

ಹಾವೇರಿ: ಇನ್ನೊಬ್ಬ ಮೊಮ್ಮಗ (ಪ್ರಜ್ವಲ್ ರೇವಣ್ಣ ಹೆಸರೇಳದೆ) ಏನೋ ಮಾಡಿದಾಗ ಕಣ್ಣಲ್ಲಿ ನೀರು ಬರಲಿಲ್ಲ. ಆದರೆ ಈಗ?. ದೇವೆಗೌಡರು ದೊಡ್ಡವರಾದ ಕಾರಣ ಅವರ ಬಗ್ಗೆ ಚರ್ಚೆ ಮಾಡಲು ಹೋಗುವುದಿಲ್ಲ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್( DCM DK Shivakumar) ವ್ಯಂಗ್ಯವಾಡಿದರು.
ಶಿಗ್ಗಾಂವಿಯಲ್ಲಿ ಗುರುವಾರ (ನ.06) ಮಾಧ್ಯಮದವರ ಜತೆ ಮಾತನಾಡಿ, ದೇವೇಗೌಡರು ಈ ನಾಡಿನ ಹಿರಿಯ ರಾಜಕಾರಣಿ. ಅವರ ಬಗ್ಗೆ ಅಪಾರವಾದ ಗೌರವವಿದೆ. ನಾನೇನಾದರೂ ಲೂಟಿ ಮಾಡಿದ್ದರೆ ನನ್ನ ಕ್ಷೇತ್ರದ ಜನರು 1 ಲಕ್ಷದ 23 ಸಾವಿರ ಮತಗಳ ಅಂತರದಿಂದ 8 ಬಾರಿ ನನ್ನ ಆಯ್ಕೆ ಮಾಡುತ್ತಿದ್ದಾರಾ? ದೇವೇಗೌಡರ ಸುಪುತ್ರ ಕುಮಾರಸ್ವಾಮಿ ವಿರುದ್ದವೂ ನನ್ನನ್ನು ಆಯ್ಕೆ ಮಾಡಿದ್ದಾರೆ. ನನ್ನ ಕ್ಷೇತ್ರದ ಜನರು ನನಗೆ ದೇವರು ಇದ್ದಂತೆ. ಅವರ ಬದುಕಿನಲ್ಲಿ ಬದಲಾವಣೆ ತರಲು ಶ್ರಮ ಪಡುತ್ತಾ ಇದ್ದೇನೆ ಎಂದು ಹೇಳಿದರು.
ಮಹಾರಾಷ್ಟ್ರದ ನಾಯಕರಿಗೆ ವಿಶೇಷ ಬಸ್, ವಿಮಾನ ಆಯೋಜಿಸುವೆ
ಕರ್ನಾಟಕದಲ್ಲಿ ಗ್ಯಾರಂಟಿ ಯೋಜನೆಗಳನ್ನು ಕಾಂಗ್ರೆಸ್ ಸರ್ಕಾರ ನೀಡುತ್ತಿಲ್ಲ ಎಂದು ಮಹಾರಾಷ್ಟ್ರದಲ್ಲಿ ಆಡಳಿತರೂಡಾ ಪಕ್ಷಗಳು ಸುಳ್ಳು ಹೇಳುತ್ತಿವೆ. ಅಲ್ಲಿನ ಸರ್ಕಾರದ ಬಿಜೆಪಿ, ಶಿವಸೇನಾ (ಶಿಂಧೆ ಬಣ) ಎನ್ಸಿಪಿ (ಅಜಿತ್ ಪವಾರ್ ಬಣ) ಎಂಎಲ್ಎಗಳಿಗೆ ಕರ್ನಾಟಕಕ್ಕೆ ಭೇಟಿ ಮಾಡಲು ಬಸ್ ಅಥವಾ ವಿಶೇಷ ವಿಮಾನ ವ್ಯವಸ್ಥೆ ಮಾಡುತ್ತೇನೆ. ಅವರುಗಳು ಇಲ್ಲಿಗೆ ನೇರವಾಗಿ ಬಂದು ಜನರನ್ನು ಕೇಳಬಹುದು. ಜೊತೆಗೆ ಬಿಜೆಪಿ ಕಾರ್ಯಕರ್ತರ ಬಳಿಯೂ ಅಭಿಪ್ರಾಯ ತಿಳಿದುಕೊಳ್ಳಬಹುದು ಎಂದು ಸವಾಲು ಹಾಕಿದರು.
ನಮ್ಮ ಸಾಧನೆ ಬಗ್ಗೆ ಮಹಾರಾಷ್ಟದಲ್ಲಿ ಜಾಹೀರಾತು ನೀಡುತ್ತೇವೆ. ಅಲ್ಲಿನ ಸರ್ಕಾರದ ನಾಯಕರೆಲ್ಲಾ ಸುಳ್ಳುಗಾರರು. ಕರ್ನಾಟಕ ಮಾಡೆಲ್ ಇಡೀ ದೇಶಕ್ಕೆ ಮಾದರಿಯಾಗಿದೆ. ಇದು ಬಸವಣ್ಣನ ನಾಡು. ನಾವು ನುಡಿದಂತೆ ನಡೆಯುತ್ತೇವೆ, ನಡೆಯುತ್ತಿದ್ದೇವೆ ಎಂದರು.
ಬೊಮ್ಮಾಯಿ, ಸೋಮಣ್ಣ ಸಮಿತಿಯ ಸದಸ್ಯರೇ?
ವಕ್ಫ್ ವಿಚಾರವಾಗಿ ಜೆಪಿಸಿ (ಜಂಟಿ ಪಾರ್ಲಿಮೆಂಟ್ ಸಮಿತಿ) ರಾಜ್ಯಕ್ಕೆ ಭೇಟಿ ಕೊಟ್ಟಿರುವ ಬಗ್ಗೆ ಕೇಳಿದಾಗ “ಯಾವ ಜಂಟಿ ಪಾರ್ಲಿಮೆಂಟ್ ಸಮಿತಿ ಎನ್ನುವುದು ಇಲ್ಲ. ಕೇವಲ ಬಿಜೆಪಿಯ ನಾಯಕರು ಭೇಟಿ ಕೊಟ್ಟಿದ್ದಾರೆ. ಬೊಮ್ಮಾಯಿ, ಸೋಮಣ್ಣ ಆ ಸಮಿತಿಯಲ್ಲಿ ಇದ್ದಾರೆಯೇ? ತೇಜಸ್ವಿ ಸೂರ್ಯ ರಾಜಕೀಯಕ್ಕಾಗಿ ಹೆಲಿಕಾಪ್ಟರ್ ಅಲ್ಲಿ ಬಂದು ಹೋಗಿದ್ದಾರೆ. ಸಮಿತಿ ಭೇಟಿಯ ಬಗ್ಗೆ ಯಾವುದಾದರೂ ಅಧಿಕಾರಿಗಳಿಗೆ ತಿಳಿಸಿದ್ದಾರೆಯೇ? ಭೇಟಿ ಮಾಡಿ ಎಂದು ಯಾರಾದರೂ ಮನವಿ ಮಾಡಿದ್ದರೇ?. ಬಿಜೆಪಿ ಕಾಲದಲ್ಲಿಯೇ ಎಲ್ಲಾ ಪಹಣಿಗಳನ್ನು ಬದಲಾವಣೆ ಮಾಡಲಾಯಿತು. ಶೀಘ್ರದಲ್ಲಿಯೇ ಎಲ್ಲಾ ದಾಖಲೆಗಳನ್ನು ಬಿಡುಗಡೆ ಮಾಡುತ್ತೇವೆ ಎಂದು ಡಿಕೆಶಿ ಹೇಳಿದರು.