

ಬೆಂಗಳೂರು: ಹಿಂದು ಧರ್ಮ ಧರ್ಮವೇ ಅಲ್ಲ. ಹಿಂದು ಎಂಬ ಶಬ್ದ ಅವಮಾನಕರ ಎಂಬ ಹೇಳಿಕೆ ನೀಡಿರುವ ಸಾಹಿತಿ ಪ್ರೊ. ಕೆ.ಎಸ್.ಭಗವಾನ್ ಅವರ ವಿರುದ್ಧ ಬಹುತೇಕ ಭಾರತೀಯರು ಸಿಡಿದೆದ್ದಿದ್ದಾರೆ. ಈ ರೀತಿ ಹೇಳಿಕೆ ನೀಡುವ ಮೂಲಕ ವಕೀಲೆ ಮೀರಾ ಅವರಿಂದ ನಿನ್ನೆ ಮುಖಕ್ಕೆ ಮಸಿ ಬಳಿಸಿಕೊಂಡಿರುವ ಭಗವಾನ್ ವಿರುದ್ಧ ಈಗ ಹೇಳಿಕೆಗಳು ಬರುತ್ತಿವೆ.
ಇದೀಗ ಅವರ ವಿರುದ್ಧ ಹೇಳಿಕೆ ನೀಡಿರುವ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ, ಭಗವಾನ್ ಅವರ ಪುಣ್ಯ. ಇದು ಭಾರತ. ಪಾಕಿಸ್ತಾನದಂಥ ಮನಸ್ಥಿತಿ ಇಲ್ಲಿಲ್ಲ. ಒಂದು ವೇಳೆ ಪಾಕಿಸ್ತಾನದ ಮನಸ್ಥಿತಿ ಭಾರತೀಯರದ್ದಾಗಿದ್ದರೆ ಅವರ ತಲೆ ಉಳಿಯುತ್ತಿರಲಿಲ್ಲ ಎಂದು ಕಿಡಿ ಕಾರಿದ್ದಾರೆ.
ವಕೀಲೆ ಮೀರಾ ಅವರು ಮಸಿ ಬಳಿದಿರುವುದು ಸರಿಯಲ್ಲ, ಅದನ್ನು ನಾವು ಸಮರ್ಥಿಸಿಕೊಳ್ಳುತ್ತಿಲ್ಲ. ಆದರೆ ಭಗವಾನ್ ಅವರ ಹೇಳಿಕೆಗಳನ್ನು ಯಾರೂ ಒಪ್ಪುವುದಿಲ್ಲ. ಪಾಕಿಸ್ತಾನದಲ್ಲಿ ಅವರು ಹೋಗಿ ಅಲ್ಲಿಯ ಧರ್ಮದ ವಿಷಯ ಮಾತನಾಡಿದ್ದರೆ ಅವರ ಫೋಟೋಗೆ ಇಷ್ಟೊತ್ತಿಗಾಗಲೇ ಹಾರ ಹಾಕಬೇಕಿತ್ತು ಎಂದಿದ್ದಾರೆ.
ಅವರು ಭಾರತದಲ್ಲಿ ಹುಟ್ಟಿರುವುದು ಅವರ ಪುಣ್ಯ. ಹಿಂದೂ ಧರ್ಮ ಹಾಗೂ ದೇವರ ಬಗ್ಗೆ ಅವರು ನೀಡಿರುವ ಹೇಳಿಕೆಗಳನ್ನು ಅವರ ಪಾಲಕರು ಕೂಡ ಒಪ್ಪಿಕೊಳ್ಳುವುದಿಲ್ಲ ಎನ್ನಿಸುತ್ತದೆ. ಭಾರತೀಯ ಸಹನೆಯನ್ನು ದೌರ್ಬಲ್ಯವೆಂದು ತಿಳಿದಿರುವುದು ಅವರ ಮೂರ್ಖತನ ಎಂದರು.
ಹಿಂದು ಧರ್ಮ ಎಂದರೆ ಬ್ರಾಹ್ಮಣ ಎಂದರ್ಥ. ಗ್ರಾಮೀಣ ಜನರಿಗೆ ಹಿಂದು ಎಂದರೆ ಗೊತ್ತೇ ಇಲ್ಲ. ನೀವು ಯಾವ ಧರ್ಮ ಎಂದರೆ ಒಕ್ಕಲಿಗ, ಕುರುಬ ಅಂತ ಜಾತಿಗಳ ಹೆಸರನ್ನಷ್ಟೇ ಹೇಳುತ್ತಾರೆ. ಹಿಂದು ಪದವನ್ನೇ ತೆಗೆದು ಹಾಕಬೇಕು. ನಿಮಗೆ ಮಾನ ಮರ್ಯಾದೆ ಇದ್ದರೆ ಆ ಪದ ತೆಗೆದು ಹಾಕಿ ಎಂದು ಭಗವಾನ್ ಹೇಳಿದ್ದರು. ಇದು ಮೀರಾ ಅವರನ್ನು ಸಿಡಿದೇಳುವಂತೆ ಮಾಡಿ ಅವರ ಮುಖಕ್ಕೆ ಮಸಿ ಬಳಿದಿದ್ದರು.
ಅದೇ ಇನ್ನೊಂದೆಡೆ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಭಗವಾನ್ ಅವರ ಮುಖಕ್ಕೆ ಮಸಿಬಳೆದಿರುವ ವಕೀಲೆ ವಿರುದ್ಧ ಪ್ರಕರಣ ದಾಖಲಿಸಿ ಕ್ರಮಕೈಗೊಳ್ಳಬೇಕು ಎಂದು ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರನ್ನು ಒತ್ತಾಯಿಸಿದ್ದಾರೆ.
ಸೈದ್ಧಾಂತಿಕ ಭಿನ್ನಾಭಿಪ್ರಾಯವನ್ನು ಚರ್ಚೆ-ಸಂವಾದದ ಮೂಲಕ ಬಗೆಹರಿಸಿಕೊಳ್ಳಬೇಕೇ ವಿನಃ ಈ ರೀತಿಯ ಅಸಭ್ಯ ನಡವಳಿಕೆ ಮೂಲಕ ಅಲ್ಲವೆಂದು ಬೇಸರ ವ್ಯಕ್ತಪಡಿಸಿದ್ದಾರೆ.