

ಶಿವಮೊಗ್ಗ: ಕೋವಿಡ್-19 ಸೋಂಕಿಗೆ ಒಳಗಾಗಿ ಗುಣಮುಖರಾಗಿದ್ದರೂ ಈ ಕೈದಿ ಬದುಕಿ ಉಳಿಯಲಿಲ್ಲ. ಶಿವಮೊಗ್ಗದ ಕೇಂದ್ರ ಕಾರಾಗೃಹದಲ್ಲಿದ್ದ ಇಸ್ಮಾಯಿಲ್ ಖಾನ್ (72) ಇಂದು ಮೆಗ್ಗಾನ್ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.
ಶಿವಮೊಗ್ಗದ ಟ್ಯಾಂಕ್ ಮೊಹಲ್ಲಾ ನಿವಾಸಿ ಇಸ್ಮಾಯಿಲ್ ಖಾನ್ ಜಿಲ್ಲಾ ಖಜಾನೆ ಅಧಿಕಾರಿ ಆಗಿ ನಿವೃತ್ತರಾಗಿದ್ದರು. ಆದರೆ ನಿವೃತ್ತಿಗೂ ಮುನ್ನ ಭ್ರಷ್ಟಾಚಾರ ನಿಯಂತ್ರಣ ಕಾಯ್ದೆ ಅನ್ವಯ ದಾಖಲಾಗಿದ್ದ ಪ್ರಕರಣದಿಂದಾಗಿ ಇವರಿಗೆ ಜೈಲು ಶಿಕ್ಷೆಯಾಗಿತ್ತು.
ಈ ಪ್ರಕರಣದಲ್ಲಿ ಇವರಿಗೆ ಕಳೆದ ಏಪ್ರಿಲ್ 5ರಂದು 1 ವರ್ಷ ಸಾದಾ ಶಿಕ್ಷೆ ಮತ್ತು 1.5 ಲಕ್ಷ ರೂಪಾಯಿ ದಂಡ ವಿಧಿಸಿ ಶಿವಮೊಗ್ಗ ನ್ಯಾಯಾಲಯ ಆದೇಶ ಹೊರಡಿಸಿತ್ತು. ಹೀಗೆ ಜೈಲುಪಾಲಾಗಿದ್ದ ಇಸ್ಮಾಯಿಲ್ ಕೆಲವೇ ದಿನಗಳಲ್ಲಿ ಕೋವಿಡ್ ಸೋಂಕಿಗೆ ಒಳಗಾಗಿದ್ದರು. ನಂತರ ಅವರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅಲ್ಲಿ ಗುಣಮುಖರಾಗಿದ್ದರಿಂದ ಪುನಃ ಜೈಲಿಗೆ ಕರೆತರಲಾಗಿತ್ತು.
ಹೀಗೆ ಕರೊನಾದಿಂದ ಗುಣಮುಖರಾಗಿ ಕಾರಾಗೃಹಕ್ಕೆ ಮರಳಿದ್ದ ಇಸ್ಮಾಯಿಲ್ ಖಾನ್ ಆರೋಗ್ಯದಲ್ಲಿ ಮೇ 24ರಂದು ಏರುಪೇರಾಗಿತ್ತು. ಇದರಿಂದ ತೀವ್ರ ಅಸ್ವಸ್ಥಗೊಂಡ ಇವರನ್ನು ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಆಸ್ಪತ್ರೆಯಲ್ಲಿ ಚಿಕಿತ್ಸೆಯಲ್ಲಿದ್ದ ಇವರು ಇಂದು ಹೃದಯಾಘಾತಕ್ಕೆ ಒಳಗಾಗಿ ಕೊನೆಯುಸಿರೆಳೆದರು.