ಅತ್ಯಾಚಾರದ ವಿರುದ್ಧ ದೂರು ದಾಖಲಿಸಲು 800 ಕಿ.ಮೀ ದೂರ ಧಾವಿಸಿದ ಯುವತಿ!

rape on napali
Published on

ನಾಗ್ಪುರ: ಪರಿಚಯದ ಯುವಕನ ಜತೆ ಹೋಟೆಲ್​ ಹೋಗಿದ್ದ ಯುವತಿಯ ಮೇಲೆ ಆತ ಅತ್ಯಾಚಾರ ಎಸಗಿ, ವಿಡಿಯೋ ಮಾಡಿಟ್ಟುಕೊಂಡು ಬ್ಲ್ಯಾಕ್​ಮಾಡುತ್ತಿದ್ದ ಆತಂಕದ ಘಟನೆ ಉತ್ತರ ಪ್ರದೇಶದ ಲಖನೌನಲ್ಲಿ ನಡೆದಿದೆ.

ಆದರೆ ಈ ವ್ಯಕ್ತಿ ತನಗೆ ಜೀವಬೆದರಿಕೆ ಹಾಕುತ್ತಿರುವ ಹಿನ್ನೆಲೆಯಲ್ಲಿ ಯುವತಿಯು ಊರಿನಲ್ಲಿ ದೂರು ದಾಖಲು ಮಾಡಲು ಹೆದರಿ, 800 ಕಿ.ಮೀ ದೂರ ಬಂದು ಮಹಾರಾಷ್ಟ್ರದ ನಾಗ್ಪುರದ ಕೊರಾಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಿದ್ದಾಳೆ.

22 ವರ್ಷದ ನೇಪಾಳಿ ಯುವತಿ ಈ ರೀತಿ ಅನ್ಯಾಯಕ್ಕೆ ಒಳಗಾಗಿದ್ದಾಳೆ. 2018 ರಲ್ಲಿ ನೇಪಾಳದಿಂದ ಉತ್ತರ ಪ್ರದೇಶದ ಲಖನೌಗೆ ಕೆಲಸಕ್ಕೆ ಬಂದ ಯುವತಿ ಫೈಜಾಬಾದ್ ರಸ್ತೆಯಲ್ಲಿನ ಬಾಡಿಗೆ ಮನೆಯಲ್ಲಿ ಕಳೆದ ಮಾರ್ಚ್‌ವರೆಗೂ ವಾಸವಿದ್ದಳು. ಬಾಡಿಗೆ ಮನೆಯ ಓನರ್​ ಆಗಿರುವ ಮಹಿಳೆ ಈಕೆಗೆ ದುಬೈನಲ್ಲಿರುವ ಸಾಫ್ಟ್‌ವೇರ್ ಇಂಜಿನಿಯರ್ ಪ್ರವೀಣ ರಾಜ್ಪಾಲ್ ಯಾದವ್ ಎಂಬಾತನನ್ನು ಪರಿಚಯಿಸಿದ್ದಳು. ಇಬ್ಬರು ವಿಡಿಯೋ ಕಾಲ್ ಮೂಲಕ ಮಾತನಾಡುತ್ತಿದ್ದರು.

ಕಳೆದ ಕೆಲ ದಿನಗಳ ನಂತರ ಲಖನೌಗೆ ಬಂದ ಪ್ರವೀಣ ರಾಜ್ಪಾಲ್ ಯಾದವ್ ಹೋಟೆಲ್ ಒಂದರಲ್ಲಿ ರೂಂ ಬುಕ್ ಮಾಡಿದ್ದಾನೆ. ನಂತರ ಯುವತಿಯನ್ನು ಕರೆದಿದ್ದಾನೆ. ಈಕೆ ಅವನು ಹೇಳಿದಂತೆ ಅಲ್ಲಿಗೆ ಹೋಗಿದ್ದಾಳೆ. ನಂತರ ಅತ್ಯಾಚಾರ ಮಾಡಿದ ಆತ ಅದರ ವಿಡಿಯೋ, ಫೋಟೋ ಮಾಡಿಕೊಂಡಿದ್ದಾನೆ. ಯಾರಿಗಾದರೂ ವಿಷಯ ತಿಳಿಸಿದರು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಮಾಡುವುದಾಗಿ ಪೀಡಿಸುತ್ತಿದ್ದ.

ಇದರಿಂದ ಹೆದರಿ ಯುವತಿ, ನಾಗ್ಪುರಕ್ಕೆ ಬಂದು ಕೇಸು ದಾಖಲು ಮಾಡಿದ್ದಾಳೆ. ಯಾರು ಎಲ್ಲಿ ಬೇಕಾದರೂ ಕೇಸು ದಾಖಲು ಮಾಡಲು ಈಗ ಕಾನೂನಿನ ಅಡಿ ಅವಕಾಶ ಇದೆ. ಹೀಗೆ ಕೇಸ್​ ದಾಖಲು ಮಾಡಿದಾಗ ಘಟನೆ ನಡೆದ ಸಂಬಂಧಪಟ್ಟ ಠಾಣೆಗೆ ಅದನ್ನು ಹಸ್ತಾಂತರಿಸಲಾಗುತ್ತದೆ.

ಇದರ ಪ್ರಯೋಜನ ಪಡೆದ ಯುವತಿ ಇದೀಗ ಕೇಸು ದಾಖಲು ಮಾಡಿದ್ದಾಳೆ ಎಂದು ನಾಗ್ಪುರ ಡಿಸಿಪಿ ಹೇಳಿದ್ದಾರೆ. ಅವರು ಇದನ್ನೀಗ ಲಖನೌಗೆ ಕಳುಹಿಸಿಕೊಡುವ ತಯಾರಿಯಲ್ಲಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net