

ರಾಮನಗರ: ಮದುಗೆಯಾಗಿ ಹೆಂಡತಿಯಿಂದ ಬೇರೆಯಾಗಿದ್ದ ವ್ಯಕ್ತಿ, ವಿವಾಹವಾಗಿ ಗಂಡನಿಂದ ಬೇರೆಯಾಗಿದ್ದ ಮಹಿಳೆ.. ಈ ಇಬ್ಬರೂ ಗಂಡ-ಹೆಂಡಿರ ಥರ ಒಂದೇ ಮನೆಯಲ್ಲಿದ್ದು, ಈಗಿಲ್ಲ ಎಂಬಂತಾಗಿದ್ದಾರೆ. ಅರ್ಥಾತ್, ಇಬ್ಬರ ಶವ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿವೆ.
ರಾಮನಗರ ಜಿಲ್ಲೆ ಮಾಗಡಿಯ ತಿರುಮಲ ದೇವಾಂಗ ಬೀದಿಯಲ್ಲಿನ ಮನೆಯಲ್ಲಿ ಈ ಪ್ರಕರಣ ವರದಿಯಾಗಿದೆ. ನರಸಿಂಹಮೂರ್ತಿ ರಾವ್ (35), ಹೇಮಾ (33) ಮೃತಪಟ್ಟವರು. ಇಬ್ಬರೂ ವಿವಾಹಿತರಾಗಿದ್ದರೂ ತಮ್ಮ ಮೊದಲಿನ ಸಂಗಾತಿಯಿಂದ ಪ್ರತ್ಯೇಕಗೊಂಡು ಒಟ್ಟಿಗೇ ಬಾಡಿಗೆ ಮನೆಯೊಂದರಲ್ಲಿ ನೆಲೆಸಿದ್ದರು.
ಸಾವಿಗೀಡಾಗಿರುವ ನರಸಿಂಹಮೂರ್ತಿ ರಾವ್ಗೆ ಈಗಾಗಲೇ ಮದುವೆಯಾಗಿ ಒಂದು ಮಗು ಕೂಡ ಇದೆ. ಅದಾಗ್ಯೂ ಆತ ಪತ್ನಿಯನ್ನು ಬಿಟ್ಟು ಹೇಮಾ ಜತೆ ಸಂಸಾರ ನಡೆಸುತ್ತಿದ್ದ. ಹೇಮಾ ಕೂಡ ವಿವಾಹಿತಳಾಗಿದ್ದ ಗಂಡನನ್ನು ಬಿಟ್ಟು ನರಸಿಂಹಮೂರ್ತಿ ಜೊತೆ 3 ವರ್ಷಗಳಿಂದ ವಾಸವಾಗಿದ್ದಳು.
ಆದರೆ ನಾಲ್ಕು ತಿಂಗಳಿನಿಂದ ಇಬ್ಬರ ಮಧ್ಯೆ ಆಗಾಗ ಜಗಳ ನಡೆಯತ್ತಿತ್ತು ಎನ್ನಲಾಗಿದೆ. ಇಂದು ಇಬ್ಬರ ಶವ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಇದು ಆತ್ಮಹತ್ಯೆಯೋ ಕೊಲೆಯೋ ಎಂಬುದಿನ್ನೂ ಖಚಿತವಾಗಬೇಕಿದೆ. ಹೇಮಾಳಿಗೆ ಉರುಳು ಹಾಕಿ ಬಳಿಕ ನರಸಿಂಹಮೂರ್ತಿ ನೇಣು ಹಾಕಿಕೊಂಡಿರಬಹುದು ಎಂಬ ಶಂಕೆಯೂ ಇದೆ. ಮಾಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ನಡೆಯುತ್ತಿದೆ.