ತಗ್ಗಿ-ಬಗ್ಗಿ ಇರಬೇಕು ಅನ್ನುವುದಕ್ಕೆ ಬೆಂಗಳೂರನ್ನು ನಿಮ್ಮ ಜಹಗೀರು ಅಂದುಕೊಡಿದ್ದೀರಾ; DCM DK Shivakumar ವಿರುದ್ಧ R Ashok ವಾಗ್ದಾಳಿ

DK Ashok
Published on

ಬೆಂಗಳೂರು: ಜಯನಗರ (Jayanagar) ಹೊರತುಪಡಿಸಿ ಬೆಂಗಳೂರು ನಗರ ಜಿಲ್ಲೆ ವ್ಯಾಪ್ತಿಗೆ ಬರುವ 27  ವಿಧಾನಸಭಾ ಕ್ಷೇತ್ರಗಳ ರಸ್ತೆ ಅಭಿವೃದ್ಧಿಗೆ ತಲಾ 10 ಕೋಟಿ ರೂ. ಮಂಜೂರು ಮಾಡಿದ್ದ ವಿಚಾರ ರಾಜ್ಯ ರಾಜಕಾರಣದಲ್ಲಿ ಹೊಸ ತಲ್ಲಣವನ್ನೇ ಸೃಷ್ಟಿಸಿತ್ತು. ಈ ವಿಚಾರವಾಗಿ ಬಿಜೆಪಿ-ಜೆಡಿಎಸ್​ ನಾಯಕರು, ಸೆಲೆಬ್ರಿಟಿಗಳು ಡಿಸಿಎಂ ಡಿ.ಕೆ. ಶಿವಕುಮಾರ್​ (DCM DK Shivakumar) ಅವರ ನಡೆಯನ್ನು ಖಂಡಿಸಿದ್ದರು. ಇದೀಗ ಈ ವಿಚಾರ ಮತ್ತೊಂದು ಸುತ್ತಿನ ಸಂಘರ್ಷಕ್ಕೆ ನಾಂದಿ ಹಾಡಿದ್ದು, ಈ ಬಗ್ಗೆ ವಿಪಕ್ಷ ನಾಯಕ ಆರ್​. ಅಶೋಕ್​ (R Ashok) ಟ್ವೀಟ್​ ಮಾಡಿ ವಾಗ್ದಾಳಿ ನಡೆಸಿದ್ದಾರೆ.

ಬಿಬಿಎಂಪಿ ವ್ಯಾಪ್ತಿಯ ವಿಧಾನಸಭಾ ಕ್ಷೇತ್ರಗಳಿಗೆ ಅನುದಾನ ನೀಡುವಾಗ ಜಯನಗರವನ್ನು ಹೊರಗಿಟ್ಟಿರುವ ವಿಚಾರ ರಾಜಕೀಯವಾಗಿ ತೀವ್ರ ಚರ್ಚೆಗೆ ಗ್ರಾಸವಾಗಿತ್ತು. ಈ ವಿಚಾರವಾಗಿ ಡಿಸಿಎಂ ಡಿಕೆ ಶಿವಕುಮಾರ್ (DCM DK Shivakumar) ಬಳಿ ಸಂಸದ ತೇಜಸ್ವಿ ಸೂರ್ಯ (Tejasvi Surya) ಪ್ರಸ್ತಾಪಿಸಿದ್ದರು. ಆ ಸಂದರ್ಭದಲ್ಲಿ ಡಿಸಿಎಂ ನೀಡಿದ್ದ ತಗ್ಗಿ-ಬಗ್ಗಿ ನಡೆಯಬೇಕೆಂಬ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿರುವ ಆರ್​. ಅಶೋಕ್​ (R Ashok) ಈ ನಿಮ್ಮ ಒಣ ಪ್ರತಿಷ್ಠೆ, ಧಿಮಾಕು, ದರ್ಬಾರು ಎಲ್ಲ ಬಿಟ್ಟು ಜನರ ಸೇವೆ ಮಾಡುವ ಮನೋಭಾವನೆ ಬೆಳೆಸಿಕೊಳ್ಳಿ. ಯಾವುದೇ ಕ್ಷೇತ್ರದ ಬಗ್ಗೆ ತಾರತಮ್ಯ ಮಾಡದೆ ಸಚಿವರಾಗಿ ನಿಮ್ಮ ಕರ್ತವ್ಯ ನಿರ್ವಹಿಸಿ ಎಂದು ಚಾಟಿ ಬೀಸಿದ್ದಾರೆ. 

Capture

ಈ ಬಗ್ಗೆ ಟ್ವೀಟ್​ ಮಾಡಿರುವ ಆರ್​. ಅಶೋಕ್ (R Ashok)​, ಅನುದಾನ ಬೇಕಾದರೆ ನನ್ನ ಬಳಿ ತಗ್ಗಿ ಬಗ್ಗಿ ನಡೆಯಬೇಕು - ಡಿಸಿಎಂ ಸಾಹೇಬರ ಲೇಟೆಸ್ಟ್ ನುಡಿಮುತ್ತುಗಳು. ಸನ್ಮಾನ್ಯ ಡಿ.ಕೆ. ಶಿವಕುಮಾರ್​ (DK Shivakumar) ಅವರೇ, ನಿಮ್ಮ ಬಳಿ ತಗ್ಗಿ-ಬಗ್ಗಿ ಇರಬೇಕು ಅನ್ನುವುದಕ್ಕೆ ಬೆಂಗಳೂರು ನಗರವನ್ನು ನಿಮ್ಮ ಜಹಗೀರು ಅಂದುಕೊಡಿದ್ದೀರಾ? ಅಧಿಕಾರ ಎನ್ನುವುದು ಮತದಾರರು ಕೊಟ್ಟಿರುವ ಭಿಕ್ಷೆ, ಸಂವಿಧಾನ ಕೊಟ್ಟಿರುವ ಜವಾಬ್ದಾರಿಯೇ ಹೊರತು ಪಾಳೆಗಾರಿಕೆ ಅಲ್ಲ.

ಪ್ರಜಾಪ್ರಭುತ್ವದಲ್ಲಿ ನಾವು ತಗ್ಗಿ-ಬಗ್ಗಿ ನಡೆಯಬೇಕಿರುವುದು ಮತಭಿಕ್ಷೆ ನೀಡಿರುವ ಮತದಾರ ಪ್ರಭುಗಳಿಗೆ, ಪ್ರಜಾಪ್ರಭುತ್ವ ವ್ಯವಸ್ಥೆ ನೀಡಿರುವ ಸಂವಿಧಾನಕ್ಕೆ ಹೊರತು ಯಾವ ದೊಣ್ಣೆ ನಾಯಕನಿಗೂ ಅಲ್ಲ. ಈ ನಿಮ್ಮ ಒಣ ಪ್ರತಿಷ್ಠೆ, ಧಿಮಾಕು, ದರ್ಬಾರು ಎಲ್ಲ ಬಿಟ್ಟು ಜನರ ಸೇವೆ ಮಾಡುವ ಮನೋಭಾವನೆ ಬೆಳೆಸಿಕೊಳ್ಳಿ. ಯಾವುದೇ ಕ್ಷೇತ್ರದ ಬಗ್ಗೆ ತಾರತಮ್ಯ ಮಾಡದೆ ಸಚಿವರಾಗಿ ನಿಮ್ಮ ಕರ್ತವ್ಯ ನಿರ್ವಹಿಸಿ ಎಂದು ವಿಪಕ್ಷ ನಾಯಕ ಆರ್. ಅಶೋಕ್​ (R Ashok) ಡಿಸಿಎಂ ಡಿ.ಕೆ. ಶಿವಕುಮಾರ್​ಗೆ (DK Shivakumar) ಟ್ವೀಟ್​ ಮೂಲಕ ತಿರುಗೇಟು ನೀಡಿದ್ದಾರೆ. 

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net