More

    ಬಡತನವನ್ನೇ ಬಂಡವಾಳವನ್ನಾಗಿಸಿ ಭಾರಿ ಭ್ರಷ್ಟಾಚಾರ

    ಚಿಕ್ಕಮಗಳೂರು: ಸ್ವಾತಂತ್ರ್ಯಾನಂತರ ರಾಷ್ಟ್ರದಲ್ಲಿ ಬಿಎಸ್‌ಪಿ ಹೊರತುಪಡಿಸಿ ದೇಶವನ್ನಾಳಿದ ಎಲ್ಲ ಪಕ್ಷಗಳು ಸಾರ್ವಜನಿಕರಲ್ಲಿ ನೈತಿಕವಾಗಿ ಮತಯಾಚಿಸುವ ಅರ್ಹತೆ ಕಳೆದುಕೊಂಡಿವೆ ಎಂದು ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಬಿಎಸ್‌ಪಿ ಅಭ್ಯರ್ಥಿ ಕೆ.ಟಿ.ರಾಧಾಕೃಷ್ಣ ಅಭಿಪ್ರಾಯಪಟ್ಟರು.

    ನಗರದ ಹೊರವಲಯದ ಹಿರೇಮಗಳೂರಿನಲ್ಲಿ ಬಿಎಸ್‌ಪಿಯಿಂದ ಶುಕ್ರವಾರ ಏರ್ಪಡಿಸಿದ್ದ ಉಡುಪಿ-ಚಿಕ್ಕಮಗಳೂರು ಲೊಕಸಭಾ ಚುನಾವಣಾ ಪ್ರಚಾರ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಸಾರ್ವಜನಿಕವಾಗಿ ಮತಯಾಚಿಸಿ ಮಾತನಾಡಿದ ಅವರು, ಸಂವಿಧಾನದಡಿ ಜೀವನ ಭದ್ರತೆ ಒದಗಿಸುವ ನಿಟ್ಟಿನಲ್ಲಿ ದೇಶವನ್ನಾಳಿರುವ ರಾಷ್ಟ್ರೀಯ ಹಾಗೂ ಪ್ರಾದೇಶಿಕ ಪಕ್ಷಗಳು ಜನತೆಯ ಬಡತನವನ್ನು ಬಂಡವಾಳವನ್ನಾಗಿಸಿಕೊಂಡು ಚುನಾವಣೆಯಲ್ಲಿ ಭಾರಿ ಭ್ರಷ್ಟಾಚಾರ ನಡೆಸಿವೆ. ಆಸೆ-ಆಮಿಷವನ್ನು ಒಡ್ಡಿ ಮತಗಳಿಸುವ ಮೂಲಕ ಆಡಳಿತ ವ್ಯವಸ್ಥೆಯಲ್ಲಿ ಅತಿಹೆಚ್ಚು ಅನ್ಯಾಯವನ್ನು ಮಾಡಲಾಗಿದೆ ಎಂದು ಆರೋಪಿಸಿದರು.
    ಉತ್ತರ ಪ್ರದೇಶದ ಬಹುಜನ ಸಮಾಜ ಪಾರ್ಟಿ ಬಹುಮತದಿಂದ ಒಂದು ಬಾರಿ ಗೆಲುವು ಕಂಡಿತ್ತು. ಪಕ್ಷದ ರಾಷ್ಟ್ರೀಯ ಅಧ್ಯಕ್ಷೆ ಮಾಯಾವತಿ ಸರಿಸುಮಾರು ನಾಲ್ಕು ಬಾರಿ ಮುಖ್ಯಮಂತ್ರಿಯಾಗಿ ಅಧಿಕಾರ ನಡೆಸಿ ಬಡವರು, ದೀನದಲಿತರ ಅಭಿವೃದ್ಧಿಗೆ ಹೆಚ್ಚು ಒತ್ತು ನೀಡಿದ್ದಾರೆ. ಇಂದಿಗೂ ದೇಶವನ್ನಾಳಿದ ರಾಷ್ಟ್ರೀಯ ಪಕ್ಷದ ಮುಖಂಡರು ಮಾಯಾವತಿ ಅವರ ಕಾರ್ಯವೈಖರಿ ಅರಿಯಬೇಕಿದೆ ಎಂದು ಹೇಳಿದರು.
    ಈ ಭಾರಿಯ ಲೋಕಸಭಾ ಚುನಾವಣೆಯಲ್ಲಿ ದೇಶದ ಪ್ರಧಾನಿಯಾಗಿ ಮಾಯಾವತಿ ಅವರನ್ನು ಆಯ್ಕೆಗೊಳಿಸಿದರೆ ಸಮಾಜಘಾತುಕ ಶಕ್ತಿಗಳನ್ನು ಮಟ್ಟ ಹಾಕಿ ದೇಶದ ಪ್ರತಿಯೊಬ್ಬ ನಾಗರಿಕನೂ ಹಾಗೂ ಪ್ರತಿಯೊಬ್ಬ ಮಹಿಳೆಯೂ ಯಾವುದೇ ಭಯಭೀತಿಯಿಲ್ಲದೆ ಮುಕ್ತವಾಗಿ ಓಡಾಡುವ ವಾತಾವರಣ ಸೃಷ್ಟಿಯಾಗಲಿದೆ ಎಂದು ತಿಳಿಸಿದರು.
    ಪ್ರಸ್ತುತ ಅಲ್ಪಸಂಖ್ಯಾತರಲ್ಲಿ ಭದ್ರತೆಯಿಲ್ಲದೇ ಭಯದ ವಾತಾವರಣ ಸೃಷ್ಟಿಯಾಗಿದೆ. ದೇಶದಲ್ಲಿ ಬಿಎಸ್‌ಪಿ ಅಧಿಕಾರ ವಹಿಸಿಕೊಂಡಲ್ಲಿ ಅಲ್ಪಸಂಖ್ಯಾತರಿಗೂ ಸೂಕ್ತ ರಕ್ಷಣೆ ಒದಗಿಸುವ ಕೆಲಸ ಮಾಡುತ್ತೇವೆ. ಈ ಎಲ್ಲ ಅಂಶಗಳ ಬಗ್ಗೆ ಜನರಲ್ಲಿ ಅರಿವು ಮೂಡಿಸಿ ಮತಯಾಚನೆ ನಡೆಸಲಾಗುತ್ತಿದೆ ಎಂದು ಹೇಳಿದರು.
    ಬಿಎಸ್‌ಪಿ ರಾಜ್ಯ ಕಾರ್ಯದರ್ಶಿ ಕೆ.ಬಿ.ಸುಧಾ ಮಾತನಾಡಿ, ಈ ಭಾರಿಯ ಲೋಕಸಭಾ ಚುನಾವಣೆಯಲ್ಲಿ ಮತದಾರರು ಐತಿಹಾಸಿಕ ತೀರ್ಮಾನ ಕೈಗೊಳ್ಳಬೇಕಿದೆ. ಪ್ರಜಾಪ್ರಭುತ್ವ ಹಾಗೂ ಸಂವಿಧಾನ ಉಳಿಯಬೇಕಿದೆ. ಆ ನಿಟ್ಟಿನಲ್ಲಿ ಬಿಎಸ್‌ಪಿ ಹಲವಾರು ವರ್ಷಗಳಿಂದ ಆಸೆ-ಆಮಿಷಗಳನ್ನು ತೋರದೇ ಸ್ವಾಭಿಮಾನದಿಂದ ಚುನಾವಣೆ ಎದುರಿಸುತ್ತಿದೆ ಎಂದು ತಿಳಿಸಿದರು.
    ಈಗಾಗಲೇ ಅನೇಕ ಪಕ್ಷಗಳು ಹಣ, ಹೆಂಡದ ಆಮಿಷಗಳ ಮೂಲಕ ಮತಗಳಿಸಿ ಜನಪ್ರತಿನಿಧಿಗಳಾಗಿ ಸಮಾಜದ ಸ್ವಾಸ್ಥ್ಯವನ್ನು ಹಾಳುಗೆಡವಿದ್ದಾರೆ. ಆದರೆ ಬಿಎಸ್‌ಪಿ ದೇಶ ಹಾಗೂ ರಾಜ್ಯ ಸೇರಿದಂತೆ ಪ್ರತಿಯೊಂದು ಚುನಾವಣೆಯಲ್ಲಿ ಸಮರ್ಪಕವಾಗಿ ಕೆಲಸ ಮಾಡುವ ಜೊತೆಗೆ ಸಮಸ್ಯೆಗಳನ್ನು ಪರಿಹರಿಸುವ ಧ್ಯೇಯೋದ್ದೇಶಗಳನ್ನಿಟ್ಟುಕೊಂಡು ಪ್ರಾಮಾಣಿಕವಾಗಿ ಚುನಾವಣೆ ಎದುರಿಸುತ್ತಿದೆ ಎಂದು ಹೇಳಿದರು.
    ಡಾ. ಬಿ.ಆರ್.ಅಂಬೇಡ್ಕರ್ ಆಶಯದಂತೆ ದೇಶದಲ್ಲಿ ಸಮಾನತೆಯನ್ನು ಅನುಸರಿಸುತ್ತಿರುವ ಪಕ್ಷ ಬಿಎಸ್‌ಪಿ. ಉಳಿದ ರಾಷ್ಟ್ರೀಯ ಹಾಗೂ ಪ್ರಾದೇಶಿಕ ಪಕ್ಷಗಳು ಅಂಬೇಡ್ಕರ್ ಹೆಸರಿನಲ್ಲಿ ಮತಗಳಿಕೆಗೋಸ್ಕರ ಸ್ವಾರ್ಥ ರಾಜಕಾರಣ ಮಾಡುತ್ತಿವೆ. ಇದನ್ನು ಜನಸಾಮಾನ್ಯರು ಅರಿತುಕೊಳ್ಳಬೇಕು. ಸಂವಿಧಾನಬದ್ಧವಾಗಿ ಕಾರ್ಯನಿರ್ವಹಿಸುತ್ತಿರುವ ಬಿಎಸ್‌ಪಿಗೆ ಅಮೂಲ್ಯ ಮತ ನೀಡಬೇಕು ಎಂದು ಮನವಿ ಮಾಡಿದರು.
    ಪ್ರಚಾರ ಕಾರ್ಯದಲ್ಲಿ ಬಿಎಸ್‌ಪಿ ಮುಖಂಡರಾದ ಎಚ್.ಕುಮಾರ್, ವಸಂತ್, ಖಜಾಂಚಿ ರತ್ನಾ, ವಿಜಯ್‌ಕುಮಾರ್, ಪರಮೇಶ್, ಜಗದೀಶ್, ರವಿಕುಮಾರ್ ಮತ್ತಿತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts