

ಬೆಂಗಳೂರು: ವ್ಯಕ್ತಿಯೊಬ್ಬ ತನ್ನ ಗೆಳೆಯನನ್ನೇ ಕೊಂದು ಸಂಪ್ನಲ್ಲಿ ಬಿಸಾಕಿ ಪರಾರಿಯಾಗಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಕ್ಷುಲ್ಲಕ ಕಾರಣಕ್ಕೆ ಕೊಲೆ ನಡೆದಿರುವುದಾಗಿ ತಿಳಿಸಲಾಗಿದೆ.
ಮಿಸ್ಬಾ ಹುಸೇನ್ ಲಷ್ಕರ್ (20) ಕೊಲೆಯಾದ ವ್ಯಕ್ತಿ. ಈತ ವಿಠಲ್‌ಮಲ್ಯ ರಸ್ತೆಯ ಅದರ್ಶ ಡೆವಲಪರ್ಸ್ ನಲ್ಲಿ ಸೆಕ್ಯೂರಿಟಿ ಗಾರ್ಡ್ ಆಗಿ ಕೆಲಸ ಮಾಡುತ್ತಿದ್ದ. ಹೊಸ ವರ್ಷದ ಹಿಂದಿನ ದಿನ ಕೆಲಸಕ್ಕೆ ಹೋಗಿದ್ದ ಮಿಸ್ಬಾ ಅಂದಿನಿಂದ ನಾಪತ್ತೆಯಾಗಿದ್ದ. ಈ ಬಗ್ಗೆ ಕಬ್ಬನ್ ಪಾರ್ಕ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಇಂದು ಆತನ ಮೃತದೇಹ ಸಂಪ್ನಲ್ಲಿ ಪತ್ತೆಯಾಗಿದೆ.
ಯುವಕನ ಮೃತದೇಹ ಪತ್ತೆಯಾದ ನಂತರ ತನಿಖೆ ಚುರುಕುಗೊಳಿಸಿದಾಗ ಆರೋಪಿ ಪತ್ತೆಯಾಗಿದ್ದಾನೆ. ಯುವಕನ ಕೊಲೆಯ ನಂತರ ಆತನ ರೂಂ ಮೇಟ್ ಕಾಣೆಯಾಗಿದ್ದು, ಆತನಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ. ಆಗ ಆತ ಅಸ್ಸಾಂಗೆ ಓಡಿ ಹೋಗಿರುವುದು ಸಿಡಿಆರ್ ಚೆಕ್ ಮೂಲಕ ತಿಳಿದುಬಂದಿದೆ. ನಂತರ ಅಸ್ಸಾಂ ಪೊಲೀಸರ ಜತೆ ಸಂಪರ್ಕ ಸಾಧಿಸಿಕೊಳ್ಳಲಾಗಿದ್ದು, ಆರೋಪಿಯನ್ನು ಬಂಧಿಸಲಾಗಿದೆ.