More

    ಚುನಾವಣಾ ಪ್ರಚಾರಕ್ಕೆ ತೆರೆ, ರಿಲ್ಯಾಕ್ಸ್ ಮೂಡ್‌ನಲ್ಲಿ ಅಭ್ಯರ್ಥಿಗಳು

    ಚಿಕ್ಕಬಳ್ಳಾಪುರ: ಪರಸ್ಪರ ತೀವ್ರ ಪೈಪೋಟಿ ಹಿನ್ನೆಲೆಯಲ್ಲಿ ಪೈಪೋಟಿಯಲ್ಲಿ ಚಿಕ್ಕಬಳ್ಳಾಪುರ ಲೋಕಸಭೆ ಚುನಾವಣೆಗೆ ಬಿರುಸಿನ ಪ್ರಚಾರ ಕೈಗೊಂಡಿದ್ದ ಬಹುತೇಕ ಅಭ್ಯರ್ಥಿಗಳು ಇದೀಗ ರಿಲ್ಯಾಕ್ಸ್ ಮೂಡ್‌ನಲ್ಲಿದ್ದಾರೆ.
    ಚುನಾವಣೆ ಅಖಾಡದಲ್ಲಿ 29 ಮಂದಿ ಇದ್ದರು. ಒಬ್ಬರು ಪಕ್ಷೇತರ ಅಭ್ಯರ್ಥಿ ರಾಜಾರೆಡ್ಡಿ ನಿಧನರಾಗಿದ್ದಾರೆ. ಉಳಿದಂತೆ 28 ಅಭ್ಯರ್ಥಿಗಳ ಪೈಕಿ ಕಾಂಗ್ರೆಸ್ ಅಭ್ಯರ್ಥಿ ಎಂ.ಎಸ್.ರಕ್ಷಾ ರಾಮಯ್ಯ, ಎನ್‌ಡಿಎ ಅಭ್ಯರ್ಥಿ ಡಾ ಕೆ.ಸುಧಾಕರ್, ಸಿಪಿಎಂ ಅಭ್ಯರ್ಥಿ ಎಂ.ಪಿ.ಮುನಿವೆಂಕಟಪ್ಪ ಚುನಾವಣಾ ಪ್ರಚಾರದಲ್ಲಿ ಗಮನ ಸೆಳೆದಿದ್ದು ಪಕ್ಷದ ರಾಷ್ಟ್ರೀಯ ಮತ್ತು ರಾಜ್ಯಮಟ್ಟದ ಘಟಾನುಘಟಿ ನಾಯಕರನ್ನು ಕ್ಷೇತ್ರಕ್ಕೆ ಕರೆತಂದು ಪ್ರಚಾರ ನಡೆಸಿದ್ದರು. ಪ್ರಧಾನಿ ನರೇಂದ್ರ ಮೋದಿ, ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ, ಮುಖ್ಯಮಂತ್ರಿ ಸಿದ್ದರಾಮಯ್ಯ, ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಸೇರಿದಂತೆ ಹಲವರು ಸ್ವಪಕ್ಷೀಯ ಅಭ್ಯರ್ಥಿಗಳ ಪರ ಮತ ಯಾಚಿಸಿದ್ದರು. ಇದರ ನಡುವೆ ಶತಾಯ ಗತಾಯ ಗೆಲುವಿಗಾಗಿ ಸ್ಥಳೀಯ ಜನಪ್ರತಿನಿಧಿಗಳು ಮತ್ತು ಮುಖಂಡರೊಂದಿಗೆ ಅಭ್ಯರ್ಥಿಗಳು ಕಾಲಿಗೆ ಚಕ್ರ ಕಟ್ಟಿಕೊಂಡವರಂತೆ ಆದಷ್ಟು ಕಡೆ ಸುತ್ತಾಡಿ ಮತಯಾಚಿಸಿದ್ದರು. ಇದಕ್ಕೆ ಪೂರಕವಾಗಿ ಕಾರ್ಯಕರ್ತರು ನಾಯಕರ ಗೆಲುವಿಗೆ ಹಗಲು ಇರಳು ಎನ್ನದೇ ಶ್ರಮಿಸಿದ್ದರು. ಇದೀಗ ಮತದಾನ ಮುಗಿದಿದೆ. ಯಾರಿಗೆ ಗೆಲುವು, ಯಾರಿಗೆ ಸೋಲು ಎನ್ನುವುದನ್ನು ತಿಳಿಸುವ ವಿದ್ಯುನ್ಮಾನ ಮತಯಂತ್ರಗಳು ಸ್ಟ್ರಾಂಗ್ ರೂಮ್ ಕೊಠಡಿಯಲ್ಲಿ ಭದ್ರವಾಗಿವೆ. ಇದರ ನಡುವೆ ಪ್ರಚಾರಕ್ಕಾಗಿ ಎಲ್ಲೆಡೆ ಅಲೆದಾಡಿ ದಣಿದವರು ಇದೀಗ ರಿಲ್ಯಾಕ್ಸ್ ಮೂಡ್‌ನಲ್ಲಿದ್ದಾರೆ.

    * ವಿಶ್ರಾಂತಿ ಜತೆಗೆ ಮಾಹಿತಿ ಕಲೆ
    ಕ್ಷೇತ್ರದ ಮತದಾನ ಪ್ರಕ್ರಿಯೆ ಮುಗಿಯುತ್ತಿದ್ದಂತೆ ಕಾಂಗ್ರೆಸ್ ಮತ್ತು ಎನ್‌ಡಿಎ ಅಭ್ಯರ್ಥಿಗಳು ರಾಜ್ಯ ರಾಜಧಾನಿ ಬೆಂಗಳೂರನ್ನು ಸೇರಿಕೊಂಡಿದ್ದಾರೆ. ಪ್ರಮುಖರನ್ನು ಹೊರತುಪಡಿಸಿದಂತೆ ಯಾರ ಸಂಪರ್ಕಕ್ಕೂ ಸಿಗುತ್ತಿಲ್ಲ. ಈ ಭಾಗದಲ್ಲಿ ಪ್ರಚಾರದ ವೇಳೆ ಅಬ್ಬರಿಸಿದ ಸಚಿವರು, ಶಾಸಕರು, ಮಾಜಿ ಶಾಸಕರು ರಾಜ್ಯದಲ್ಲಿ ನಡೆಯುತ್ತಿರುವ ಎರಡನೇ ಹಂತದ ಚುನಾವಣೆಗೆ ಪಕ್ಷದ ಪರ ಮತಯಾಚನೆಗೆ ತೆರಳುವುದರ ಕಡೆಗೆ ಗಮನಹರಿಸಿದ್ದಾರೆ. ವರಿಷ್ಠರು ಆದೇಶದಂತೆ ಜವಾಬ್ದಾರಿ ವಹಿಸಿಕೊಳ್ಳಲಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಎನ್‌ಡಿಎ ಅಭ್ಯರ್ಥಿ ಡಾ ಕೆ.ಸುಧಾಕರ್ ಮತ್ತು ಕಾಂಗ್ರೆಸ್ ಅಭ್ಯರ್ಥಿ ರಕ್ಷಾ ರಾಮಯ್ಯ ಶುಕ್ರವಾರ ರಾತ್ರಿಯೇ ಮತದಾನಕ್ಕೆ ಸಂಬಂಧಿಸಿದಂತೆ ಮಾಹಿತಿ ಸಂಗ್ರಹಿಸಿದ್ದಾರೆ.

    *ಲೆಕ್ಕಾಚಾರದ ಕಸರತ್ತು
    ಬೂತ್ ಮಟ್ಟದಲ್ಲಿ ಮತದಾರರ ಒಲವಿನ ಪ್ರಮಾಣ ಲೆಕ್ಕ, ಲಾಭ-ನಷ್ಟ, ಕೈ ಹಿಡಿದವರು ಮತ್ತು ಕೈ ಕೊಟ್ಟವರು, ಅಲ್ಲಲ್ಲಿ ಕೇಳುತ್ತಿರುವ ಜನಾಭಿಪ್ರಾಯ ಸೇರಿ ಪ್ರಮುಖ ಮಾಹಿತಿಯನ್ನು ಕಲೆ ಹಾಕಲು ಬೆಂಬಲಿಗರಿಗೆ ಅಭ್ಯರ್ಥಿಗಳು ಸೂಚಿಸಿದ್ದಾರೆ. ಈಗಾಗಲೇ ಚುನಾವಣೆ ಪ್ರಚಾರದ ಹಿನ್ನೆಲೆಯಲ್ಲಿ ಬಹುತೇಕರು ಬಿಡುವಿಲ್ಲದೆ ಓಡಾಡಿ ದಣಿದಿದ್ದಾರೆ. ಇದಕ್ಕೆ ವಿಶ್ರಾಂತಿಯ ನಡುವೆ ಮತದಾನದ ಬಳಿಕ ನಡೆಯುತ್ತಿರುವ ಚರ್ಚೆಗಳ ಕುರಿತು ಮಾಹಿತಿ ಸಂಗ್ರಹಿಸಿ, ತರಲು ಪಕ್ಷದ ಪದಾಧಿಕಾರಿಗಳಿಗೆ ತಿಳಿಸಲಾಗಿದೆ. ಈಗಾಗಲೇ ಮುಖಂಡರು ಮತ್ತು ಕಾರ್ಯಕರ್ತರು ಸೋಲು ಗೆಲುವಿನ ವಿಮರ್ಶೆಗಳಲ್ಲಿ ತೊಡಗಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts