

ಬೆಂಗಳೂರು: ದುಷ್ಕರ್ಮಿಗಳ ಗ್ಯಾಂಗ್ನಿಂದ ಮಾರಣಾಂತಿಕ ಹಲ್ಲೆಗೆ ಒಳಗಾಗಿದ್ದ ಆರ್ಟಿಐ ಕಾರ್ಯಕರ್ತನ ವೆಂಕಟೇಶ್ (50) ಚಿಕಿತ್ಸೆ ಫಲಿಸದೆ ಅಸುನೀಗಿದ್ದಾರೆ.
ಮಾಗಡಿ ರಸ್ತೆ ತಾವರೆಕೆರೆಯ ವೆಂಕಟೇಶ್ ತೋಟದಲ್ಲಿ ಇದ್ದಾಗ ಜುಲೈ 15ರ ಬೆಳಗ್ಗೆ 11.30ರಲ್ಲಿ ದುಷ್ಕರ್ಮಿಗಳ ಗ್ಯಾಂಗ್ ದಾಳಿ ನಡೆಸಿ ಮಾರಕಾಸ್ತ್ರಗಳಿಂದ ಕೈ ಮತ್ತು ಕಾಲು ಕತ್ತರಿಸಿದ್ದರು. ಚೀರಾಟ, ಕೂಗಾಟ ಕೇಳಿಸಿಕೊಂಡ ಸ್ಥಳೀಯರು ಗಾಯಾಳುವನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದರು. ವೈದ್ಯರು ಶಸ್ತ್ರಚಿಕಿತ್ಸೆ ನಡೆಸಿ ವೆಂಕಟೇಶ್ ಮುಂಗೈ ಮತ್ತು ಮೊಣಕಾಲನ್ನು ಮರು ಜೋಡಣೆ ಮಾಡಿದ್ದರು. ತುರ್ತು ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ವೆಂಕಟೇಶ್, ಚಿಕಿತ್ಸೆ ಫಲಿಸದೆ ಭಾನುವಾರ ಸಾವಿಗೀಡಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಆರ್ಟಿಐ ಕಾರ್ಯಕರ್ತನ ಹತ್ಯೆ ಪ್ರಕರಣದಲ್ಲಿ ಆರೋಪಿಗಳ ಬಂಧನಕ್ಕೆ ವಿಶೇಷ ತಂಡ ಬೀಸಿದೆ. ಆರ್ಟಿಐ ವಿಚಾರಕ್ಕೂ, ಹಣಕಾಸಿನ ಮತ್ತು ವೈಯಕ್ತಿಕ ವಿಚಾರ ಎಲ್ಲ ಆಯಾಮದಲ್ಲಿ ತನಿಖೆ ನಡೆಸುತ್ತಿದ್ದು, ಆರೋಪಿಗಳ ಸುಳಿವು ಲಭ್ಯವಾಗಿದೆ. ಶೀಘ್ರದಲ್ಲೇ ಬಂಧಿಸುವುದಾಗಿ ಅಧಿಕಾರಿಗಳು ಭರವಸೆ ನೀಡಿದ್ದಾರೆ.