ಕನ್ನಡ ಸಾಹಿತ್ಯ ಪರಿಷತ್ ಚುನಾವಣೆ; ರಾಜಧಾನಿ ಬೆಂಗಳೂರಲ್ಲೇ ಯಾಕೆ ಹೀಗಾಯ್ತು?!

Kasapa
Published on

ಬೆಂಗಳೂರು: ಇಂದು ರಾಜ್ಯಾದ್ಯಂತ ನಡೆದ ಕನ್ನಡ ಸಾಹಿತ್ಯ ಪರಿಷತ್ ಚುನಾವಣೆಯ ಮತದಾನ ಪ್ರಮಾಣ ನಿಜಕ್ಕೂ ಚಿಂತೆ ಹಾಗೂ ಚಿಂತನೆಗೆ ಹಚ್ಚುವಂತೆ ಮಾಡಿದೆ. ಮಾತ್ರವಲ್ಲ ರಾಜಧಾನಿ ಬೆಂಗಳೂರಿನಲ್ಲೇ ಯಾಕೆ ಹೀಗಾಯಿತು ಎಂಬ ಪ್ರಶ್ನೆಯನ್ನೂ ಮೂಡಿಸಿದೆ.

ಕನ್ನಡ ಸಾಹಿತ್ಯ ಪರಿಷತ್ ಚುನಾವಣೆಯಲ್ಲಿ ಈ ಸಲ ಸುಮಾರು ಅರ್ಧಕ್ಕರ್ಧ ಅಂದರೆ ಒಟ್ಟು ಶೇ.52.09 ಮತದಾನವಾಗಿದೆ. 2012ರಲ್ಲಿ ಶೇ.59 ಮತದಾನವಾಗಿತ್ತು. ಈ ಪ್ರಮಾಣ 2016ರಲ್ಲಿ ಶೇ.57ಕ್ಕೆ ಕುಸಿದು ಇದೀಗ ಶೇ.52ಕ್ಕಿಳಿದಿದೆ. 2016ರಲ್ಲಿ ಒಟ್ಟು 1.89 ಲಕ್ಷ ಮತದಾರರಲ್ಲಿ 1.08 ಲಕ್ಷ ಮತದಾರರು ತಮ್ಮ ಹಕ್ಕು ಚಲಾಯಿಸಿದ್ದರು. ಈ ಬಾರಿ 3.10 ಲಕ್ಷ ಮತದಾರರಲ್ಲಿ 1.59 ಲಕ್ಷ ಮತದಾರರು ಮತ ಚಲಾಯಿಸಿದ್ದಾರೆ. ಅಂದರೆ ಸತತ ಎರಡು ಅವಧಿಗೂ ಮತದಾನ ಪ್ರಮಾಣದಲ್ಲಿ ಇಳಿಕೆಯಾಗಿದೆ.

ಇನ್ನೂ ಬೇಸರದ ಸಂಗತಿ ಎಂದರೆ ಕನ್ನಡ ಅತಿ ಹೆಚ್ಚು ಸಂಕಷ್ಟಕ್ಕೆ ಒಳಗಾಗಿದೆ ಎಂದು ಹೇಳಲಾಗುವ ರಾಜಧಾನಿ ಬೆಂಗಳೂರಿನಲ್ಲಿ ಅತಿಕಡಿಮೆ ಮತದಾನವಾಗಿದ್ದು, ಮತಗಳ ಲೆಕ್ಕಾಚಾರದಲ್ಲಿ ಬೆಂಗಳೂರು ಕಡೆಯ ಸ್ಥಾನದಲ್ಲಿದೆ.

ಬೆಂಗಳೂರಿನಲ್ಲಿ ಕಳೆದ ವರ್ಷ ಶೇ.35ರಷ್ಟಿದ್ದ ಮತದಾನದ ಪ್ರಮಾಣ ಈ ಬಾರಿ ಶೇ.28.88ಕ್ಕೆ ಕುಸಿದಿದೆ. ಅದರಲ್ಲೂ ವಿಧಾನಸಭಾ ಕ್ಷೇತ್ರವಾರು ಮತಗಟ್ಟೆಗಳನ್ನು ವಿಕೇಂದ್ರೀಕರಣ ಮಾಡಿದ್ದರೂ ಕನ್ನಡ ಸಾಹಿತ್ಯ ಪರಿಷತ್ತಿನ ಕುರಿತು ಮತದಾರರಲ್ಲಿ ನಿರಾಸಕ್ತಿ ಮೂಡಿರುವುದು ಆತಂಕ ಮೂಡಿಸಿದೆ. ಬೆಂಗಳೂರಿನಲ್ಲಿ ಕಳೆದ ವರ್ಷ ಒಟ್ಟು 26,714 ಮತದಾರರಲ್ಲಿ 9,478 ಮತಗಳು ಚಲಾವಣೆಯಾಗಿದ್ದವು. ಆದರೆ ಈ ಬಾರಿ 36,491 ಮತಗಳಲ್ಲಿ ಕೇವಲ 10,538 ಮತಗಳು ಚಲಾವಣೆಯಾಗಿವೆ. ಕೊಡಗು ಜಿಲ್ಲೆಯಲ್ಲಿ ಅತಿ ಹೆಚ್ಚು (ಶೇ.71.18) ಮತದಾನವಾಗಿದ್ದರೆ ಬೆಂಗಳೂರು ಕಡೆಯ ಸ್ಥಾನದಲ್ಲಿದೆ.

ಜಿಲ್ಲಾವಾರು ಮತದಾನ

  • ಬೆಂಗಳೂರು ನಗರ: 28.88
  • ಬೆಂ.ಗ್ರಾಮಾಂತರ: 58.4
  • ಕೋಲಾರ: 70.42
  • ಚಿಕ್ಕಬಳ್ಳಾಪುರ: 66.47
  • ರಾಮನಗರ: 56.90
  • ತುಮಕೂರು: 51.94
  • ಚಿತ್ರದುರ್ಗ: 59.43
  • ದಾವಣಗೆರೆ: 45.49
  • ಶಿವಮೊಗ್ಗ: 59.26
  • ಮೈಸೂರು: 42.76
  • ಚಾಮರಾಜನಗರ: 45.23
  • ಮಂಡ್ಯ: 60.50
  • ಹಾಸನ: 62.52
  • ಚಿಕ್ಕಮಗಳೂರು: 55.67
  • ಕೊಡಗು: 71.18
  • ಉಡುಪಿ: 62.00
  • ಬೆಳಗಾವಿ: 43.12
  • ಉತ್ತರ ಕನ್ನಡ: 59.20
  • ಗದಗ : 67.56
  • ಧಾರವಾಡ: 48.27
  • ಹಾವೇರಿ: 67.96
  • ವಿಜಯಪುರ: 57.65
  • ಬಾಗಲಕೋಟೆ: 53.53
  • ಕಲಬುರಗಿ: 47.30
  • ಯಾದಗಿರಿ: 35.91
  • ರಾಯಚೂರು: 63.30
  • ಕೊಪ್ಪಳ: 64.74
  • ಬಳ್ಳಾರಿ: 45.49
  • ಬೀದರ್: 59.58
  • ಒಟ್ಟು: 52.09
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net