

ಬೆಂಗಳೂರು: ಬಿಜೆಪಿ ಮುಖಂಡ ಅನಂತರಾಜು ಆತ್ಮಹತ್ಯೆ ಪ್ರಕರಣದಲ್ಲಿ ದಿನಕ್ಕೊಂದು ಸಂಗತಿಗಳ ಬೆಳಕಿಗೆ ಬರುತ್ತಿವೆ. ಅನಂತರಾಜು ಪತ್ನಿ ಸುಮಾ ಹಾಗೂ ರೇಖಾ ನಡುವೆ ನಡೆದಿದ್ದ ನಾಲ್ಕೈದು ಆಡಿಯೋ ರೆಕಾರ್ಡ್ಗಳು ಈ ಹಿಂದೆ ಸೋರಿಕೆಯಾಗಿತ್ತು. ಆಡಿಯೋದಲ್ಲಿ ಅನಂತರಾಜು ಡೆತ್ನೋಟ್ ಬರೆದಿಟ್ಟಿದ್ದಾರೆ ಎಂದು ಸುಮಾ ಹೇಳಿದ್ದರು. ಇದೀಗ ಆ ಡೆತ್ನೋಟ್ ಮಾಧ್ಯಮಳಿಗೆ ಲಭ್ಯವಾಗಿದೆ.
ಒಂದು ಡೆತ್ನೋಟ್ನಲ್ಲಿ ಪತ್ನಿ ಸುಮಾ ಉದ್ದೇಶಿಸಿ ಬರೆಯಲಾಗಿದೆ. ಮತ್ತೊಂದರಲ್ಲಿ ಪೊಲೀಸ್ ಸಬ್ ಇನ್ಸ್ಪೆಕ್ಟರ್ಗೆ ಬರೆಯಲಾಗಿದ್ದು, ಆ ಎರಡು ಡೆತ್ನೋಟ್ಗಳ ಸಾರಾಂಶ ಈ ಕೆಳಕಂಡಂತಿದೆ.
ಪ್ರಿಯ ಸುಮಾ, ಕ್ಷಮಿಸಿಬಿಡು ನಿನಗೆ ಮೋಸ ಮಾಡಿದ್ದೇನೆ. ನಿನ್ನಿಂದ ಕ್ಷಮೆ ಕೇಳಲು ನಾನು ಅರ್ಹನಲ್ಲ. ರೇಖಾ ಎಂಬ ಕೆ.ಆರ್.ಪುರ ಹೆಣ್ಣಿನ ಸಹವಾಸ ಮಾಡಿ ಅವಳಿಂದ ಫೋಟೋ ವಿಡಿಯೋಗಳ ಟ್ರ್ಯಾಪ್ಗೆ ಸಿಲುಕಿ, ಬ್ಲಾಕ್ಮೇಲ್ ಮಾಡಿಸಿಕೊಂಡು ನಿನಗೆ ಮುಖ ತೋರಿಸಲು ಸಾಧ್ಯವಾಗ್ತಿಲ್ಲ. ತೃಪ್ತಿ, ತನ್ಮಯಿ ಹಾಗೂ ಅಭಯರನ್ನು ಚೆನ್ನಾಗಿ ನೋಡಿಕೋ ಎಂದು ಸುಮಾ ಉದ್ದೇಶಿಸಿ ಬರೆಯಲಾಗಿದೆ.
ಇನ್ನೊಂದು ಡೆತ್ನೋಟ್ನಲ್ಲಿ ಪೊಲೀಸ್ ಇನ್ಸ್ಪೆಕ್ಟರ್ ಅವರಿಗೆ ಕೆ.ಆರ್.ಪುರದ ರೇಖಾ ಎಂಬ ಹೆಣ್ಣಿನ ಮೋಸದ ಜಾಲಕ್ಕೆ ಸಿಲುಕಿ ಎಲ್ಲವನ್ನು ಕಳೆದುಕೊಂಡಿದ್ದೇನೆ. ಸಾಕಷ್ಟು ಹಣ ನೀಡಿದ್ದೇನೆ. ಅವಳಿಂದ ಮಾನಸಿಕ ಹಿಂಸೆ ಅನುಭವಿಸಿದ್ದೇನೆ. ಅವಳ ವಿರುದ್ಧ ಕಾನೂನು ಕ್ರಮ ವಹಿಸಬೇಕೆಂದು ಕೇಳಿಕೊಳ್ಳುತ್ತೇನೆ. ಇಂತಿ ನಿಮ್ಮ ಅನಂತರಾಜು ಎಂದು ಬರೆಯಲಾಗಿದೆ.
ಸದ್ಯ ಡೆತ್ನೋಟ್ ಅನ್ನು ಬ್ಯಾಡರಹಳ್ಳಿ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಇದೇ ಡೆತ್ನೋಟ್ ಎಂದು ಅನಂತರಾಜು ಪತ್ನಿ ಸುಮಾ ಪೊಲೀಸರಿಗೆ ನೀಡಿದ್ದಾರೆ. ಆದರೆ, ಡೆತ್ನೋಟ್ ಬರೆದಿರುವುದು ಅನಂತರಾಜುನಾ? ಅಥವಾ ಬೇರೆಯವರಾ? ಎಂದು ಎಫ್ಎಸ್ಎಲ್ ಪರೀಕ್ಷೆಗೆ ಪೊಲೀಸರು ಕಳುಹಿಸಲಿದ್ದಾರೆ.
ಈ ಹಿಂದೆ ಫೋನ್ ಕಾಲ್ನಲ್ಲಿ ಮಾತನಾಡುವಾಗ ರೇಖಾಗೆ ಸುಮಾರ ಅವಾಜ್ ಹಾಕಿದ್ದಳು. ನಿನ್ನ ಮೇಲೆ ಬರೆದಿರುವ ಡೆತ್ ನೋಟ್ ಇದೆ. ಅದನ್ನು ಕೊಟ್ಟು ನಿನ್ನನ್ನು ಜೈಲಿಗೆ ಹಾಕಿಸುತ್ತೆನೆ ಎಂದಿದ್ದರು. ಹೀಗಾಗಿ ಈ ಡೆತ್ನೋಟ್ ಯಾವ ಸಂದರ್ಭದಲ್ಲಿ ಬರೆದಿದ್ದು ಎಂದು ಬ್ಯಾಡರಹಳ್ಳಿ ಪೊಲೀಸರು ತನಿಖೆ ನಡೆಸಲಿದ್ದಾರೆ. (ದಿಗ್ವಿಜಯ ನ್ಯೂಸ್)