ಮಾಜಿ ಸಚಿವನಿಗಿಲ್ಲ ಬಿಡುಗಡೆಯ ಭಾಗ್ಯ: ಇಂದೂ ಸಿಗಲಿಲ್ಲ ಬೇಲ್​- ಜೈಲೇ ಗತಿ

vinay kulkarni
Published on

ಧಾರವಾಡ: ಜಿಲ್ಲಾ ಪಂಚಾಯಿತಿ ಸದಸ್ಯ ಯೋಗೀಶ್ ಗೌಡರ ಕೊಲೆ ಕೇಸ್​ನಲ್ಲಿ ಸಿಬಿಐ ಪೊಲೀಸರಿಂದ ಬಂಧನಕ್ಕೊಳಪಟ್ಟು, ಬೆಳಗಾವಿಯ ಹಿಂಡಲಗಾ ಜೈಲಿನಲ್ಲಿರುವ ಮಾಜಿ ಸಚಿವ ವಿನಯ್​ ಕುಲಕರ್ಣಿಗೆ ಇಂದು ಕೂಡ ಜಾಮೀನು ಸಿಕ್ಕಿಲ್ಲ.

ಹೈಕೋರ್ಟ್​ ಅರ್ಜಿಯ ವಿಚಾರಣೆಯನ್ನು ಮುಂದೂಡಿರುವ ಹಿನ್ನೆಲೆಯಲ್ಲಿ ಇನ್ನೂ ಕೆಲವು ದಿನ ವಿನಯ್​ ಜೈಲಿನಲ್ಲಿಯೇ ಕಳೆಯಬೇಕಿದೆ. ಇವರು ಸಲ್ಲಿಸಿರುವ ಅರ್ಜಿಗೆ ಆಕ್ಷೇಪಣೆ ಸಲ್ಲಿಸಲು ಸಿಬಿಐ ಕಾಲಾವಕಾಶ ಕೇಳಿಕೊಂಡ ಹಿನ್ನೆಲೆಯಲ್ಲಿ ಅರ್ಜಿಯ ವಿಚಾರಣೆಯನ್ನು ಮುಂದೂಡಲಾಗಿದೆ.

ನ.5ರಂದು ಬಂಧನಕ್ಕೊಳಪಟ್ಟಿದ್ದ ವಿನಯ್​ ಕುಲಕರ್ಣಿಗೆ ಜಿಲ್ಲಾ ನ್ಯಾಯಾಲಯ ನ.9ರಂದು 14 ದಿನಗಳ ನ್ಯಾಯಾಂಗ ಬಂಧನ ವಿಧಿಸಿತ್ತು. ನಂತರ ನವೆಂಬರ್​ 23ರಂದು ನ್ಯಾಯಾಂಗ ಬಂಧನದ ಮೊದಲ ಅವಧಿ ಅಂತ್ಯಗೊಂಡ ಹಿನ್ನೆಲೆಯಲ್ಲಿ ನ್ಯಾಯಾಲಯದಲ್ಲಿ ವಿಡಿಯೋ ಕಾನ್ಫರೆನ್ಸ್ ಮೂಲಕ ವಿಚಾರಣೆ ನಡೆಸಿತ್ತು. ಮತ್ತೆ 14 ದಿನಗಳವರೆಗೆ ನ್ಯಾಯಾಂಗ ಬಂಧನ ವಿಸ್ತರಿಸಿ ಕೋರ್ಟ್​ ಆದೇಶಿಸಿತ್ತು.

2016ರ ಜೂನ್ 15ರಲ್ಲಿ ತನ್ನದೇ ಮಾಲೀಕತ್ವದ ಉದಯ್ ಜಿಮ್​ನಲ್ಲಿ ಯೋಗೀಶ್​ ಗೌಡ ಬರ್ಬರವಾಗಿ ಹತ್ಯೆಯಾಗಿದ್ದರು. ಈ ಸಂಬಂಧ ಸಿಬಿಐ ವಿಚಾರಣೆ ಕೈಗೆತ್ತಿಕೊಂಡಿದೆ. ಕೊಲೆ ಕೇಸ್​ನಲ್ಲಿ ವಿನಯ್​ ಕುಲಕರ್ಣಿ ಕೈವಾಡವಿರುವ ಮತ್ತು ಪ್ರಭಾವ ಬಳಸಿ ಕೇಸು ಮುಚ್ಚಿ ಹಾಕಿರುವ ಆರೋಪ ಇದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net