

ಬೆಂಗಳೂರು: ಆಗಸ್ಟ್ 11ರಂದು ನಡೆದಿರುವ ಡಿ.ಜೆ.ಹಳ್ಳಿ, ಕೆ.ಜಿಹಳ್ಳಿ ಭಯಾನಕ ಗಲಭೆ ಪ್ರಕರಣದಲ್ಲಿ ಕಾಂಗ್ರೆಸ್ನ ಮಾಜಿ ಮೇಯರ್ ಸಂಪತ್ಕುಮಾರ್ ಅವರು ಗಲಭೆಕೋರರ ನಡುವೆ ನಡೆಸಿರುವ ಕಾಲ್ ರೆಕಾರ್ಡ್ಗಳು ಲೀಕ್ ಆಗುತ್ತಿದ್ದಂತೆಯೇ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಪೊಲೀಸರ ವಿರುದ್ಧ ಹರಿಹಾಯ್ದಿದ್ದಾರೆ.
ಇದು ಬಿಜೆಪಿ ನಡೆಸುತ್ತಿರುವ ಕುತಂತ್ರ. ಡಿಜೆಹಳ್ಳಿ ಘಟನೆಗೆ ಪೊಲೀಸರ ವೈಫಲ್ಯವೇ ಕಾರಣ, ಪೊಲೀಸರು ಸರ್ಕಾರದ ತಾಳಕ್ಕೆ ಕುಣಿಯುತ್ತಿದ್ದಾರೆ ಎಂದು ಕಿಡಿ ಕಾರಿದ್ದಾರೆ.
ಗಲಭೆ ನಡೆದ ದಿನ ಸಂಪತ್ರಾಜ್ ಮೊಬೈಲ್ಫೋನ್ನಿಂದ ಹೊರಹೋಗಿರುವ ಮತ್ತು ಒಳಬಂದಿರುವ ಕರೆಗಳ ದಾಖಲೆಗಳು ಪೊಲೀಸರಿಗೆ ಸಿಕ್ಕಿದ್ದು ಅದು ಲೀಕ್ ಆಗಿದೆ. ಸಂಪತ್ರಾಜ್ ಹಾಗೂ ಗಲಭೆ ನಡೆಸಿ, ದಾಂಧಲೆ ಸೃಷ್ಟಿಸಿ, ಸುತ್ತಮುತ್ತಲೂ ಬೆಂಕಿ ಹಚ್ಚುವಲ್ಲಿ ಪ್ರಮುಖ ಪಾತ್ರ ವಹಿಸಿರುವ ಆರೋಪ ಹೊತ್ತ ಕೆಲವರ ನಡುವೆ ನಡೆದಿರುವ ಅಂದು ನಡೆದಿರುವ ಮಾತುಕತೆಯ ಕಾಲ್ ರೆಕಾರ್ಡ್ಸ್ ಇದಾಗಿದೆ.
ಕಾಲ್ ರೆಕಾರ್ಡ್ಸ್ ಫುಲ್ ಡಿಟೇಲ್ಸ್ ಇಲ್ಲಿದೆ ನೋಡಿ: ಡಿಜೆಹಳ್ಳಿ ಗಲಭೆಕೋರರೊಂದಿಗೆ ಸಂಪರ್ಕ- ಕಾಲ್ ರೆಕಾರ್ಡ್ಸ್ನಿಂದ ‘ಸಿಕ್ಕಿಬಿದ್ದ’ ಸಂಪತ್ರಾಜ್
ಇದರ ಬಗ್ಗೆ ಕಿಡಿಕಾರಿರುವ ಡಿ.ಕೆ.ಶಿವಕುಮಾರ್ ಸಂಪತ್ ರಾಜ್ ಫೋನ್ಕಾಲ್ ಡಿಟೇಲ್ ಲೀಕ್ ಆಗಿದ್ದು ಹೇಗೆ? ತಮ್ಮ ವೈಫಲ್ಯಗಳನ್ನು ಮುಚ್ಚೋಕೆ ಬಿಜೆಪಿ ಇಂತಹ ಪ್ರಯತ್ನ ಮಾಡುತ್ತಿದೆ, ಮೊದಲೇ ಕಾಲ್ ರೆಕಾರ್ಡ್ಗಳನ್ನು ಲೀಕ್ ಮಾಡಿದರೆ ತನಿಖೆ ನಡೆಸುವುದು ಹೇಗೆ ಎಂದು ಆಕ್ರೋಶ ವ್ಯಕ್ತಪಡಿಸಿದ ಡಿ.ಕೆ.ಶಿ, ಈ ಘಟನೆಯಿಂದ ಯಾರೂ ವಿಚಲಿತರಾಗಬೇಕಿಲ್ಲ. ಕಾಂಗ್ರೆಸ್ ಪಕ್ಷ ಹೆದರುವ ಪ್ರಶ್ನೆ ಇಲ್ಲ ಎಂದು ಅಭಯ ನೀಡಿದರು.
ಇದೇ ವೇಳೆ, ಗಲಭೆಯ ಪ್ರಮುಖ ಆರೋಪಿಗಳಲ್ಲಿ ಒಬ್ಬರಾಗಿರುವ ಸಂಪತ್ರಾಜ್ ಅವರ ನೆರವಿಗೆ ಡಿ.ಕೆ.ಶಿವಕುಮಾರ್ ನಿಂತಿದ್ದಾರೆ ಎನ್ನಲಾಗುತ್ತಿದೆ. ಅವರ ವಿರುದ್ಧ ಯಾವುದೇ ಕ್ರಮ ತೆಗೆದುಕೊಳ್ಳದಂತೆ ಸೂಚನೆ ನೀಡಿದ್ದಾರೆ ಎಂಬ ಮಾತೂ ಕೇಳಿಬರುತ್ತಿರುತ್ತದೆ. ಇದಕ್ಕೆ ಪುಷ್ಟಿ ನೀಡಲು ಎಂಬಂತೆ ಮಾಧ್ಯಮಗಳು ಕೇಳಿದ ಪ್ರಶ್ನೆಗೆ ಉತ್ತರಿಸಿದ ಶಿವಕುಮಾರ್, ಸಂಪತ್ ರಾಜ್ ಉಚ್ಛಾಟನೆಗೆ ಶಾಸಕ ಅಖಂಡ ಶ್ರೀನಿವಾಸ್ ಮೂರ್ತಿ ಒತ್ತಾಯವನ್ನು ಮಾಧ್ಯಮಗಳ ಮುಂದೆ ಮಾಡುವುದಲ್ಲ, ಪಕ್ಷದ ವೇದಿಕೆಯಲ್ಲಿ ಚರ್ಚಿಸಲಿ, ಆಮೇಲೆ ನೋಡೋಣ ಎಂದಿದ್ದಾರೆ.
ಇದೇ ವೇಳೆ, ಗಲಭೆ ವಿಚಾರದಲ್ಲಿ ಶಾಸಕ ಅಖಂಡ ಶ್ರೀನಿವಾಸಮೂರ್ತಿಯವರನ್ನು ಪಕ್ಷ ಕೈಬಿಟ್ಟಿದ್ದು, ಸಂಪತ್ರಾಜ್ ನೆರವಿಗೆ ಧಾವಿಸಿರುವುದಾಗಿ ಕೆಲವು ಮೂಲಗಳು ಹೇಳುತ್ತಿವೆ.