ಭಾವಿ ಪತಿಯನ್ನೇ ಬಂಧಿಸಿದ ಮಹಿಳಾ ಪೊಲೀಸ್​ ಅಧಿಕಾರಿಗೆ ಅಭಿನಂದನೆಗಳ ಮಹಾಪೂರ!

Woman Police
Published on

ದೀಸ್ಪುರ್​: ತಪ್ಪು ಮಾಡುವ ಕುಟುಂಬಸ್ಥರು, ಸಂಬಂಧಿಕರು ಹಾಗೂ ಆಪ್ತರನ್ನು ಕಾನೂನು ದುರ್ಬಳಕೆ ಮಾಡಿಕೊಂಡರು ಪರವಾಗಿಲ್ಲ, ಹೇಗಾದರೂ ತಪ್ಪನ್ನು ಮರೆಮಾಚಿ ಅವರನ್ನು ಕಾಪಾಡಬೇಕು ಅಂದುಕೊಳ್ಳುವ ಭ್ರಷ್ಟ ಅಧಿಕಾರಿಗಳ ನಡುವೆ ಇಲ್ಲೊಬ್ಬ ಮಹಿಳಾ ಪೊಲೀಸ್​ ಅಧಿಕಾರಿ ಭಾವಿ ಪತಿಯ ವಿರುದ್ಧವೇ ಎಫ್​ಐಆರ್​ ದಾಖಲಿಸಿ ಬಂಧಿಸಿದ್ದಾರೆ. ಪ್ರಮಾಣಿಕ ಹಾಗೂ ದಿಟ್ಟ ಪೊಲೀಸ್​ ಅಧಿಕಾರಿಗೆ ಮೆಚ್ಚುಗೆಯ ಮಹಾಪೂರವೇ ಹರಿದುಬರುತ್ತಿದೆ.

ಮಹಿಳಾ ಪೊಲೀಸ್​ ಅಧಿಕಾರಿ ವಂಚನೆ ಪ್ರಕರಣದಲ್ಲಿ ಭಾವಿ ಪತಿಯನ್ನೇ ಬಂಧಿಸಿರುವ ಘಟನೆ ಅಸ್ಸಾಂನ ನಗೌನ್​ ಜಿಲ್ಲೆಯಲ್ಲಿ ಗುರುವಾರ ನಡೆದಿದೆ. ಅಧಿಕಾರಿಯ ಹೆಸರು ಜುನ್ಮೊನಿ ರಭ. ನಗೌನ್​ ಜಿಲ್ಲೆಯಲ್ಲಿ ಸಬ್​ ಇನ್ಸ್​ಪೆಕ್ಟರ್​ ಆಗಿ ಸೇವೆ ಸಲ್ಲಿಸುತ್ತಿದ್ದಾರೆ. ಇವರ ಭಾವಿ ಪತಿ ರಾಣಾ ಪೊಗಾಗ್​ ಅಪರಾಧ ಪ್ರಕರಣದಲ್ಲಿ ಭಾಗಿಯಾಗಿದ್ದಾರೆ ಎಂದು ಗೊತ್ತಾದ ಕೂಡಲೇ ಎಫ್ಐಆರ್​ ದಾಖಲಿಸಿ ಬಂಧಿಸಿದ್ದಾರೆ.

ವರದಿಗಳ ಪ್ರಕಾರ ರಭ ಆರೋಪಿ ರಾಣಾ ಪೊಗಾಗ್​ ಜತೆ ಕಳೆದ ಒಂದು ವರ್ಷದಿಂದ ಸಂಬಂಧದಲ್ಲಿದ್ದರು. ಕಳೆದ ಅಕ್ಟೋಬರ್​ನಲ್ಲಿ ಇಬ್ಬರು ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಆರೋಪಿಯು ತಾನು ತೈಲ ಮತ್ತು ನೈಸರ್ಗಿಕ ಅನಿಲ ನಿಗಮದ (ಒಎನ್‌ಜಿಸಿ) ಸಾರ್ವಜನಿಕ ಸಂಪರ್ಕ ಅಧಿಕಾರಿ ಎಂದು ಸುಳ್ಳು ಹೇಳಿಕೊಂಡು, ಒಎನ್‌ಜಿಸಿಯಲ್ಲಿ ಉದ್ಯೋಗ ನೀಡುವುದಾಗಿ ಭರವಸೆ ನೀಡಿ ಹಲವಾರು ಜನರಿಗೆ ಲಕ್ಷಾಂತರ ರೂಪಾಯಿಗಳನ್ನು ವಂಚಿಸಿದ್ದ ಎನ್ನಲಾಗಿದೆ.

ಈ ಆರೋಪ ಕೇಳಿಬಂದ ಬೆನ್ನಲ್ಲೇ ಆತನ ವಿರುದ್ಧ ಎಫ್​ಐಆರ್​ ದಾಖಲಿಸಿದ ರಭ, ಪೋಗಾಗ್ ಅವರ ಮನೆಯಿಂದ ಒಎನ್‌ಜಿಸಿಯ 11 ನಕಲಿ ಸೀಲುಗಳು ಮತ್ತು ನಕಲಿ ಗುರುತಿನ ಚೀಟಿಗಳು ಸೇರಿದಂತೆ ಹಲವು ದೋಷಾರೋಪಣೆ ದಾಖಲೆಗಳನ್ನು ವಶಪಡಿಸಿಕೊಂಡಿದ್ದಾರೆ.

ಭಾವಿ ಪತಿ ಎಂದು ನೋಡದೇ ಆತನನ್ನು ಬಂಧಿಸಿ ಕಂಬಿ ಹಿಂದೆ ತಳ್ಳಿದ್ದಾರೆ. ರಭ ಅವರ ಕರ್ತವ್ಯ ನಿಷ್ಠೆಯನ್ನು ನೋಡಿ ಇಡೀ ರಾಜ್ಯ ರಭಗೆ ಮೆಚ್ಚುಗೆ ಮಹಾಪೂರವನ್ನೇ ಹರಿಸುತ್ತಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net