ಬೆಂಗಳೂರು: ಬೆಂಗಳೂರು ಉತ್ತರ ವಲಯ-4ರ ವ್ಯಾಪ್ತಿಯ ಜಿ.ಕೆ. ನಾಯ್ಡು ಟ್ರಸ್ಟ್‌ನ 13 ಶಾಲೆಗಳಲ್ಲಿ ನಿಯಮಬಾಹಿರವಾಗಿ ಆರ್‌ಟಿಇ ಸೀಟು ಹಂಚಿಕೆ, ದಾಖಲಾತಿ ಮತ್ತು ಹಾಜರಾತಿಯನ್ನು ಪರಿಶೀಲಿಸದೆ ಶುಲ್ಕ ಮರುಪಾವತಿಸಿ ಸರ್ಕಾರದ ಬೊಕ್ಕಸಕ್ಕೆ ನಷ್ಟವುಂಟು ಮಾಡಿ ಕರ್ತವ್ಯ ಲೋಪ ಎಸಗಿರುವ ಆರೋಪದ ಮೇಲೆ ಈ ಹಿಂದೆ ವಲಯದಲ್ಲಿ ಶಿಕ್ಷಣ ಸಂಯೋಜಕ ಹಾಗೂ ಆರ್‌ಟಿಇ ನೋಡಲ್ ಅಧಿಕಾರಿಯಾಗಿದ್ದ ಜಗದೀಶ್ ಎಚ್.ಜಿ. ಅವರನ್ನು ಅಮಾನತು ಮಾಡಲಾಗಿದೆ.
ಪ್ರಸ್ತುತ ಅಗ್ರಹಾರ ಲೇಔಟ್‌ನ ಸರ್ಕಾರಿ ಪ್ರೌಢ ಶಾಲೆಯ ಸಹ ಶಿಕ್ಷಕರಾಗಿರುವ ಜಗದೀಶ್, ಈ ಹಿಂದೆ ಶಿಕ್ಷಣ ಸಂಯೋಕರಾಗಿ, ಆರ್‌ಟಿಇ ನೋಡಲ್ ಅಧಿಕಾರಿಯಾಗಿ ಕಾರ್ಯನಿರ್ವಹಿಸಿದ್ದ ವೇಳೆ ಜಿ.ಕೆ.ನಾಯ್ಡು ಟ್ರಸ್ಟ್‌ನ 13 ಶಾಲೆಗಳಲ್ಲಿ ಇಲಾಖಾ ನೋದಣಿ ಮತ್ತು ಮಾನ್ಯತೆ ಷರತ್ತುಗಳ ಉಲ್ಲಂಘನೆ, ಮಕ್ಕಳ ದಾಖಲಾತಿ, ಹಾಜರಾತಿ, ಆರ್‌ಟಿಇ ಸೀಟು ಹಂಚಿಕೆ, ಆ ಸೀಟುಗಳಿಗೆ ದಾಖಲಾತಿ, ಹಾಜರಾತಿ, ಆರ್‌ಟಿಇ ಶುಲ್ಕ ಮರುಪಾವತಿ ವಿಚಾರಗಳ ಮಾಹಿತಿ ಸಂಗ್ರಹಣೆಯಲ್ಲಿ ಲೋಪವೆಸಗಿರುವುದು,
ಸಾಕಷ್ಟು ಅವ್ಯವಹಾರಗಳು ನಡೆದಿರುವುದು ಹಾಗೂ ಸರ್ಕಾರದ ಬೊಕ್ಕಸಕ್ಕೆ ನಷ್ಟವನ್ನುಂಟು ಮಾಡಿರುವುದು ಇಲಾಖಾ ತನಿಖೆಯಲ್ಲಿ ಕಂಡುಬಂದಿರುತ್ತದೆ. ಈ ಹಿನ್ನೆಲೆಯಲ್ಲಿ ಜಗದೀಶ್ ಅವರನ್ನು ಇಲಾಖಾ ವಿಚಾರಣೆ ಕಾಯ್ದಿರಿಸಿ ನವೆಂಬರ್ 3ರಿಂದ ಅನ್ವಯಿಸಿ ಸೇವೆಯಿಂದ ಅಮಾನತು ಮಾಡಲಾಗಿದೆ ಎಂದು ಬೆಂ.ಉತ್ತರ ಜಿಲ್ಲೆ ಡಿಡಿಪಿಐ ಆದೇಶ ಮಾಡಿದ್ದಾರೆ.
ರಾಜ್ಯದ ಹಲವೆಡೆ ಇಂತಹ ಪ್ರಕರಣಗಳು ಇರಬಹುದು. ಇಲಾಖೆಯು ಸ್ವಯಂ ತನಿಖೆ ಕೈಗೊಂಡರೆ ಅಕ್ರಮಗಳು ಬೆಳಕಿಗೆ ಬರಲಿದೆ.
– ಬಿ.ಎನ್. ಯೋಗಾನಂದ, ಪೋಷಕ ಸಂಘಟನೆ ಅಧ್ಯಕ್ಷ