ಕಿಡ್ನಿ ಮಾರಿ ಹಣ ಕೊಡಲು ಯತ್ನಿಸಿದೆ... ಆಗಲಿಲ್ಲ ಎನ್ನುತ್ತಲೇ ರೈಲಿಗೆ ತಲೆಕೊಟ್ಟ: ಡೆತ್​ನೋಟ್​ನಲ್ಲಿದೆ ಬೆಚ್ಚಿಬೀಳಿಸೋ ರಹಸ್ಯ

railway
Published on

ಹುಬ್ಬಳ್ಳಿ: ‘ಪ್ರೀತಿಯ ಅಪ್ಪ-ಅಮ್ಮ, ನನ್ನ ಸಾವಿಗೆ ನಾನೇ ಕಾರಣ. ಜೀವನದಲ್ಲಿ ಜಿಗುಪ್ಸೆ ಹೊಂದಿ ಮಾನಸಿಕ ಅಸ್ವಸ್ಥನಾಗಿದ್ದೇನೆ. ನನ್ನ ಕಿಡ್ನಿ ಮಾರಿಯಾದರೂ ನಿಮಗೆ ಹಣ ಕೊಡಬೇಕು ಎಂದುಕೊಂಡಿದ್ದೆ. ಆದರೆ, ಯಾರೂ ಕಿಡ್ನಿ ತೆಗೆದುಕೊಳ್ಳಲಿಲ್ಲ. ದಯವಿಟ್ಟು ನನ್ನನ್ನು ಕ್ಷಮಿಸಿ...' ಎಂದು ಡೆತ್​ನೋಟ್​ ಬರೆದಿಟ್ಟ 22 ವರ್ಷದ ಯುವಕ, ರೈಲಿಗೆ ತಲೆಕೊಟ್ಟು ಮೃತಪಟ್ಟಿದ್ದಾನೆ.

ಗದಗ ಜಿಲ್ಲೆ ನರಗುಂದ ತಾಲೂಕು ರೆಡ್ಡೇರ ನಾಗನೂರು ಗ್ರಾಮದ ಅಡಿವೆಪ್ಪ ಭರಮಪ್ಪ ಹಾದಿಮನಿ(22) ಮೃತ ದುರ್ದೈವಿ. ಮನೆಯ ಹಿರಿಯ ಮಗನಾದ ಅಡಿವೆಪ್ಪ ಕುಟುಂಬದ ಜವಾಬ್ದಾರಿ ಹೊತ್ತುಕೊಂಡಿದ್ದ. ಪಿಯುಸಿ ಪರೀಕ್ಷೆಯಲ್ಲಿ ಶೇ.96 ಅಂಕ ಗಳಿಸಿದ್ದ ಅಡಿವೆಪ್ಪ, ಬಿಎಸ್​ಸಿ ಬಾಹ್ಯ ವ್ಯಾಸಂಗ ಮಾಡುತ್ತಿದ್ದ. ಸದ್ಯ ದಾವಣಗೆರೆಯಲ್ಲಿ ಕೂಲಿ ಕೆಲಸ ಮಾಡಿಕೊಂಡಿದ್ದ. ಇದನ್ನೂ ಓದಿರಿ ಶರವೇಗದ ರೈಲಿನ ಎದುರು ಧರ್ಮೇಗೌಡ ನಿಂತಿದ್ಹೇಗೆ? ರೈಲು ಚಾಲಕ ಬಾಯ್ಬಿಟ್ಟ ಭಯಾನಕ ಸತ್ಯ

ಮನೆಯ ಕಷ್ಟಗಳ ನಿವಾರಣೆಗಾಗಿ ಕಿಡ್ನಿ ದಾನ (ಮಾರಾಟ) ಮಾಡಲೂ ಮುಂದಾಗಿದ್ದ. ಹಣಕಾಸಿನ ತೊಂದರೆಯಿಂದ ಮಾನಸಿಕ ಆಘಾತಕ್ಕೊಳಗಾಗಿದ್ದ. ಸಮಸ್ಯೆಗಳು ಬಗೆಹರಿಯುತ್ತಿಲ್ಲ ಎಂದು ಮಾನಸಿಕವಾಗಿ ನೊಂದಿದ್ದ ಆತ, ಡೆತ್​ನೋಟ್​ ಬರೆದಿಟ್ಟು ಹಾವೇರಿ ಜಿಲ್ಲೆ ಸವಣೂರು ತಾಲೂಕು ಯಲವಿಗಿ ನಿಲ್ದಾಣದ ಮಂಗಳವಾರ ತಡರಾತ್ರಿ ರೈಲಿಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಆತನ ದೇಹದಿಂದ ತಲೆ ಬೇರ್ಪಟ್ಟಿದ್ದು, ಕಿಮ್ಸ್​ನಲ್ಲಿ ಶವಪರೀಕ್ಷೆ ಬಳಿಕ ಕುಟುಂಬದವರಿಗೆ ಹಸ್ತಾಂತರಿಸಲಾಯಿತು. ಹುಬ್ಬಳ್ಳಿ ರೈಲ್ವೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆತ ಡೆತ್ ನೋಟ್ ಬರೆದು ಜೇಬಿನಲ್ಲಿ ಇಟ್ಟುಕೊಂಡಿದ್ದ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net