ಸಿನಿಮಾ ಶೂಟಿಂಗ್‌ಗೆ ಮುಕ್ತ ಅವಕಾಶ ಕೊಟ್ಟ ರಾಜ್ಯ ಸರ್ಕಾರ

shooting
Published on

ಬೆಂಗಳೂರು: ಟಿ.ವಿ. ಧಾರಾವಾಹಿಗಳ ಚಿತ್ರೀಕರಣಕ್ಕೆ ಈಗಾಗಲೇ ಅವಕಾಶ ಕೊಟ್ಟಿರುವ ರಾಜ್ಯ ಸರ್ಕಾರ ಇನ್ನು ಮುಂದೆ ಸಿನಿಮಾರಂಗದವರೂ ಚಿತ್ರೀಕರಣ ಶುರು ಮಾಡಬಹುದು ಎಂದು ತಿಳಿಸಿದೆ. ಈ ಕುರಿತು ಅಧಿಕೃತ ಜ್ಞಾಪನಪತ್ರ ಹೊರಡಿಸಿರುವ ಸರ್ಕಾರ, ಲಾಕ್‌ಡೌನ್‌ನಿಂದಾಗಿ ಕಳೆದ ಮೂರು ತಿಂಗಳಿಂದ ಕೆಲಸವಿಲ್ಲದೆ ಕಂಗೆಟ್ಟುಹೋಗಿದ್ದ ಕನ್ನಡ ಚಲನಚಿತ್ರ ರಂಗಕ್ಕೆ ಹೊಸ ಚೈತನ್ಯ ತಂದಿದೆ.

ಲಾಕ್‌ಡೌನ್ ಸಡಿಲಿಕೆ ಸಂಬಂಧ ಕೇಂದ್ರ ಸರಕಾರ ಹೊರಡಿಸಿರುವ ನಿಮಯಾವಳಿಗಳಲ್ಲಿ ಸಿನೆಮಾ ಚಿತ್ರೀಕರಣಕ್ಕೆ ಯಾವುದೇ ನಿರ್ಬಂಧ ವಿಧಿಸಿಲ್ಲ. ಆದ್ದರಿಂದ ಈಗ ಸಿನಿಮಾ ಚಿತ್ರೀಕರಣಕ್ಕೆ ಅನುಮತಿ ನೀಡಲಾಗುತ್ತಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ. ಇದರಿಂದಾಗಿ ಕನ್ನಡ ಚಿತ್ರರಂಗದಲ್ಲಿ ಮತ್ತೆ ಚಟುವಟಿಕೆಗಳು ಭರದಿಂದ ಆರಂಭವಾಗಲಿವೆ.

ಕರೊನಾ ಹಾವಳಿ ನಿಯಂತ್ರಿಸಲು ರಾಜ್ಯ ಮತ್ತು ಕೇಂದ್ರ ಸರ್ಕಾರ ರೂಪಿಸಿರುವ ನಿಯಮಗಳನ್ನು ಚಿತ್ರೀಕರಣದ ಸಂದರ್ಭದಲ್ಲಿ ಪಾಲಿಸಬೇಕಾಗುತ್ತದೆ. ಮಾಸ್ಕ್ ಧರಿಸುವುದು, ದೈಹಿಕ ಅಂತರ ಕಾಯ್ದುಕೊಳ್ಳುವುದು, ಸ್ಯಾನಿಟೈಸರ್ ಬಳಸುವುದು ಮುಂತಾದವು ಇದಕ್ಕೂ ಅನ್ವಯವಾಗುತ್ತವೆ.

ಕೋವಿಡ್-19ರ ಸಂಬಂಧವಾಗಿ ಹೊರಡಿಸಲಾಗಿರುವ ರಾಷ್ಟ್ರೀಯ ನಿರ್ದೇಶನಗಳನ್ನು ಹಾಗೂ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಹೊರಡಿಸುವ ಪ್ರಾಮಾಣಿತ ಕಾರ‌್ಯವಿಧಾನಗಳನ್ನು ಕಡ್ಡಾಯವಾಗಿ ಪಾಲಿಸುವ ಷರತ್ತಿಗೆ ಒಳಪಟ್ಟು ಸಿನಿಮಾ ಮತ್ತು ಟಿವಿ ಶೂಟಿಂಗ್ ಮತ್ತು ತತ್ಸಂಬಂಧಿ ಕಾರ್ಯ ಚಟುವಟಿಕೆಗಳನ್ನು ನಡೆಸಲು ಅನುಮತಿ ನೀಡಲಾಗುತ್ತಿದೆ ಎಂದು ಸರ್ಕಾರದ ಕಂದಾಯ ಇಲಾಖೆ ಪ್ರಧಾನ ಕಾರ‌್ಯದರ್ಶಿ ಎನ್. ಮಂಜುನಾಥ್ ಪ್ರಸಾದ್ ಅವರು ಆದೇಶದಲ್ಲಿ ಸ್ಪಷ್ಟಪಡಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net