ಆತ್ಮಹತ್ಯೆ ತಡೆ ದಿನದ ತಿಂಗಳಲ್ಲೇ ಮೇಲಿಂದ ಮೇಲೆ ಆತ್ಮಹತ್ಯೆ; ಕಳೆದ ಮೂರು ದಿನಗಳಲ್ಲೇ ರಾಜ್ಯದಲ್ಲಿ 12 ಸುಸೈಡ್​

suicide
Published on

ಬೆಂಗಳೂರು: ಸೆಪ್ಟೆಂಬರ್​ 10.. ಇದು ವಿಶ್ವ ಆತ್ಮಹತ್ಯೆ ತಡೆ ದಿನ. ಹೀಗೊಂದು ದಿನವನ್ನು ಆಚರಿಸುವ ಮೂಲಕ ಜನರಲ್ಲಿ ಆತ್ಮಹತ್ಯೆ ವಿರುದ್ಧ ಜಾಗೃತಿ ಮೂಡಿಸಲು ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ಮಾತ್ರವಲ್ಲ, ಜನರು ಆತ್ಮಹತ್ಯೆಗೆ ಮುಂದಾಗದಂತೆ ಮಾನಸಿಕವಾಗಿ ಸಜ್ಜುಗೊಳಿಸುವಂಥ ಪ್ರಯತ್ನಗಳನ್ನೂ ಮಾಡಲಾಗುತ್ತದೆ.

ಆದರೆ ದುರಂತವೆಂದರೆ, ಹೀಗೆ ಆತ್ಮಹತ್ಯೆ ತಡೆ ದಿನ ಆಚರಿಸುವ ಸೆಪ್ಟೆಂಬರ್​ ತಿಂಗಳಿನಲ್ಲೇ ರಾಜ್ಯದಲ್ಲಿ ಮೇಲಿಂದ ಮೇಲೆ ಆತ್ಮಹತ್ಯೆ ಪ್ರಕರಣಗಳು ಸಂಭವಿಸಿವೆ. ಹೆಚ್ಚುತ್ತಿರುವ ಈ ಆತ್ಮಹತ್ಯೆ ಪ್ರಕರಣಗಳಿಂದ ಆತಂಕ ಕೂಡ ಹೆಚ್ಚಾಗಿದ್ದು, ಮಾನಸಿಕವಾಗಿ ದುರ್ಬಲವಾಗಿರುವವರಲ್ಲಿ ಧೈರ್ಯ ಮೂಡಿಸಬೇಕಾದ ಅಗತ್ಯ ಅಧಿಕವಾಗಿದೆ ಎಂಬುದು ವೇದ್ಯವಾಗುತ್ತಿದೆ.

ಸೆ. 10 ಅಂದರೆ, ವಿಶ್ವ ಆತ್ಮಹತ್ಯೆ ತಡೆ ದಿನ ನಡೆದ ಒಂದೇ ವಾರಕ್ಕೆ ಬೆಂಗಳೂರಿನಲ್ಲಿ ಒಂದೇ ಕುಟುಂಬದ ಐವರು ಆತ್ಮಹತ್ಯೆ ಮಾಡಿಕೊಂಡಿದ್ದ ಪ್ರಕರಣ ಸೆ. 17ರಂದು ಬೆಳಕಿಗೆ ಬಂದಿತ್ತು. ಇವರು ಐದು ದಿನಗಳ ಹಿಂದೆಯೇ ಆತ್ಮಹತ್ಯೆ ಮಾಡಿಕೊಂಡಿದ್ದು, ವಿಷಯ ಗೊತ್ತಾಗುವಷ್ಟರಲ್ಲಿ ಶವಗಳು ಕೊಳೆತುಹೋಗಿದ್ದವು.

ಈ ಪ್ರಕರಣ ಬೆಳಕಿಗೆ ಬಂದ ಮರುದಿನವೇ ಬೆಂಗಳೂರಿನಲ್ಲಿ ಒಬ್ಬ ಹದಿಮೂರನೇ ಮಹಡಿಯಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದ. ಇದಾಗಿ ಎರಡೇ ದಿನಕ್ಕೆ ದಾವಣಗೆರೆಯಲ್ಲಿ ಮಗುವನ್ನೂ ಸೇರಿಸಿಕೊಂಡು ತಂದೆ-ತಾಯಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಇವೂ ಸೇರಿದಂತೆ ಕಳೆದ ಮೂರು ದಿನಗಳಲ್ಲಿ ರಾಜ್ಯದಲ್ಲಿ ಒಂದು ಡಜನ್ ಆತ್ಮಹತ್ಯೆ ನಡೆದಿದೆ. ಈ ಬಗ್ಗೆ ಸರ್ಕಾರ, ಅದರಲ್ಲೂ ಸಂಬಂಧಿತ ಇಲಾಖೆಗಳು ತುರ್ತು ಗಮನ ನೀಡಬೇಕಾದ ಅಗತ್ಯವಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net