18 ವರ್ಷಕ್ಕೆ ಕೊಲೆ ಮಾಡಿದ್ದವ 36 ವರ್ಷಕ್ಕೇ ಕೊಲೆಯಾಗಿ ಹೋದ; ಜೈಲಿಂದ ಬಿಡುಗಡೆಯಾದ ಮೂರೇ ದಿನದಲ್ಲಿ ಈ ಲೋಕದಿಂದಲೇ ಬಿಡುಗಡೆ!

Untitled-2
Published on

ಬೆಂಗಳೂರು: ತನ್ನ ಹದಿನೆಂಟನೆಯ ವಯಸ್ಸಿನಲ್ಲಿ ಕೊಲೆಯೊಂದನ್ನು ಮಾಡಿ ಜೈಲುಪಾಲಾಗಿದ್ದವ, ಇದೀಗ ತನ್ನ 36ನೇ ವಯಸ್ಸಿನಲ್ಲೇ ಕೊಲೆಯಾಗಿ ಹೋಗಿದ್ದಾನೆ. ಇದು ಇಂದು ರಾತ್ರಿಯಷ್ಟೇ ಬರ್ಬರವಾಗಿ ಕೊಲೆಯಾಗಿರುವ ರೌಡಿಶೀಟರ್ ಜೆ.ಸಿ.ಆನಂದ್ ಎಂಬಾತನ ಪಾಪಕೂಪದ ಕಿರುಪರಿಚಯ.

ಪೀಣ್ಯ ಪೊಲೀಸ್ ಠಾಣೆಯಲ್ಲಿ ರೌಡಿಶೀಟರ್ ಆಗಿರುವ ಜೆ.ಸಿ. ಆನಂದ್​ ಇಂದು ರಾತ್ರಿ 8 ಗಂಟೆ ಸುಮಾರಿಗೆ ಅದೇ ಪೀಣ್ಯ ಪೊಲೀಸ್ ಠಾಣಾ ವ್ಯಾಪ್ತಿಯ ನೆಲಗದರನಹಳ್ಳಿಯ ಶಿವಪುರ ಬಳಿ ಕೊಲೆಗೀಡಾಗಿದ್ದಾನೆ. ಬೈಕ್​ನಲ್ಲಿ ಬಂದಿದ್ದ ಐದಾರು ಮಂದಿ ಆತನನ್ನು ಸುತ್ತುವರಿದು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿ ಪರಾರಿಯಾಗಿದ್ದಾರೆ.

ಜೆ.ಸಿ. ಆನಂದ್​ ತನ್ನ 18ನೇ ವಯಸ್ಸಿನಲ್ಲಿ ಅಪ್ಪಿ ಎಂಬಾತನನ್ನು ಕೊಲೆ ಮಾಡಿ, ಪೊಲೀಸರ ಕೈಗೆ ಸಿಕ್ಕಿಹಾಕಿಕೊಂಡು ಜೈಲುಪಾಲಾಗಿದ್ದ. ಬಳಿಕ ಜೈಲಿಂದ ಹೊರಬಂದಿದ್ದ ಈತ 2016ರಲ್ಲಿ ಜೆಡಿಎಸ್​ ಲೀಡರ್​ ಆಗಿ ಗುರುತಿಸಿಕೊಂಡಿದ್ದ.

ಅಪಹರಣ ಪ್ರಕರಣವೊಂದರಲ್ಲಿ ಕೆಲವು ದಿನಗಳ ಹಿಂದೆ ಜೈಲುಪಾಲಾಗಿದ್ದ ಈತ ಮೂರು ದಿನಗಳ ಹಿಂದಷ್ಟೇ ಜೈಲಿನಿಂದ ಬಿಡುಗಡೆ ಆಗಿದ್ದ. ಆದರೆ ಇಂದು ಕೆಲವು ದುಷ್ಕರ್ಮಿಗಳುನ್ನು ಈತನನ್ನು ಕೊಲೆ ಮಾಡಿ ಈ ಲೋಕದಿಂದಲೇ ಬಿಡುಗಡೆ ಮಾಡಿದ್ದಾರೆ.

ಪರಿಚಿತರೇ ಹಳೇ ದ್ವೇಷದಿಂದ ಈ ಕೊಲೆ ಮಾಡಿರಬಹುದು ಎಂದು ಅಂದಾಜಿಸಲಾಗಿದ್ದು, ಸ್ಥಳಕ್ಕೆ ಉತ್ತರ ವಿಭಾಗದ ಡಿಸಿಪಿ ವಿನಾಯಕ ವಸಂತ್ ರಾವ್ ಪಾಟೀಲ್, ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net