ನನ್ನ ಚಿತ್ರಕ್ಕೆ ನೀವೇ ಹೀರೋಯಿನ್​: ಖ್ಯಾತ ನಟಿಗೆ ‘777 ಚಾರ್ಲಿ’ ನಿರ್ದೇಶಕನ ಹೆಸರಲ್ಲಿ ಕಾಲ್​! ಮುಂದಾಗಿದ್ದೇ ಬೇರೆ...

fake
Published on

ಕಾಸರಗೋಡು: ಮಲಯಾಳ ಭಾಷೆಯ ನಟಿ ಮಾಲಾ ಪಾರ್ವತಿ ಅವರಿಗೆ ಸಿನಿಮಾದಲ್ಲಿ ಅವಕಾಶ ನೀಡುವುದಾಗಿ ‘777 ಚಾರ್ಲಿ’ ಸಿನಿಮಾ ನಿರ್ದೇಶಕ ಕಾಸರಗೋಡು ಮೂಲದ ಕಿರಣ್‌ರಾಜ್ ಹೆಸರಿನಲ್ಲಿ ಅಪರಿಚಿತನೊಬ್ಬ ನಿರಂತರ ಕರೆ ಮಾಡಿ ವಂಚಿಸಲು ಯತ್ನಿಸಿದ್ದಾನೆ. ವಿಷಯ ತಿಳಿದ ಕಿರಣ್‌ರಾಜ್ ವಂಚನೆಯನ್ನು ಮಂಗಳವಾರ ಬೆಳಕಿಗೆ ತಂದಿದ್ದಾರೆ.

ಹೊಸ ಚಿತ್ರದಲ್ಲಿ ಅವಕಾಶ ನೀಡುವುದಾಗಿ ಕಿರಣರಾಜ್ ಹೆಸರಿನಲ್ಲಿ ಕರೆ ಬರುತ್ತಿರುವ ಬಗ್ಗೆ ನಟಿ ಮಾಲಾ ಪಾರ್ವತಿ ಅವರು ‘777 ಚಾರ್ಲಿ’ ಚಿತ್ರದ ಸೌಂಡ್ ಡಿಸೈನರ್ ಹಾಗೂ ಪರಿಚಿತರಾದ ಎಂ.ಆರ್.ರಾಜಾಕೃಷ್ಣ ಅವರಿಗೆ ತಿಳಿಸಿದ್ದರು. ರಾಜಾಕೃಷ್ಣ ಮೂಲಕ ವಿಷಯ ತಿಳಿದ ಕಿರಣ್‌ರಾಜ್, ಮಾಲಾ ಪಾರ್ವತಿ ಅವರೇ ಅಪರಿಚಿತನಿಗೆ ಕಾನ್ಫರೆನ್ಸ್ ಕರೆ ಮಾಡಿ ಚಲನಚಿತ್ರದ ವಿವರಗಳನ್ನು ಕೇಳಿಸಿದರು.

ಆತ ಮಾತನಾಡಲು ಆರಂಭಿಸಿದಾಗ ಕಿರಣ್‌ರಾಜ್ ಮಧ್ಯಪ್ರವೇಶಿಸಿ ಆತ ಯಾರು ಮತ್ತು ಉದ್ದೇಶವೇನು ಎಂದು ವಿಚಾರಿಸಿದ್ದು, ಬಲೆಗೆ ಬಿದ್ದೆನೆಂದು ಅರಿತ ವಂಚಕ ಕಾಲ್ ಕಟ್ ಮಾಡಿ ಪೋನ್ ಸ್ವಿಚ್‌ಆಫ್ ಮಾಡಿದ್ದಾನೆ.

ಈ ಬಗ್ಗೆ ಪ್ರತಿಕ್ರಿಯಿಸಿದ ನಿರ್ದೇಶಕ ಕಿರಣ್‌ರಾಜ್, ಆತನ ಪೋನ್ ಕರೆಯನ್ನು ರೆಕಾರ್ಡ್ ಮಾಡಿದ್ದೇವೆ. ಇಂತಹ ವಂಚಕರ ಬಲೆಗೆ ಹಲವು ಯುವಕರು, ಯುವತಿಯರು ಬೀಳುವ ಸಾಧ್ಯತೆ ಇದೆ. ಅಪರಿಚಿತರು ಈ ರೀತಿ ಹಲವರನ್ನು ವಂಚಿಸಿರುವ ಸಾಧ್ಯತೆಯಿದ್ದು, ಎಚ್ಚರಿಕೆಯಿಂದಿರಿ. ತಾನು ಈವರೆಗೆ ಹೊಸ ಪ್ರಾಜೆಕ್ಟ್ ಆರಂಭಿಸಿಲ್ಲ. ಆರಂಭಿಸಿದರೆ, ಸೋಷಿಯಲ್ ಮೀಡಿಯಾದಲ್ಲಿ ಬಹಿರಂಗಪಡಿಸುತ್ತೇನೆ ಎಂದಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net