'ನಿನ್ನಷ್ಟಕ್ಕೆ ನೀನಿದ್ಬಿಡು, ಇಲ್ಲಂದ್ರೆ ಗತಿ ಕಾಣಿಸ್ತೇನೆ​' ಅಂತ ಬೆದರಿಕೆ ಹಾಕಿದ ಭೂಗತ ಪಾತಕಿ; ಸಾಮಾಜಿಕ ಹೋರಾಟಗಾರನ ದೂರು

Untitled-1
ಕಲಿ ಯೋಗೇಶ್, ರವಿ ಶೆಟ್ಟಿ
Published on

ಬೆಂಗಳೂರು: ಭೂಗತ ಪಾತಕಿಯೊಬ್ಬ ಕೊಲೆ ಬೆದರಿಕೆ ಹಾಕಿದ್ದಾನೆ ಎಂಬುದಾಗಿ ಸಾಮಾಜಿಕ ಹೋರಾಟಗಾರರೊಬ್ಬರು ಪೊಲೀಸರಿಗೆ ದೂರು ನೀಡಿದ್ದಾರೆ. ನಾನು ಅಂಡರ್​ವರ್ಲ್ಡ್ ಡಾನ್​ ಕಲಿ ಯೋಗೇಶ್​ ಎಂಬುದಾಗಿ ಹೇಳಿಕೊಂಡ ವ್ಯಕ್ತಿ ಇಂಟರ್​ನೆಟ್​ ಕರೆ ಮೂಲಕ ಮಾತನಾಡಿ ಬೆದರಿಕೆ ಹಾಕಿದ್ದಾನೆ ಎಂಬುದಾಗಿ ಕರ್ನಾಟಕ ರಾಜ್ಯ ಕಾರ್ಮಿಕ ಪರಿಷತ್ ಎಂಬ ಸಂಘಟನೆಯ ಅಧ್ಯಕ್ಷ ರವಿ ಶೆಟ್ಟಿ ಬೈಂದೂರು ಎಂಬವರು ಬೆಂಗಳೂರಿನ ಹೈಗ್ರೌಂಡ್ಸ್​ ಪೊಲೀಸ್​ ಠಾಣೆಯಲ್ಲಿ ದೂರು ನೀಡಿದ್ದಾರೆ.

ಬೋಳ ಸಹಕಾರಿ ವ್ಯವಸಾಯ ಸಂಘದ ವಿಚಾರಕ್ಕೆ ಸಂಬಂಧಿಸಿದಂತೆ ಈ ಬೆದರಿಕೆ ಕರೆ ಬಂದಿದೆ. ಬೋಳ ಸೊಸೈಟಿ ವಿಷಯಕ್ಕೆ ಹೋದರೆ ಸರಿ ಇರುವುದಿಲ್ಲ. ನಿನ್ನಷ್ಟಕ್ಕೆ ನೀನಿದ್ದರೆ ಒಳ್ಳೇದು, ಇಲ್ಲಂದ್ರೆ ಒಂದು ಗತಿ ಕಾಣಿಸ್ತೇನೆ. ನಾನು ಅಂಡರ್​ವರ್ಲ್ಡ್​ ಡಾನ್​ ಕಲಿ ಯೋಗೇಶ್, ನಾನು ಯಾರು ಅಂತ ಗೊತ್ತಾಗ್ಬೇಕಿದ್ರೆ ಗೂಗಲ್​ನಲ್ಲಿ ಸರ್ಚ್ ಮಾಡು ಎಂಬುದಾಗಿ ಕರೆ ಮಾಡಿರುವ ವ್ಯಕ್ತಿ ಬೆದರಿಸಿರುವುದು ವಾಯ್ಸ್​ ಕ್ಲಿಪ್​ನಲ್ಲಿ ಮುದ್ರಿತವಾಗಿದೆ.

ಬೋಳ ಸೊಸೈಟಿಯಲ್ಲಿ ಅನ್ಯಾಯ ನಡೆದಿರುವುದರಿಂದ ಒಬ್ಬ ಸಾಮಾಜಿಕ ಹೋರಾಟಗಾರನಾಗಿ ನ್ಯಾಯಕ್ಕಾಗಿ ಆಗ್ರಹಿಸಿ ಮಧ್ಯಪ್ರವೇಶಿಸಿದ್ದೇನೆ ಎಂದು ರವಿ ಶೆಟ್ಟಿ ಹೇಳಿಕೊಂಡಿದ್ದಕ್ಕೆ, ನೀನೊಬ್ನೇ ಸಾಮಾಜಿಕ ಹೋರಾಟಗಾರ ಅಲ್ಲ, ಬೋಳ ಸೊಸೈಟಿ ತಂಟೆಗೆ ಹೋದರೆ ಹುಡುಗರನ್ನು ಕಳಿಸಿ ಕಾಡಿನೊಳಗೆ ಹೊಡೆಸಿ ಬಿಡುತ್ತೇನೆ ಎಂಬುದು ಬೆದರಿಕೆ ಕರೆಯಲ್ಲಿ ದಾಖಲಾಗಿದೆ. ಈ ಸಂಬಂಧ ರಕ್ಷಣೆ ಕೋರಿ ರವಿ ಶೆಟ್ಟಿ ಪೊಲೀಸರಿಗೆ ದೂರು ನೀಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net