

ಮೈಸೂರು: ಮದುವೆಯ ವಯಸ್ಸಿಗೆ ಬಂದರೂ ಮದುವೆಯಾಗಿಲ್ಲದಿದ್ದರೆ, ಎಲ್ಲರಿಂದಲೂ ಮದುವೆ ಯಾವಾಗ ಎನ್ನುವ ಪ್ರಶ್ನೆಗಳ ಸುರಿಮಳೆ, ಮದುವೆಯಾದ ಮೇಲೆ ಮಕ್ಕಳಾಗದಿದ್ದರೆ ಅದರ ಬಗ್ಗೆ ಪ್ರಶ್ನೆಗಳ ಮೇಲೆ ಪ್ರಶ್ನೆ. ಇಂಥ ಪ್ರಶ್ನೆಗಳಿಂದ ಬೇಸತ್ತಿರುವ ಮಗಳನ್ನು ನೋಡಲಾಗದೇ ಮೈಸೂರು ಜಿಲ್ಲೆಯ ನಂಜನಗೂಡಿನ ಈ ಅಪ್ಪ ಮಾಡಿದ್ದು ಮಾತ್ರ ಬಲು ಭಯಾನಕ ಕೃತ್ಯ!
ಗಂಗರಾಜು ಎನ್ನುವವರು ಮಾಡಿರುವ ವಿಷಯವೇನು ಎಂದು ತಿಳಿಯುವ ಮೊದಲು ನಾಲ್ಕೈದು ದಿನಗಳ ಹಿಂದೆ ನಂಜನಗೂಡಿನಲ್ಲಿ ಭಿಕ್ಷುಕಿ ಪಾರ್ವತಿ ಎಂಬುವವರ ವಿಷಯ ಹೇಳಲೇಬೇಕು. ಇವರ ಮೂರು ವರ್ಷದ ಮಗು ದೇವಸ್ಥಾನದ ಬಳಿ ಆಟವಾಡುತ್ತಿತ್ತು. ಇದಕ್ಕಿದ್ದಂತೆಯೇ ದಿಢೀರ್ ಕಣ್ಮರೆಯಾಯಿತು.
ಎಲ್ಲೆಡೆ ಮಗುವಿಗಾಗಿ ಹುಡುಕಾಟ ನಡೆಸಿದ ಪಾರ್ವತಿ, ನಂತರ ಪೊಲೀಸರಿಗೆ ವಿಷಯ ತಿಳಿಸಿದ್ದರು. ಪೊಲೀಸರು ನಾಲ್ಕೈದು ದಿನಗಳಿಂದ ಕಳ್ಳನಿಗಾಗಿ ಹುಡುಕಾಟ ನಡೆಸಿದ್ದರು. ಆದರೆ ಅದು ಎಲ್ಲಿಯೂ ಪತ್ತೆಯಾಗಿರಲಿಲ್ಲ.
ಇದನ್ನೂ ಓದಿ: ಪಾಯಲ್ ಮೇಲೆ ಒಂದು ಕೋಟಿ ಮಾನನಷ್ಟ ಕೇಸ್ ಹಾಕಿದ ರಿಚಾ …
ಅದೇ ಇನ್ನೊಂದೆಡೆ, ಮಗಳಿಗೆ ಮದುವೆಯಾಗಿ ನಾಲ್ಕು ವರ್ಷವಾದರೂ ಮಕ್ಕಳಾಗಿಲ್ಲ ಎಂಬ ಕೊರಗಿನಲ್ಲಿ ಗಂಗರಾಜು ಇದ್ದರು. ನಂತರ ಯಾರೋ ಇವರಿಗೆ ಬೇರೆಯ ಮಗುವೊಂದು ತಂದು ಪೋಷಿಸಿದರೆ ಮಕ್ಕಳಾಗುತ್ತದೆ ಎಂದು ಯಾರೋ ಇವರಿಗೆ ಬಿಟ್ಟಿ ಐಡಿಯಾ ಕೊಟ್ಟುಬಿಟ್ಟಿದ್ದಾರೆ.
ಮಗಳ ಗೋಳಾಟ ನೋಡಲಾಗದ ಗಂಗರಾಜು ಅವರು ಅದೇ ದೇವಸ್ಥಾನದ ಬಳಿಗೆ ಹೋಗಿದ್ದಾರೆ. ಅಲ್ಲಿ ಪಾರ್ವತಿ ಅವರ ಮಗು ಆಡುತ್ತಿದ್ದುದನ್ನು ನೋಡಿದ್ದಾರೆ. ಮಗಳ ದೃಶ್ಯ ಕಣ್ಮುಂದೆ ಬಂದಿದೆ. ಆ ಮಗುವಿನ ಅಮ್ಮನ ನೋವು ಅವರಿಗೆ ಮಗಳ ಎದುರು ಕಾಣಿಸಲೇ ಇಲ್ಲ. ಹಾಗೆಯೇ ಮಗುವನ್ನು ಅಪಹರಿಸಿಕೊಂಡು ಬಂದುಬಿಟ್ಟಿದ್ದಾರೆ.
ಇತ್ತ ಮಗುವಿಗಾಗಿ ಹುಡುಕಾಟ ನಡೆಸಿದಾಗ ಗಂಗರಾಜು ಸಿಕ್ಕಿಬಿದ್ದಿದ್ದಾರೆ. ಪೊಲೀಸರು ಬಂಧಿಸಿದಾಗ ವಿಷಯ ತಿಳಿಸಿದ್ದಾರೆ. ಇದೀಗ ಈ ಅಪ್ಪ ಜೈಲಿನಲ್ಲಿ ಇದ್ದಾರೆ.