ಶಾಲೆಗೆ ಹೋಗಿ ಬಂದಿದ್ದಕ್ಕೂ ಮನೆಯಲ್ಲಿ ವಿಶೇಷ ಸ್ವಾಗತ; ತೆಂಗಿನಕಾಯಿ ಒಡೆದು, ಮಗನಿಗೆ ಹಾರ ಹಾಕಿ ಸ್ವಾಗತಿಸಿದ ತಂದೆ-ತಾಯಿ

Feature
Published on

ಬೆಳಗಾವಿ: ಅತ್ತೆ ಮನೆಯಲ್ಲಿ ಅಳಿಯನಿಗೆ ವಿಶೇಷ ಸ್ವಾಗತ ಕೋರುವುದನ್ನು ಕೇಳಿರುತ್ತೇವೆ, ನೋಡಿರುತ್ತೇವೆ. ಆದರೆ ಇಲ್ಲೊಬ್ಬ ವಿದ್ಯಾರ್ಥಿಗೆ ಶಾಲೆಗೆ ಹೋಗಿ ಬಂದಿದ್ದಕ್ಕೂ ಮನೆಯಲ್ಲಿ ವಿಶೇಷ ಸ್ವಾಗತ ಸಿಕ್ಕಿದೆ.

ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ಪಟ್ಟಣದ ಮೂರನೇ ತರಗತಿ ವಿದ್ಯಾರ್ಥಿ ತಮೀಮ್​ ಕುಡಚೆ ಎಂಬಾತನಿಗೆ ಮನೆಯವರು ವಿಶೇಷವಾಗಿ ಬರಮಾಡಿಕೊಂಡಿದ್ದಾರೆ. ಇಲ್ಲಿನ ಮುಲ್ಲಾ ಪ್ಲಾಟ್ ನಿವಾಸಿಯಾಗಿರುವ ಈ ವಿದ್ಯಾರ್ಥಿಯ ತಂದೆ ಸಲೀಮ್ ಕುಡಚೆ ಹಾಗೂ ತಾಯಿ, ಮಗ ಶಾಲೆಯಿಂದ ಮನೆಗೆ ಮರಳುತ್ತಿದ್ದಂತೆ ತೆಂಗಿನಕಾಯಿ ಒಡೆದು, ಹಾರ ಹಾಕಿ ಸ್ವಾಗತಿಸಿದ್ದಾರೆ.

ಕರೊನಾ ಸಾಂಕ್ರಾಮಿಕ ಪಿಡುಗಿನಿಂದಾಗಿ ಶಾಲೆಯ ಭೌತಿಕ ತರಗತಿಗಳು ಸ್ಥಗಿತಗೊಂಡು ಮತ್ತೆ ಆರಂಭಗೊಂಡಿದೆ. ಎರಡು ವರ್ಷದ ಬಳಿಕ ಮತ್ತೆ ಶಾಲೆಗೆ ಹೋಗಿ ಬಂದಿರುವ ಖುಷಿಗೆ ಈ ಪಾಲಕರು ಮಗನನ್ನು ಹೀಗೆ ಸ್ವಾಗತಿಸಿ ಸಂತಸ ವ್ಯಕ್ತಪಡಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net