More

    ಭಾವಿ ಪತಿಯನ್ನೇ ಬಂಧಿಸಿ ಲೇಡಿ ಸಿಂಗಂ ಎನಿಸಿಕೊಂಡಿದ್ದ ಪೊಲೀಸ್​ ಅಧಿಕಾರಿಯ ಅಸಲಿ ಮುಖ ಬಯಲು!

    ದೀಸ್ಪುರ್​: ಒಳ್ಳೆಯವರು ಎನಿಸಿಕೊಂಡವರ ಇನ್ನೊಂದು ಮುಖ ಬಯಲಾದಾಗ ಮೊದಲು ನೆನಪಾಗುವುದೆಂದರೆ, ಈ ಕಾಲದಲ್ಲಿ ಯಾರನ್ನು ನಂಬುವುದು ಯಾರನ್ನು ಬಿಡುವುದು ಎಂಬ ಮಾತು. ಅದಕ್ಕೆ ಪುಷ್ಠಿ ನೀಡುವಂತಹ ಘಟನೆಯೊಂದು ಅಸ್ಸಾಂನಲ್ಲಿ ನಡೆದಿದೆ. ಭಾವಿ ಪತಿಯನ್ನೇ ಬಂಧಿಸುವ ಮೂಲಕ ಲೇಡಿ ಸಿಂಗಂ ಎಂದೇ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದ್ದ ಮಹಿಳಾ ಪೊಲೀಸ್ ಅಧಿಕಾರಿ ಇದೀಗ ಭ್ರಷ್ಟಾಚಾರ ಪ್ರಕರಣದ ಅಡಿಯಲ್ಲಿ ಬಂಧನವಾಗಿದ್ದಾರೆ. ​

    ಬಂಧಿತ ಅಧಿಕಾರಿಯ ಹೆಸರು ಜುನ್ಮೊನಿ ರಭ. ನಗೌನ್​ ಜಿಲ್ಲೆಯಲ್ಲಿ ಸಬ್​ ಇನ್ಸ್​ಪೆಕ್ಟರ್​ ಆಗಿ ಸೇವೆ ಸಲ್ಲಿಸುತ್ತಿದ್ದರು. ವಂಚನೆ ಪ್ರಕರಣದಲ್ಲಿ ಭಾವಿ ಪತಿ ರಾಣಾ ಪೊಗಾಗ್ ಭಾಗಿಯಾಗಿದ್ದಾರೆ ಎಂದು ಗೊತ್ತಾದಾಗಲೇ ಕಳೆದ ತಿಂಗಳು ಆತನನ್ನು ಬಂಧಿಸಿ, ಎಲ್ಲರ ಮೆಚ್ಚುಗೆ ಗಳಿಸಿದ್ದರು. ಇದೀಗ ಅದೇ ಪ್ರಕರಣದಲ್ಲಿ ರಭ ಅವರ ಪಾತ್ರವು ಕೂಡ ಇದೆ ಎಂಬ ಆರೋಪ ಕೇಳಿಬಂದಿದ್ದು, ರಭ ಅವರನ್ನು ಶನಿವಾರ (ಜೂ.4) ಬಂಧಿಸಲಾಗಿದೆ. ಮಜೌಲಿ ಜಿಲ್ಲಾ ನ್ಯಾಯಾಲಯ 14 ದಿನಗಳ ನ್ಯಾಯಾಂಗ ವಶಕ್ಕೆ ಒಪ್ಪಿಸಿದೆ.

    ರಭ ಅವರು ಆರೋಪಿ ರಾಣಾ ಪೊಗಾಗ್​ ಜತೆ ಕಳೆದ ಒಂದು ವರ್ಷದಿಂದ ಸಂಬಂಧದಲ್ಲಿದ್ದರು. ಕಳೆದ ಅಕ್ಟೋಬರ್​ನಲ್ಲಿ ಇಬ್ಬರು ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಆರೋಪಿಯು ತಾನು ತೈಲ ಮತ್ತು ನೈಸರ್ಗಿಕ ಅನಿಲ ನಿಗಮದ (ಒಎನ್‌ಜಿಸಿ) ಸಾರ್ವಜನಿಕ ಸಂಪರ್ಕ ಅಧಿಕಾರಿ ಎಂದು ಸುಳ್ಳು ಹೇಳಿಕೊಂಡು, ಒಎನ್‌ಜಿಸಿಯಲ್ಲಿ ಉದ್ಯೋಗ ನೀಡುವುದಾಗಿ ಭರವಸೆ ನೀಡಿ ಹಲವಾರು ಜನರಿಗೆ ಲಕ್ಷಾಂತರ ರೂಪಾಯಿಗಳನ್ನು ವಂಚಿಸಿದ್ದ.

    ಈ ಆರೋಪ ಕೇಳಿಬಂದ ಬೆನ್ನಲ್ಲೇ ಆತನ ವಿರುದ್ಧ ಎಫ್​ಐಆರ್​ ದಾಖಲಿಸಿದ ರಭ, ಪೋಗಾಗ್ ಅವರ ಮನೆಯಿಂದ ಒಎನ್‌ಜಿಸಿಯ 11 ನಕಲಿ ಸೀಲುಗಳು ಮತ್ತು ನಕಲಿ ಗುರುತಿನ ಚೀಟಿಗಳು ಸೇರಿದಂತೆ ಹಲವು ದೋಷಾರೋಪಣೆ ದಾಖಲೆಗಳನ್ನು ವಶಪಡಿಸಿಕೊಂಡಿದ್ದರು. ಭಾವಿ ಪತಿ ಎಂದು ನೋಡದೇ ಆತನನ್ನು ಬಂಧಿಸಿ ಕಂಬಿ ಹಿಂದೆ ತಳ್ಳಿದ್ದರು. ರಭ ಅವರ ಕರ್ತವ್ಯ ನಿಷ್ಠೆಯನ್ನು ನೋಡಿ ಇಡೀ ರಾಜ್ಯ ರಭಗೆ ಮೆಚ್ಚುಗೆ ಮಹಾಪೂರವನ್ನೇ ಹರಿಸಿತ್ತು.

    ಇದೀಗ ಅದೇ ಪ್ರಕರಣದಲ್ಲಿ ಭ್ರಷ್ಟಾಚಾರ ಆರೋಪದ ಅಡಿಯಲ್ಲಿ ರಭ ಬಂಧನವಾಗಿರುವುದನ್ನು ನೋಡಿದರೆ ಮೇಲೆ ಹೇಳಿದಂತೆ ಯಾರನ್ನು ನಂಬುವುದು ಯಾರನ್ನು ಬಿಡುವುದು ಎಂಬ ಮಾತು ಮತ್ತೆ ನೆನಪಾಗುತ್ತದೆ. (ಏಜೆನ್ಸೀಸ್​)

    ಭಾವಿ ಪತಿಯನ್ನೇ ಬಂಧಿಸಿದ ಮಹಿಳಾ ಪೊಲೀಸ್​ ಅಧಿಕಾರಿಗೆ ಅಭಿನಂದನೆಗಳ ಮಹಾಪೂರ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts