ಬಾಲ್ಯವಿವಾಹಕ್ಕೆ ಜಾಲತಾಣವೇ ಉರುಳು: ಹೆದರಿದ ಪಾಲಕರಿಂದ ತರಾತುರಿ ಮದುವೆ | Child marriage

Child marriage
Published on

ಬಾಲ್ಯವಿವಾಹ ( Child marriage ) ದಂತಹ ಅನಿಷ್ಟ ಪದ್ಧತಿಗೆ ವೇದಿಕೆ ಕಲ್ಪಿಸಿ ಕೊಡುತ್ತಿದೆಯೇ? ಮಕ್ಕಳ ಭವಿಷ್ಯ ಹಾದಿ ತಪ್ಪುವ ಆತಂಕದಲ್ಲಿ ಸುಶಿಕ್ಷಿತ ಪಾಲಕರೇ ಮಕ್ಕಳ ಕೊರಳಿಗೆ ಬಾಲ್ಯ ವಿವಾಹದ ಉರುಳು ಹಾಕುತ್ತಿದ್ದಾರೆಯೇ?

| ಶಿವರಾಜ ಎಂ. ಬೆಂಗಳೂರು ಗ್ರಾಮಾಂತರ

ಇಂಥದ್ದೊಂದು ಅನುಮಾನಕ್ಕೆ ಕಾರಣವಾಗಿದ್ದು ಗ್ರಾಮಾಂತರ ಜಿಲ್ಲೆಯಲ್ಲಿ ಕಳೆದ 5 ತಿಂಗಳ ಅವಧಿಯಲ್ಲಿ ದಾಖಲಾದ 16 ಬಾಲ್ಯ ವಿವಾಹ ಪ್ರಕರಣಗಳು. ಇವುಗಳಲ್ಲಿ ಬಹುತೇಕ ಪ್ರಕರಣಗಳಲ್ಲಿ ಜಾಲತಾಣದ ಕರಿನೆರಳೇ ಪ್ರಮುಖವಾಗಿದೆ ಎಂಬ ಅಂಶ ಬೆಳಕಿಗೆ ಬಂದಿದೆ. ಹೈಸ್ಕೂಲ್ ಮೆಟ್ಟಿಲೇರಿದ ಮಕ್ಕಳು ಜಾಲತಾಣಗಳಲ್ಲಿ ಪರಿಚಯವಾದವರೊಂದಿಗೆ ಪ್ರೀತಿ-ಪ್ರೇಮದ ಖೆಡ್ಡಾಗೆ ಬೀಳುತ್ತಿದ್ದು, ಪಾಲಕರ ಕೆಂಗಣ್ಣಿಗೆ ಗುರಿಯಾಗುತ್ತಿದ್ದಾರೆ. ಮಕ್ಕಳು ಬಾಲ್ಯದಲ್ಲಿಯೇ ಹಾದಿ ತಪು್ಪವ ಆತಂಕದಿಂದ ಪರಿಚಯದ ವ್ಯಕ್ತಿಯೊಂದಿಗೆ ಮದುವೆ ಮಾಡಿ ಮುಗಿಸುವ ತರಾತುರಿಗೆ ಬಿದ್ದಿದ್ದಾರೆ ಎನ್ನಲಾಗಿದೆ.

ಅರಿವಿನ ಕೊರತೆ: ಗ್ರಾಮಾಂತರ ಜಿಲ್ಲೆಯಲ್ಲಿ ನಡೆಯಬೇಕಿದ್ದ 16 ಬಾಲ್ಯ ವಿವಾಹ ಪ್ರಕರಣಗಳನ್ನು ತಡೆದಿರುವ ಅಧಿಕಾರಿಗಳಿಗೆ ಈ ಪ್ರಕರಣಗಳಿಗೆ ಪ್ರಮುಖ ಕಾರಣ ಜಾಲತಾಣವೇ ಎಂಬುದು ಕಂಡುಬಂದಿದೆ ಎನ್ನಲಾಗಿದೆ. ಈ ಹಿಂದೆ ಅರಿವಿನ ಕೊರತೆ, ಬಡತನ, ಅನಕ್ಷರತೆ ಹೀಗೆ ಅನೇಕ ಕಾರಣಗಳಿಗೆ ಬಾಲ್ಯವಿವಾಹದಂತ ಅನಿಷ್ಟ ಪದ್ಧತಿ ನಡೆಯುತ್ತಿತ್ತು. ಆದರೆ ಸುಶಿಕ್ಷಿತರೇ ಈ ಅನಿಷ್ಟ ಪದ್ಧತಿಗೆ ಅನಿವಾರ್ಯವಾಗಿ ಸಿಲುಕುವಂತಾಗಿದೆ ಎಂಬ ಅಂಶ ಬಯಲಾಗಿದೆ.

ಕರೊನಾ ಬಳಿಕ ಹೆಚ್ಚಳ: ಕಳೆದ ನಾಲ್ಕೈದು ವರ್ಷಗಳಿಗೆ ಹೊಲಿಸಿದರೆ ಗ್ರಾಮಾಂತರ ಜಿಲ್ಲೆಯಲ್ಲಿ ಬಾಲ್ಯವಿವಾಹ ಪ್ರಕರಣಗಳು ಸಾಕಷ್ಟು ಕಡಿಮೆಯಾಗಿದ್ದವು, ಸಾಮೂಹಿಕ ವಿವಾಹಗಳ ಮೇಲೂ ಇಲಾಖೆಗಳು ಹದ್ದಿನ ಕಣ್ಣಿಟ್ಟಿದ್ದರಿಂದ ಆನೇಕ ಬಾಲ್ಯವಿವಾಹಗಳಿಗೆ ತಡೆಯೊಡ್ಡಲಾಗಿತ್ತು. ಏತನ್ಯಧ್ಯೆ, ಕರೊನಾ ಕಾಲಘಟ್ಟದಲ್ಲಿ ಆನ್​ಲೈನ್ ತರಗತಿಗಳು ಆನಿವಾರ್ಯವಾದ ಕಾರಣ, ಮಕ್ಕಳಿಗೆ ಮೊಬೈಲ್ ಕೊಡಿಸುವುದು ಸಹ ಪಾಲಕರಿಗೆ ಅನಿವಾರ್ಯವಾಗಿತ್ತು. ಆರಂಭದಲ್ಲಿ ಪಠ್ಯಪಾಠಕ್ಕೆ ಸೀಮಿತವಾಗಿದ್ದ ಮೊಬೈಲ್​ಗಳು ಇನ್ನಿತರ ಕಡೆ ಮನಸ್ಸು ಹರಿಬಿಡಲು ದಾರಿ ಮಾಡಿಕೊಟ್ಟವು. ಇದಾದ ಬಳಿಕ ನಡೆಯುತ್ತಿದ್ದ ಬಾಲ್ಯವಿವಾಹ ಪ್ರಕರಣಗಳ ತನಿಖೆಯಲ್ಲಿ ಮೊಬೈಲ್ ಹೆಚ್ಚು ಕಾರಣವಾಗಿದೆ ಎಂಬ ಅಂಶ ಬೆಳಕಿಗೆ ಬಂದಿವೆ.

ಆನ್​ಲೈನ್ ಕ್ಲಾಸ್ ವೇಳೆ ಫೇಸ್​ಬುಕ್​ನಲ್ಲಿ ಅರಳಿದ ಪ್ರೇಮ

ಅದು 2020ರ ಕಾಲಘಟ್ಟ. ಜಿಲ್ಲೆಯಲ್ಲಿ ಕರೊನಾ ಪ್ರಕರಣ ಉತ್ತುಂಗದಲ್ಲಿತ್ತು. 7ನೇ ತರಗತಿಯಲ್ಲಿದ್ದ ವಿದ್ಯಾರ್ಥಿನಿ ಆನ್​ಲೈನ್​ನಲ್ಲಿ ಪಾಠ ಕಲಿಯುವಾಗ ಫೇಸ್​ಬುಕ್ ಖಾತೆ ತೆರೆದಿದ್ದಳು. ಇದರ ಮೂಲಕ ಪರಿಚಯವಾದ ವ್ಯಕ್ತಿಯೊಂದಿಗೆ ಚಾಟಿಂಗ್ ಮುಂದುವರಿಸಿದ ಬಾಲಕಿ, ಆತನ ಪ್ರೇಮಪಾಶಕ್ಕೆ ಬಿದ್ದಿದ್ದಳು. ಇಬ್ಬರ ನಡುವೆ 14 ವರ್ಷದ ವಯಸ್ಸಿನ ಅಂತರವಿತ್ತು. ಈ ವಿಚಾರ ತಿಳಿದ ಪಾಲಕರು ಆ ವ್ಯಕ್ತಿಗೆ ಎಚ್ಚರಿಕೆ ನೀಡಿ ಮಗಳಿಗೆ ಬುದ್ಧಿ ಹೇಳಿದ್ದರು. ಎಲ್ಲವೂ ಸರಿಹೋಯಿತು ಎನ್ನುವಾಗ 3 ವರ್ಷದ ನಂತರ ಮತ್ತೆ ಅದೇ ವ್ಯಕ್ತಿಯೊಂದಿಗೆ ಮಗಳು ಸಂಪರ್ಕದಲ್ಲಿದ್ದ ವಿಷಯ ಗಮನಿಸಿದ ಪಾಲಕರು ಆತಂಕಗೊಂಡು ಸಂಬಂಧಿಕರ ಮಗನಿಗೆ ಕೊಟ್ಟು ಮದುವೆ ಮಾಡಲು ನಿಶ್ಚಯಿಸಿದ್ದರು. ದೇವಸ್ಥಾನದಲ್ಲಿ ಸರಳ ವಿವಾಹಕ್ಕೆ ಸಿದ್ಧಗೊಳ್ಳುತ್ತಿದ್ದ ಮಾಹಿತಿ ಪಡೆದ ಅಧಿಕಾರಿಗಳು ಮದುವೆ ತಡೆದಿದ್ದರು. ಬಾಲ್ಯವಿವಾಹ ಶಿಕ್ಷಾರ್ಹ ಅಪರಾಧ ಎಂದು ತಿಳಿಸಿದ್ದರೂ ಮಗಳ ಭವಿಷ್ಯದ ಕಾರಣಕ್ಕೆ ಪಾಲಕರೇ ಬಾಲ್ಯವಿವಾಹಕ್ಕೆ ಸಿದ್ಧ್ದೆ ನಡೆಸಿದ್ದರು ಎಂಬುದು ತನಿಖೆಯಲ್ಲಿ ತಿಳಿದುಬಂದಿತ್ತು.

ದೊಡ್ಡಬಳ್ಳಾಪುರದಲ್ಲಿ ಒಂಬತ್ತು ಪ್ರಕರಣಗಳು

ಬಾಲ್ಯ ವಿವಾಹ ನಿಷೇಧ ಕಾಯ್ದೆ-2006ರಡಿ ಜಿಲ್ಲೆಯಲ್ಲಿ 2024ರ ಏಪ್ರಿಲ್​ನಿಂದ ಆಗಸ್ಟ್​ವರೆಗೆ ಒಟ್ಟು 16 ಪ್ರಕರಣಗಳು ದಾಖಲಾಗಿದೆ. ಈ ಪೈಕಿ ದೇವನಹಳ್ಳಿಯಲ್ಲಿ 6, ದೊಡ್ಡಬಳ್ಳಾಪುರದಲ್ಲಿ 9 ಪ್ರಕರಣ, ಹೊಸಕೋಟೆಯಲ್ಲಿ 1 ಬಾಲ್ಯವಿವಾಹ ಪ್ರಕರಣ ತಡೆಯಲಾಗಿದೆ. ಇವುಗಳಲ್ಲಿ ಸುಶಿಕ್ಷಿತ ಪಾಲಕರೇ ಬಾಲ್ಯವಿವಾಹಕ್ಕೆ ಮುಂದಾಗಿರುವುದು ಕಂಡುಬಂದಿದೆ. ಚಿಕ್ಕವಯಸ್ಸಿನಲ್ಲೇ ಪ್ರೀತಿ-ಪ್ರೇಮದ ಬಲೆಗೆ ಬಿದ್ದ ಮಕ್ಕಳ ಭವಿಷ್ಯಕ್ಕೆ ಹೆದರಿ ಬಾಲ್ಯ ವಿವಾಹ ನಡೆಸಲು ಮುಂದಾಗಿದ್ದರು ಎನ್ನಲಾಗಿದೆ.

ಜಿಲ್ಲಾಧಿಕಾರಿಯಿಂದ ಕಟ್ಟುನಿಟ್ಟಿನ ಸೂಚನೆ

ಬಾಲ್ಯವಿವಾಹ ತಡೆಗೆ ಜಿಲ್ಲಾಡಳಿತ ಅಲರ್ಟ್ ಆಗಿದ್ದು, ಜಿಲ್ಲೆಯ ಪ್ರತಿ ಮನೆಗೂ ಬಾಲ್ಯವಿವಾಹ ನಿಷೇಧ ಕಾಯ್ದೆಯ ಅರಿವು ಕರಪತ್ರವನ್ನು ಹಂಚುವ ಮೂಲಕ ಪಾಲಕರಲ್ಲಿ ಜಾಗೃತಿ ಮೂಡಿಸುವಂತೆ ಡಿಸಿ ಡಾ. ಶಿವಶಂಕರ್ ಸೂಚನೆ ನೀಡಿದ್ದಾರೆ.

ಜಿಲ್ಲೆಯಲ್ಲಿ ಏಪ್ರಿಲ್​ನಿಂದ ಆಗಸ್ಟ್​ವರೆಗೆ ದಾಖಲಾದ 16 ಬಾಲ್ಯವಿವಾಹ ತಡೆದು ಕ್ರಮಕೈಗೊಳ್ಳಲಾಗಿದೆ. ಜಿಲ್ಲೆಯಲ್ಲಿ ಮನೆಮನೆಗೆ ಕರಪತ್ರ ಹಂಚುವ ಮೂಲಕ ಬಾಲ್ಯ ವಿವಾಹ ನಿಷೇಧ ಕುರಿತು ಪಾಲಕರಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡಲಾಗುತ್ತಿದೆ. ಪತ್ತೆಯಾದ ಪ್ರಕರಣಗಳಲ್ಲಿ ಬಡತನ, ಕೌಟುಂಬಿಕ ಸಮಸ್ಯೆ ಜತೆಗೆ ಹದಿಹರೆಯದಲ್ಲೇ ಪ್ರೀತಿ-ಪ್ರೇಮದ ಸುಳಿಗೆ ಸಿಲುಕಿರುವ ಅಂಶ ಕಂಡುಬಂದಿದೆ.

| ಮುದ್ದಣ್ಣ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ (ಬೆಂ.ಗ್ರಾಮಾಂತರ)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net