ಶಂಕರಾಚಾರ್ಯರ ಪುತ್ಥಳಿ ಮೇಲೆ ಎಸ್‌ಡಿಪಿಐ ಬಾವುಟ: ಆರೋಪಿ ಇವನೇ ನೋಡಿ...

puttali
Published on

ಚಿಕ್ಕಮಗಳೂರು: ಇತ್ತ ಬೆಂಗಳೂರಿನ ಡಿ.ಜೆ.ಹಳ್ಳಿಯಲ್ಲಿ ಪೈಗಂಬರ್‌ ವಿರುದ್ದದ ಅವಹೇಳನಕಾರಿ ಪೋಸ್ಟ್‌ ನೆಪಮಾಡಿಕೊಂಡು ಗಲಭೆಕೋರರು ಆತಂಕಸೃಷ್ಟಿಸಿರುವ ಬೆನ್ನಲ್ಲೇ ಅತ್ತ ಚಿಕ್ಕಮಗಳೂರಿನ ಶೃಂಗೇರಿಯ ಶಂಕರಾಚಾರ್ಯರ ಪುತ್ಥಳಿ ಮೇಲೆ ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್‌ಡಿಪಿಐ) ಸಂಘಟನೆಯ ಬಾವುಟ ಹಾಕಿ ಆತಂಕದ ವಾತಾವರಣ ಸೃಷ್ಟಿಸಲಾಗಿತ್ತು.

ಬೆಂಗಳೂರಿನಲ್ಲಿ ಗಲಭೆ ಆದ ಬೆನ್ನಲ್ಲೇ ಶೃಂಗೇರಿಯಲ್ಲಿ ಈ ರೀತಿಯ ಕುಕೃತ್ಯ ಎಸಗಿದ್ದು ಸಾಕಷ್ಟು ಅನುಮಾನಕ್ಕೆ ಎಡೆಮಾಡಿ ಕೊಟ್ಟಿತ್ತು. ಸಾಮರಸ್ಯ ಕದಡಲು ಈ ರೀತಿಯ ಕುಕೃತ್ಯಗಳನ್ನು ಮಾಡಿದ್ದಾರೆ ಎಂದು ಹೇಳಲಾಗಿತ್ತು.

ಬೆಂಗಳೂರಿನಲ್ಲಿ ಕಿಡಿಗೇಡಿಗಳು ಅಪಾರ ಆಸ್ತಿ, ಪ್ರಾಣಕ್ಕೆ ಹಾನಿಯುಂಟು ಮಾಡಿದ್ದರೆ, ಚಿಕ್ಕಮಗಳೂರಿನಲ್ಲಿ ಅಂಥ ಘಟನೆಗಳು ಅದೃಷ್ಟವಶಾತ್‌ ಸಂಭವಿಸಿಲ್ಲ. ಇಂಥ ಘಟನೆ ಸಂಭವಿಸುವ ಆತಂಕದ ನಡುವೆಯೇ ಕ್ಷಿಪ್ರ ಕಾರ್ಯಾಚರಣೆ ಮೂಲಕ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

ಈತನ ಹೆಸರು ಮಿಲಿಂದ್ ಅಲಿಯಾಸ್‌ ಮನೋಹರ ಎಂದು ತಿಳಿದುಬಂದಿದೆ.

ಮಿಲಿಂದ್‌ ಯಾವ ಸಂಘಟನೆಯಲ್ಲೂ ಇಲ್ಲ. ಅವತ್ತು ರಾತ್ರಿ ಆತ ಲಾರಿಗಳನ್ನು ನಿಲ್ಲಿಸುವ ಸ್ಥಳದಲ್ಲಿ ಮಲಗಿದ್ದ. 2012, 2017 ರಲ್ಲಿ ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿದ್ದ. ಈತನಿಗೆ ಯಾವುದೇ ದುರುದ್ದೇಶ, ಸಂಘಟನೆಗಳ ಸಂಬಂಧ ಇಲ್ಲ ಎಂದು ಎಸ್‌ಪಿ ಅಕ್ಷಯ್ ಎಂ.ಹಕಾ ಸ್ಪಷ್ಟಪಡಿಸಿದ್ದಾರೆ.

ಮಿಲಿಂದ್‌ ಕುಡಿದು ಬಾರ್‌ನಿಂದ ಬರುವುದು, ಮಲಗಲು ಜಾಗ ಹುಡುಕುವುದು, ಮಸೀದಿ ಹತ್ತಿರ ಹೋಗಿ ಚಾಪೆ ತರುವುದು, ನಂತರ ಕಟ್ಟೆಯ ಮೇಲಿದ್ದ ಬ್ಯಾನರ್ ತರುವುದು, 100 ಮೀಟರ್ ದೂರದಲ್ಲಿರುವ ಪುತ್ಥಳಿ ಬಳಿ ಭಯದಿಂದ ಬರುವುದು, ಹೆದರಿ ಬ್ಯಾನರ್ ಅನ್ನು ಅಲ್ಲಿ ಬಿಸಾಕುವುದು ಎಲ್ಲವೂ ಸಿಸಿಟಿವಿಯಲ್ಲಿ ದಾಖಲಾಗಿದೆ.

ಕೆಲ ದಿನಗಳ ಹಿಂದೆ ಮಿಲಿಂದ್‌ನನ್ನು ಚಿನ್ನದ ಅಂಗಡಿಯ ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ವಿಚಾರಣೆ ನಡೆಸಿದ್ದರು. ಇದರಿಂದ ಪೊಲೀಸರ ಮೇಲೆ ಅಸಮಾಧಾನಗೊಂಡಿದ್ದ ಈತ ಅವರ ಮೇಲೆ ಸೇಡಿಗಾಗಿ ಹಾತೊರೆಯುತ್ತಿದ್ದ. ಈಗ ಈ ಕೃತ್ಯ ಎಸಗಿದ್ದಾನೆ ಎಂದಿದ್ದಾರೆ ಪೊಲೀಸರು.

ಈ ಘಟನೆಯನ್ನು ತೀವ್ರವಾಗಿ ಖಂಡಿಸಿರುವ ಶೃಂಗೇರಿ ಶಾಸಕ ರಾಜೆಗೌಡ, ಬಾವುಟ ಹಾಕಿದವರ ಮೇಲೆ ನಿರ್ದಾಕ್ಷಣ್ಯ ಕ್ರಮವಾಗಲಿ. ಶೃಂಗೇರಿ ಪೀಠಕ್ಕೆ ಪುರಾತನ ಇತಿಹಾಸವಿದೆ. ಅದು ರಾಜಕೀಯೇತರ ಮಠ. ಆರೋಪಿ ಯಾವುದೇ ಪಕ್ಷದ ಕಾರ್ಯಕರ್ತನಾಗಿದ್ದರೂ ಪ್ರಕರಣದ ಸಂಪೂರ್ಣ ತನಿಖೆಯಾಗಿ ತಪ್ಪು ಮಾಡಿದ್ದವರಿಗೆ ಶಿಕ್ಷೆಯಾಗಬೇಕು. ಆಗ ಮಾತ್ರ ಮುಂದೆ ಈ ರೀತಿಯ ಪ್ರಕರಣಗಳು ತಪ್ಪುತ್ತವೆ. ಧರ್ಮದ ವಿಚಾರದಲ್ಲಿ ಯಾರೂ ರಾಜಕಾರಣ ಮಾಡಬಾರದು ಎಂದಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net