ಮೊದಲ ನೋಟದಲ್ಲೇ ಪ್ರೇಮಿಸಿ ಮದ್ವೆಯಾದ: ಹೆಂಡ್ತಿಗಾಗಿ ದೇಹ ಮಾರಾಟ ದಂಧೆಗಿಳಿದ! ‌ಲ್ಯಾಪ್ ಟಾಪ್ ನೋಡಿ ಬೇಸ್ತು ಬಿದ್ದ ಪತ್ನಿ

couple
Published on

ಬೆಂಗಳೂರು: ಇವರದ್ದು ಮೊದಲ ನೋಟದಲ್ಲಿಯೇ ಪ್ರೇಮವಾದದ್ದು. ಎರಡು ವರ್ಷದ ಪ್ರೇಮದ ನಂತರ ಮದುವೆಯಾದರು. ಮದುವೆಯಾಗಿ ಇದೀಗ ಎರಡು ವರ್ಷ. ಆದರೆ ಇವರಿಬ್ಬರ ದಾಂಪತ್ಯಕ್ಕೆ ಕೊಳ್ಳಿಯಿಟ್ಟದ್ದು ಕಳೆದ ವರ್ಷದ ಲಾಕ್‌ಡೌನ್‌. ಲಾಕ್‌ಡೌನ್‌ ಮುಗಿದು ಒಂದು ವರ್ಷದ ಬಳಿಕ ಈ ದಾಂಪತ್ಯವೀಗ ವಿಚ್ಛೇದನದತ್ತ ಸಾಗಿದೆ. ಅದಕ್ಕೆ ಕಾರಣ ಪತಿಯ ಲ್ಯಾಪ್‌ಟಾಪ್‌!

ಬೆಂಗಳೂರಿನ ಭವೇಶ್‌ ಮತ್ತು ಅವರ ಪತ್ನಿಯ ದುರಂತ ಪ್ರೇಮ ಕಥೆಯಿದು. ಇಬ್ಬರೂ ಬಿಪಿಓ ಉದ್ಯೋಗಿಗಳು. ನಾಲ್ಕು ವರ್ಷಗಳ ಹಿಂದೆ ಕಚೇರಿಯ ಕ್ಯಾಂಟೀನ್‌ನಲ್ಲಿ ಇವರ ಪರಿಚಯವಾಗಿತ್ತು. ಮೊದಲ ನೋಟದಲ್ಲೇ ಪ್ರೇಮ ಅಂಕುರಿಸಿ ಎರಡು ವರ್ಷ ಪ್ರೇಮವ್ಯವಹಾರ ನಡೆಸಿ ನಂತರ ಮದುವೆಯಾಗಿದ್ದರು. ನಂತರದ ದಾಂಪತ್ಯ ಜೀವನ ಎರಡು ವರ್ಷ ಚೆನ್ನಾಗಿಯೇ ಮುಂದುವರೆಯಿತು.

ನಂತರ ಲಾಕ್‌ಡೌನ್‌ ಹಿನ್ನೆಲೆಯಲ್ಲಿ ಭವೇಶ್‌ ಅವರ ಉದ್ಯೋಗ ಹೋಯಿತು. ಬೇರೆ ದಾರಿ ಕಾಣದೇ ಅವರು ಆಯ್ಕೆ ಮಾಡಿಕೊಂಡ ಮಾರ್ಗ ಮಾತ್ರ ಭಯಾನಕ ಹಾಗೂ ದಾಂಪತ್ಯಕ್ಕೆ ಕೊಳ್ಳಿ ಇಟ್ಟಿದ್ದು.

ಅಷ್ಟಕ್ಕೂ ಆಗಿದ್ದೇನೆಂದರೆ ಪತಿಯ ಬಗ್ಗೆ ಭವೇಶ್‌ ಅವರ ಪತ್ನಿಗೆ ಸಂದೇಹ ಬರಲು ಶುರುವಾಯಿತು. ತನ್ನ ಗಂಡ ಮೊದಲಿನಂತೆ ಇಲ್ಲ ಎಂದು ಎನ್ನಿಸತೊಡಗಿತು. ಅವರ ಮೇಲೆ ಕಣ್ಣಿಟ್ಟಿದ್ದ ಪತ್ನಿಗೆ ಅವರ ಲ್ಯಾಪ್‌ಟಾಪ್‌ನಲ್ಲಿ ಏನೋ ರಹಸ್ಯ ಇದೆ ಎಂದು ಅನ್ನಿಸತೊಡಗಿತು.

ನಂತರ ಸಾಫ್ಟ್‌ವೇರ್‌ ಉದ್ಯೋಗಿಯಾಗಿರುವ ತಮ್ಮ ಸಹೋದನ ಸಹಾಯದಿಂದ ಲ್ಯಾಪ್‌ಟಾಪ್‌ ಓಪನ್‌ ಮಾಡಿಸಿದರು. ಅದನ್ನು ತಡಕಾಡಿದಾಗ ಸೀಕ್ರೇಟ್‌ ಫೋಲ್ಡರ್‌ ಒಂದು ಅವರ ಕಣ್ಣಿಗೆ ಬಿತ್ತು. ಅದನ್ನು ತೆರೆದುನೋಡಿದ ಪತ್ನಿಯ ಹೃದಯವೇ ಕಿತ್ತುಬಂತು. ಇದಕ್ಕೆ ಕಾರಣ ಅದರಲ್ಲಿ ಪತಿಯ ನಗ್ನ ದೇಹದ ಜತೆಗೆ ಹಲವಾರು ಮಹಿಳೆಯರ ಅಶ್ಲೀಲ ಚಿತ್ರಗಳು ಇದ್ದವು. ಜತೆಗೆ ಕಾಮಕ್ರೀಡೆಯ ದೃಶ್ಯಗಳೂ ಇದ್ದವು!

ಮನೆಗೆ ಬಂದ ಪತಿಗೆ ವಿಷಯ ತಿಳಿಸಿದಾಗ ಮೊದಲು ಏನೂ ಹೇಳಲು ಒಪ್ಪದ ಭವೇಶ್‌, ನಂತರ ಜೀವನ ಸಾಗಿಸಲು ಲೈಂಗಿಕ ಕಾರ್ಯಕರ್ತನಾಗಿ ಕೆಲಸ ಮಾಡುವ ವಿಷಯ ತಿಳಿಸಿದರು. ಕುಟುಂಬ ನಿರ್ವಹಣೆಗೆ ಬೇರೆ ದಾರಿ ಕಾಣಿಸಲಿಲ್ಲ. ತಾನು ಮಾಡಿದ್ದು ತಪ್ಪಾಗಿದ್ದು, ಇನ್ಮುಂದೆ ಹೀಗೆ ಮಾಡುವುದಿಲ್ಲ ಅಂತ ಕೂಡ ಹೇಳಿದ್ದಾರೆ.

ಆದರೆ ಇಂಥದ್ದೊಂದು ಕೆಟ್ಟ ಕೆಲಸವನ್ನು ನಡೆಸಿಕೊಂಡು ಬಂದ ಪತಿಯ ವಿರುದ್ಧ ಪತ್ನಿ ಕೇಸ್‌ ಹಾಕಿದ್ದಾರೆ. ಬೆಂಗಳೂರು ಪೊಲೀಸರ ವನಿತಾ ಸಹಾಯವಾಣಿಗೆ (ಮಹಿಳಾ ಸಹಾಯವಾಣಿ) ದಂಪತಿಯನ್ನು ಕರೆಸಿ ಮಾತುಕತೆ ನಡೆಸಲಾಯಿತಾದರೂ ಪ್ರಯೋಜನವಾಗಿಲ್ಲ. ಇದೀಗ ವಿಚ್ಛೇದನವನ್ನು ಪತ್ನಿ ಹಾಕಿದ್ದು, ಅದರ ಕೇಸ್‌ ನಡೆಯುತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net