

ದಾವಣಗೆರೆ: ರಾಷ್ಟ್ರೀಯ ಹೆದ್ದಾರಿಯಲ್ಲಿ ನೀರು ನಿಂತ ಪರಿಣಾಮವಾಗಿ ಎರಡು ಕಾರುಗಳು ಪಲ್ಟಿಯಾದ ಘಟನೆ ಸಂಭವಿಸಿದೆ. ದಾವಣಗೆರೆ ತಾಲೂಕಿನ ಆನಗೋಡು ಗ್ರಾಮದ ರಾಷ್ಟ್ರೀಯ ಹೆದ್ದಾರಿ-4ರ ಆನಗೋಡು ಬಳಿ ಈ ಅಪಘಾತ ಸಂಭವಿಸಿದೆ.
ರಾಷ್ಟ್ರೀಯ ಹೆದ್ದಾರಿಯಲ್ಲಿ ಸುಗಮವಾಗಿ ಹರಿಯದೆ ನೀರು ನಿಂತಿದ್ದರಿಂದಾಗಿ ಎರಡು ಕಾರುಗಳು ಪಲ್ಟಿಯಾಗಿವೆ. ಕಾರು ಪಲ್ಟಿಯಾದರೂ ಕಾರಿನಲ್ಲಿದ್ದವರು ಆಶ್ಚರ್ಯಕರ ರೀತಿಯಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ನಿರ್ಲಕ್ಷ್ಯದಿಂದ ಹಾಗೂ ಅವೈಜ್ಞಾನಿಕ ಕಾಮಗಾರಿಯಿಂದಾಗಿ ಈ ಅಪಘಾತ ಸಂಭವಿಸಿದೆ. ಟೋಲ್ ಫೀ ಕಟ್ಟಿಸಿಕೊಂಡರೂ ರಸ್ತೆಗಳು ಪ್ರಯಾಣಕ್ಕೆ ಯೋಗ್ಯವಾಗಿಲ್ಲ. ಮಳೆ ನೀರು ಸುಗಮವಾಗಿ ಹರಿದು ಹೋಗುವ ವ್ಯವಸ್ಥೆ ಇಲ್ಲ. ಇದು ವಾಹನ ಸವಾರರ ಜೀವಕ್ಕೆ ಸಂಚಕಾರ ತಂದಿದೆ ಎಂದು ಆರೋಪಿಸಿರುವ ಸಾರ್ವಜನಿಕರು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳಿಗೆ ಹಿಡಿಶಾಪ ಹಾಕಿದ್ದಾರೆ.