ಜಮೀನು ದಾಖಲಾತಿ ಮಾಡಲು 15 ಲಕ್ಷ ರೂ. ಲಂಚ ಪಡೆಯುತ್ತಾ ಸಿಕ್ಕಿಬಿದ್ದ ತಹಸೀಲ್ದಾರ್

photo july 28th
Published on

ಬೀದರ್​​ : ಜಮೀನಿನ ಮ್ಯುಟೇಷನ್ ಮಾಡಿಕೊಡಲು 15 ಲಕ್ಷ ರೂ.ಗಳ ಲಂಚ ಪಡೆಯುವಾಗ ತಹಸೀಲ್ದಾರ್​ ಒಬ್ಬರು ಭ್ರಷ್ಟಾಚಾರ ವಿರೋಧಿ ದಳ(ಎಸಿಬಿ)ದ ಬಲೆಗೆ ಬಿದ್ದಿರುವ ಪ್ರಸಂಗ ನಡೆದಿದೆ. ಬೀದರ್​ನ ತಾಲ್ಲೂಕು ದಂಡಾಧಿಕಾರಿ (ಗ್ರೇಡ್ 1 ತಹಸೀಲ್ದಾರ್) ಆದ ಗಂಗಾದೇವಿ ಎಂಬುವರು ಸಿಕ್ಕಿಬಿದ್ದಿರುವ ಅಧಿಕಾರಿ.

ಗಂಗಾದೇವಿ ಅವರು ನಗರದ ಚಿದ್ರಿ ಸರ್ವೆ ನಂಬರ್ 15 ರ ಭೂಮಿ ಮ್ಯುಟೇಷನ್ ಮಾಡಲು ಲೀಲಾಧರ್ ಪಟೇಲ್​ ಎಂಬುವರಿಗೆ 20 ಲಕ್ಷ ರೂ.ಗಳ ಡಿಮ್ಯಾಂಡ್ ಇಟ್ಟಿದ್ದರು. ನಂತರ 15 ಲಕ್ಷ ರೂ.ಗಳಿಗೆ ಒಪ್ಪಿದ್ದು, ಈ ಬಗ್ಗೆ ಲೀಲಾಧರ್ ಎಸಿಬಿಗೆ ದೂರು ನೀಡಿದ್ದರು. ಇಂದು ತಮ್ಮ ಬಾಡಿಗೆ ಮನೆಯಲ್ಲಿ ಲಂಚದ ಹಣ ಪಡೆಯುವಾಗ ಬೀದರ್​ನ ಎಸಿಬಿ ಅಧಿಕಾರಿಗಳ ಬಲೆಗೆ ಬಿದ್ದರು ಎನ್ನಲಾಗಿದೆ.

ಹಲವು ಭ್ರಷ್ಟಾಚಾರದ ಆರೋಪ ಹೊತ್ತಿದ್ದ ತಹಸೀಲ್ದಾರ್ ಗಂಗಾದೇವಿ ಅವರ ಮನೆಗೆ ಎಸಿಬಿ ಎಸ್ಪಿ ಮೇಘಣ್ಣನವರ್ ನೇತೃತ್ವದಲ್ಲಿ ದಾಳಿ ನಡೆಸಲಾಯಿತು. ಗಂಗಾದೇವಿ ಅವರು ಬೆಂಗಳೂರಿನ‌ ಮಾರತಹಳ್ಳಿಯವರು.‌ ಒಂದು ವರ್ಷದಿಂದ ಬೀದರ್ ತಾಲೂಕು ಗ್ರೇಡ್-1 ತಹಸೀಲ್ದಾರ್ (ತಾಲೂಕು ದಂಡಾಧಿಕಾರಿ) ಆಗಿ ಕೆಲಸ ಮಾಡುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net