

ಉಡುಪಿ: ಊಟ ಕೇಳಿದ 82 ವರ್ಷದ ತಾಯಿಯ ತಲೆಗೆ ಹೊಡೆದ ಮಗ, ನಿಲ್ಲಲೂ ಶಕ್ತಿ ಇಲ್ಲದ ಆಕೆಯನ್ನು ಮನೆಯಿಂದ ಹೊರ ಹಾಕಿ ಕ್ರೂರವಾಗಿ ನಡೆದುಕೊಂಡಿರುವ ಪ್ರಕರಣವೊಂದು ಕರಾವಳಿಯಲ್ಲಿ ನಡೆದಿದೆ. ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಎಲ್ಯಾ ಗ್ರಾಮದ ಕೈಕಂಬ ಎಂಬಲ್ಲಿ ಈ ಘಟನೆ ನಡೆದಿದೆ.
ಮಗನ ಈ ದುಷ್ಕೃತ್ಯದಿಂದ ನೊಂದ ತಾಯಿಯ ಹೆಸರು ಯಶೋದ. ಇವರ ಪತಿ ಐದು ವರ್ಷಗಳ ಹಿಂದೆ ಮೃತಪಟ್ಟಿದ್ದು, ಅಂದಿನಿಂದಲೂ ಮಗ ದಾಮೋದರನ ಆಶ್ರಯದಲ್ಲಿ ಬದುಕುತ್ತಿದ್ದಾರೆ. ಆದರೆ ಊಟ ಕೇಳಿದ ತಾಯಿಯ ತಲೆಗೆ ಗಾಯ ಆಗುವ ರೀತಿಯಲ್ಲಿ ಹೊಡದ ಮಗ, ಅಷ್ಟಕ್ಕೆ ಸುಮ್ಮನಾಗದೆ ಆಕೆಯನ್ನು ಮನೆಯಿಂದ ಹೊರಗೂ ಹಾಕಿದ್ದಾನೆ.
ಮಗನ ಥಳಿತದಿಂದಾಗಿ ಜೀವನ್ಮರಣ ಹೋರಾಟದ ಸ್ಥಿತಿಯಲ್ಲಿ ಮನೆಯ ಜಗುಲಿಯಲ್ಲಿ ಬಿದ್ದಿದ್ದ ತಾಯಿಯನ್ನು ಕಂಡ ಸಮಾಜಸೇವಕಿ ರಮಿತ ಶೈಲೇಂದ್ರ ಎಂಬವರು ಈಕೆಯ ಸಂಕಷ್ಟಕ್ಕೆ ಮರುಗಿದ್ದಾರೆ. ಮಾತ್ರವಲ್ಲ, ಅದೇ ಪುತ್ರನಿಗೆ ಬೈದು ಬುದ್ಧಿ ಹೇಳಿ ಆತನ ನೆರವಿನಿಂದ ಈಕೆಯನ್ನು ಆಸ್ಪತ್ರೆಗೆ ಕರೆದೊಯ್ದು ದಾಖಲಿಸಿದ್ದಾರೆ.
ಪತಿ ಮರಣದ ಬಳಿಕ ಮಗ ಹಾಗೂ ಸೊಸೆ ನನ್ನನ್ನು ಸರಿಯಾಗಿ ನೋಡಿಕೊಳ್ಳುತ್ತಿಲ್ಲ. ಮರದ ತುಂಡಿನಿಂದ ಹೊಡೆದು ಗಾಯಗೊಳಿಸಿದ್ದಾರೆ ಅಂತ ವೃದ್ಧೆ ಯಶೋದ ಹೇಳಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಮಗ ದಾಮೋದರನ ವಿರುದ್ಧ ಕಾರ್ಕಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.