ಯಕ್ಷರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net