

ಉಡುಪಿ: ನಗರ ವ್ಯಾಪ್ತಿಯಲ್ಲಿ ಮಳೆಗಾಲಕ್ಕೆ ಪೂರ್ವಭಾವಿಯಾಗಿ ಸ್ವಚ್ಛತಾ ಕಾರ್ಯ ಆರಂಭಗೊಂಡಿದೆ. ಉಡುಪಿ, ಮಣಿಪಾಲ, ಮಲ್ಪೆ ಮೂರು ವಲಯಗಳಾಗಿ ವಿಂಗಡಿಸಲಾಗಿದ್ದು, ಹೊರಗುತ್ತಿಗೆ ಆಧಾರದಲ್ಲಿ ನೇಮಕಗೊಂಡಿರುವ 45 ಮಂದಿ ಸ್ವಚ್ಛತಾ ಕಾರ್ಮಿಕರು ಚರಂಡಿಗಳಲ್ಲಿ ಮಳೆ ನೀರು ಸರಾಗವಾಗಿ ಹರಿಯುವಂತೆ ಕಸ, ಕಡ್ಡಿ, ಮಣ್ಣು ತೆರವುಗೊಳಿಸುತ್ತಿದ್ದಾರೆ.
ಮಳೆ ನೀರು ಹರಿಯುವ ಚರಂಡಿಯಲ್ಲಿ ಗಿಡಗಂಟಿಗಳು ಬೆಳೆದುಕೊಂಡಿದ್ದು, ಮಣ್ಣು, ಕಲ್ಲು ಚರಂಡಿಗೆ ಬಿದ್ದಿವೆ. ಅಲ್ಲದೇ ಸಾಕಷ್ಟು ಕಡೆಗಳಲ್ಲಿ ಚರಂಡಿಗಳಲ್ಲಿ ತ್ಯಾಜ್ಯ ತುಂಬಿಕೊಂಡಿದ್ದು, ನೀರು ಸರಾಗವಾಗಿ ಹರಿದುಹೋಗಲು ಸಮಸ್ಯೆಯಾಗುತ್ತಿದೆ. ಕೆಲವು ಕಡೆಗಳಲ್ಲಿಯೇ ನಾಗರಿಕರು ಚರಂಡಿಯಲ್ಲಿಯೇ ಪ್ಲಾಸ್ಟಿಕ್ ಬಾಟಲಿ ಇನ್ನಿತರೆ ಆಹಾರ ಪದಾರ್ಥಗಳ ಪೊಟ್ಟಣವನ್ನು ಎಸೆದಿದ್ದಾರೆ. ಕೆಲವರು ಒಡೆದ ಗಾಜಿನ ಬಾಟಲಿ, ಗಾಜು, ಬಲ್ಬ್ಗಳನ್ನು ಎಸೆದಿದ್ದು, ಇದನ್ನು ಹಾಗೇ ಬಿಟ್ಟರೆ ಮಳೆ ನೀರು ಹರಿಯುವಾಗ ಇವೆಲ್ಲವೂ ನದಿ, ಸಮುದ್ರಕ್ಕೆ ಸೇರಿ ಜಲ ಜೀವ ವೈವಿಧ್ಯತೆ ಕಂಟಕವಾಗುತ್ತದೆ. ಹೀಗಾಗಿ ಎಲ್ಲ ಮಾದರಿಯ ತ್ಯಾಜ್ಯ ತೆರವುಗೊಳಿಸಿ ನಗರಸಭೆ ತ್ಯಾಜ್ಯ ಸಾಗಿಸುವ ವಾಹನ ಮೂಲಕ ತ್ಯಾಜ್ಯ ನಿರ್ವಹಣಾ ಟಕ ಕರ್ವಾಲುಗೆ ಕಳುಹಿಸಿಕೊಡಲಾಗುತ್ತಿದೆ.
ದೊಡ್ಡ ಕಾಲುವೆಗಳ ಸ್ವಚ್ಛತೆ ಅಗತ್ಯ
ಇಂದ್ರಾಣಿ ನದಿ ಜೊತೆಗೆ ಮಳೆ ಹರಿಯುವ ದೊಡ್ಡ ಕಾಲುವೆಗಳನ್ನು ಸ್ವಚ್ಛಗೊಳಿಸುವುದು ಅತೀ ಅಗತ್ಯ. ಬೈಲಕೆರೆ, ಕಲ್ಸಂಕ, ಗುಂಡಿಬೈಲು, ಮಠದಬೆಟ್ಟು, ನಿಟ್ಟೂರು, ಕೊಡಂಕೂರು, ಕೊಡವೂರು ಭಾಗದಲ್ಲಿ ಕಾಲುವೆ ಸ್ವಚ್ಛಗೊಳಿಸಬೇಕು. ಇದರಲ್ಲಿ ಅಗಾಧ ಪ್ರಮಾಣದಲ್ಲಿ ತ್ಯಾಜ್ಯ ರಾಶಿಗಳಿದ್ದು, ಸಾಕಷ್ಟು ಗಿಡಗಂಟಿಗಳು ಬೆಳೆದುಕೊಂಡಿದೆ. ಅಲ್ಲದೆ ಹಲವು ಕಡೆಗಳಲ್ಲಿ ತಡೆಗೋಡೆಗಳು ದುಸ್ಥಿತಿಯಲ್ಲಿದ್ದು, ಇದರ ದುರಸ್ತಿ ಕೆಲಸವೂ ನಡೆಯಬೇಕಿದೆ.
ಮಾನ್ಸೂನ್ ತಂಡ
ಸ್ವಚ್ಛತಾ ಕಾರ್ಯದಲ್ಲಿ ಒಂದೊಂದು ವಲಯದಲ್ಲಿ 15 ಮಂದಿ ಕಾರ್ಯನಿರ್ವಹಿಸುತ್ತಿದ್ದಾರೆ. ಕುಂಜಿಬೆಟ್ಟು, ಮಲ್ಪೆ, ಗುಂಡಿಬೈಲು, ಎಂಜಿಎಂ ಭಾಗದಲ್ಲಿ ಈಗಾಗಲೆ ಸ್ವಚ್ಛತಾ ಕಾರ್ಯ ನಡೆಯುತ್ತಿದೆ. ಅದೇ ರೀತಿ ಮಳೆಗಾಲದಲ್ಲಿ ತುರ್ತು ಕೆಲಸಕ್ಕಾಗಿ ಪೌರಕಾರ್ಮಿಕರನ್ನು ಹೊರತು ಪಡಿಸಿ 25 ಮಂದಿಯ ಮಾನ್ಸೂನ್ ತಂಡ ರಚಿಸಲಾಗಿದೆ. ಹೊರ ಗುತ್ತಿಗೆ ಆಧಾರದಲ್ಲಿ ಕಾರ್ಮಿಕರನ್ನು ನೇಮಕಮಾಡಿಕೊಳ್ಳಲಾಗಿದ್ದು, ಜೂನ್ ತಿಂಗಳಿನಿಂದ ಆಗಸ್ಟ್ವರೆಗೆ ಕಾರ್ಯನಿರ್ವಹಿಸುತ್ತಾರೆ.