ಸಿಹಿ ಸವಿದು ಹಬ್ಬ ಮುಗಿಸಿದ್ರು... ರಾತ್ರಿಯೇ ಮಾಂಸದಂಗಡಿ ಮುಂದೆ ಕ್ಯೂ ನಿಂತರು!

hosatodaku
Published on

ಬೆಂಗಳೂರು: ನಿನ್ನೆ ತಾನೇ ಯುಗಾದಿ ಹಬ್ಬದ ಹರುಷ ಮುಗಿದಿದೆ. ಬಹುತೇಕ ಕಡೆಗಳಲ್ಲಿ ಯುಗಾದಿ ಹಬ್ಬಕ್ಕಿಂತಲೂ ಅದರ ಮಾರನೆಯ ದಿನ ಅಂದರೆ ಇವತ್ತು ಭಾರಿ ಗಮ್ಮತ್ತು. ಅದೇ ಮಾಂಸದೂಟವನ್ನು ಬಾಯಿಚಪ್ಪರಿಸುತ್ತಾ ತಿನ್ನುವ ಹೊಸತೊಡಕು.

ಇಂದು ಅಂಬೇಡ್ಕರ್‌ ಜಯಂತಿ. ಆದ್ದರಿಂದ ಮಾಂಸದ ಮಾರಾಟವನ್ನು ಇಂದು ನಿಷೇಧಿಸಲಾಗಿದೆ. ಆದರೇನಂತೆ? ಮಾಂಸದ ರುಚಿ ಹತ್ತಿದವರು, ಹಬ್ಬದ ನೆಪದಲ್ಲಿರುವ ಈ ದಿನವನ್ನು ಬಿಡುತ್ತಾರೆಯೆ? ಊರ ಹೊರಗಿರುವ ಮಾಂಸದಂಗಡಿಗಳನ್ನು ಹುಡುಕಿಕೊಂಡು ಹೋಗಿ ಮಾಂಸದ ಖರೀದಿಗೆ ಮುಗಿಬಿದ್ದಿರುವ ದೃಶ್ಯಗಳು ಇಂದು ಸಾಮಾನ್ಯವಾಗಿದೆ.

ಇದು ಒಂದೆಡೆಯಾದರೆ, ನಿನ್ನೆ ಸಿಹಿಯೂಟದ ಹಬ್ಬ ಎನ್ನುವುದನ್ನೂ ಮರೆತು ಸಿಹಿಯೂಟವನ್ನು ತಿಂದು ಹಬ್ಬವನ್ನು ಮುಗಿಸಿ ರಾತ್ರಿಯೇ ಮಾಂಸದಂಗಡಿ ಮುಂದೆ ಕ್ಯೂ ನಿಂತಿರುವ ದೃಶ್ಯ ಕಂಡುಬಂದಿತ್ತು. ಕೆಲವು ಕಡೆಗಳಲ್ಲಂತೂ ತಡರಾತ್ರಿಯವರೆಗೂ ಜನರು ನಿಂತಿದ್ದರು. ಕುರಿ, ಕೋಳಿಗಳ ಮಾರಾಟವೂ ಭರ್ಜರಿಯಾಗಿ ನಡೆದಿತ್ತು.

ಕರೊನಾ ಎರಡನೆಯ ಅಲೆಯು ಮೊದಲಿಗಿಂತಲೂ ತೀವ್ರ ಸ್ವರೂಪ ತಾಳುತ್ತಿದ್ದರೂ, ಅದನ್ನು ಲೆಕ್ಕಿಸದೇ ಜನರು ಮುಗಿಬಿದ್ದಿರುವ ದೃಶ್ಯ ಕೆಲವು ಕಡೆಗಳಲ್ಲಿ ಕಂಡು ಬಂದಿದೆ. ಕರೊನಾದಿಂದಾಗಿ ಮಾಂಸದಂಗಡಿಗಳ ಮುಂದೆ ಸಾಮಾಜಿಕ ಅಂತಕ ಕಾಪಾಡಿಕೊಳ್ಳಲು ವ್ಯವಸ್ಥೆ ಕಲ್ಪಿಸಲಾಗಿದ್ದರೂ ಕೆಲವು ಕಡೆಗಳಲ್ಲಿ ತಂಡೋಪತಂಡವಾಗಿ ಜನರು ನಿಂತಿರುವ ದೃಶ್ಯಗಳು ಕಾಣಸಿಕ್ಕಿವೆ. ಕೆಲವು ಮಾಂಸದಂಗಡಿಗಳಲ್ಲಿ ದೇಹದ ಉಷ್ಣತೆ ಪರೀಕ್ಷಿಸಿದ ಬಳಿಕವೇ ಮಾಂಸ ಖರೀದಿಗೆ ಬಿಡುತ್ತಿರುವ ದೃಶ್ಯಗಳೂ ಕಾಣಿಸುತ್ತಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net