ಕಾಲೇಜು ಬಸ್ ಚಾಲಕನಿಂದಲೇ ವಿದ್ಯಾರ್ಥಿನಿಯ ಅಪಹರಣ?; ಮಗಳನ್ನು ಹುಡುಕಿಕೊಡಿ ಎಂದು ತಂದೆಯಿಂದ ದೂರು

KIdnap
ಸಾಂದರ್ಭಿಕ ಚಿತ್ರ
Published on

ವಿಜಯಪುರ: ಕಾಲೇಜಿಗೆ ಹೋದ ಯುವತಿ ಮರಳಿ ಮನೆ ಬರದ ಹಿನ್ನೆಲೆ ಅಪಹರಣದ ಶಂಕೆ ವ್ಯಕ್ತಪಡಿಸಿರುವ ಪಾಲಕರು ಮಗಳನ್ನು ಹುಡುಕಿಕೊಡುವಂತೆ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ಇಲ್ಲಿನ ಡಯಟ್ ಕಾಲೇಜ್ ಹತ್ತಿರದ ಶಾಂತಿ ನಗರದ ನಿವಾಸಿ ಹಾಗೂ ಸರ್ಕಾರಿ ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕ ರಾಜಶೇಖರ ಧರ್ಮಣ್ಣ ಬೆನಕನಳ್ಳಿ ಇವರ 17 ವರ್ಷದ ಪುತ್ರಿ ಕಾಣೆಯಾಗಿದ್ದಾರೆ. ಕಾಲೇಜಿನ ಬಸ್ ಚಾಲಕನೇ ಈ ಕೃತ್ಯ ಎಸಗಿರುವ ಶಂಕೆ ಇದ್ದು ಈ ಬಗ್ಗೆ ತನಿಖೆ ನಡೆಸಿ ಮಗಳನ್ನು ಹುಡುಕಿಕೊಡುವಂತೆ ಪಾಲಕರು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ಘಟನೆ ವಿವರ: ಇಟ್ಟಂಗಿಹಾಳ ಗ್ರಾಮ ಸರಹದ್ದಿನ ತುಂಗಳ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ವ್ಯಾಸಂಗ ಮಾಡುತ್ತಿದ್ದ ರಾಜಶೇಖರ ಅವರ ಪುತ್ರಿ, ಶಾಲಾ ಬಸ್‌ನಲ್ಲಿ ಸಂಚರಿಸುತ್ತಿದ್ದಳು. ಪ್ರತಿ ದಿನ ಮಧುವನ ಕ್ರಾಸ್ ಹತ್ತಿರ ಬಸ್ ಬರುತ್ತಿದ್ದು ಅಲ್ಲಿಂದಲೇ ಸುಷ್ಮಾ ಕಾಲೇಜಿಗೆ ತೆರಳುವುದು ಮತ್ತು ವಾಪಸ್ ಅದೇ ಸ್ಥಳಕ್ಕೆ ಬಂದಿಳಿಯುವುದು ಮಾಡುತ್ತಿದ್ದಳು.

ಜೂ. 7ರಂದು ಬೆಳಗ್ಗೆ 7.40ರ ಸುಮಾರಿಗೆ ರಾಜಶೇಖರ ಮಗಳನ್ನು ಮಧುವನ ಕ್ರಾಸ್ ಹತ್ತಿರ ಬಿಟ್ಟು ಎಂದಿನಂತೆ ಕರ್ತವ್ಯಕ್ಕೆ ತೆರಳಿದ್ದಾರೆ. ಸಂಜೆ 6.10ರ ಸುಮಾರಿಗೆ ಅದೇ ಮಧುವನ ಕ್ರಾಸ್ ಹತ್ತಿರ ಮಗಳ ಬರುವಿಕೆಗಾಗಿ ರಾಜಶೇಖದ ಕಾದು ನಿಂತಿದ್ದಾರೆ. ಆದರೆ, ಮಗಳು ಬಾರದ ಹಿನ್ನೆಲೆ ಮನೆಗೆ ಹೋಗಿ ವಿಚಾರಿಸಿದ್ದಾರೆ. ಬಳಿಕ ಮನೆಗೂ ಬಂದಿಲ್ಲದ ಕಾರಣ ಶಾಲೆಗೆ ತೆರಳಿ ವಿಚಾರಿಸಿದ್ದು ಕಾಲೇಜು ಸಿಬ್ಬಂದಿ ಆಕೆ ತರಗತಿಗೆ ಹಾಜರಾಗಿಲ್ಲವೆಂದು ತಿಳಿಸಿದ್ದಾರೆ.

ಅದೇ ಚಿಂತೆಯಲ್ಲಿರಬೇಕಾದರೆ ರಾಜಶೇಖರನ ಪರಿಚಯಸ್ಥರು ಕಾಲೇಜು ಬಸ್ ಚಾಲಕ ಖಾಜೇಸಾಬ ಮಹ್ಮದಸಾಬ್ ಜಕಾತದಾರ ಈತನ ಬೈಕ್ ಮೇಲೆ ನಿಮ್ಮ ಪುತ್ರಿ ಹೋಗುತ್ತಿರುವುದನ್ನು ತಾವು ಗಮನಿಸಿದ್ದಾಗಿ ತಿಳಿಸಿದ್ದಾರೆ. ಆತನ ಭೇಟಿಗೆ ಕಾಲೇಜಿಗೆ ತೆರಳಿ ವಿಚಾರಿಸಿದರೆ ಅಲ್ಲೂ ಆತ ಬಂದಿರಲಿಲ್ಲ. ಮೊಬೈಲ್​ಫೋನ್​ ಕೂಡ ಸ್ವಿಚ್ಡ್​ ಆಫ್ ಆಗಿತ್ತು. ಹೀಗಾಗಿ ರಾಜಶೇಖರ ಗ್ರಾಮೀಣ ಠಾಣೆಗೆ ದೂರು ನೀಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net