‘ಐಶ್ವರ್ಯ ರೈ ಥರ ಇದ್ದೀಯ’ ಎಂದು ನೆರೆಮನೆಯವಳನ್ನು ಎಳೆದಾಡಿದ; 'ನನ್ನ ಕಣ್ಣಲ್ಲಿ ನಿನ್ನದೇ ಬಿಂಬ ಕಾಣುತ್ತದೆ' ಎಂದವನಿಗೆ ಜೈಲು ಕಂಬಿಗಳ ದರ್ಶನ!

aishwarya
Published on

ಬೆಂಗಳೂರು: ‘ಐಶ್ವರ್ಯ ರೈ ಇದ್ದ ಹಾಗೆ ಇದ್ದೀಯಾ, ನನ್ನ ಕಣ್ಣಲ್ಲಿ ಕಣ್ಣಿಟ್ಟು ನೋಡಿದರೆ ನಿನ್ನದೇ ಬಿಂಬ ಕಾಣುತ್ತದೆ’ ಎಂದು ಕುಡಿದ ಮತ್ತಿನಲ್ಲಿ ನೆರೆಮನೆಯ ಮಹಿಳೆಯ ಜತೆಗೆ ಅಸಭ್ಯವಾಗಿ ವರ್ತಿಸಿದ್ದ ಆರೋಪಿಯನ್ನು ಪೀಣ್ಯ ಪೊಲೀಸರು ಬಂಧಿಸಿದ್ದಾರೆ. ದೊಡ್ಡಬಿದಿರುಕಲ್ಲಿನ ನಿವಾಸಿ 31 ವರ್ಷದ ಮಹಿಳೆ ಕೊಟ್ಟ ದೂರಿನ ಆಧಾರದ ಮೆರೆಗೆ ರಾಜಣ್ಣ (45) ಎಂಬಾತನನ್ನು ಪೀಣ್ಯ ಪೊಲೀಸರು ಬಂಧಿಸಿದ್ದಾರೆ.

ರಾಜಣ್ಣ ಪ್ರತಿದಿನ ಕುಡಿದು ಮನೆಗೆ ಬರುತ್ತಿದ್ದ. ಡಿ.28ರಂದು ಮಧ್ಯಾಹ್ನ 1.30ರಲ್ಲಿ ಕುಡಿದು ಬಂದು ತನ್ನ ಮನೆಯ ಬದಲಾಗಿ ನೆರೆಮನೆಯ ಬಾಗಿಲು ತಟ್ಟಿದ್ದ. ದೂರುದಾರ ಮಹಿಳೆ ಬಾಗಿಲು ತೆಗೆದಾಗ, ರಾಜಣ್ಣ ಏಕಾಏಕಿ ಮನೆಯೊಳಗೆ ನುಗ್ಗಿದ್ದ. ಮಹಿಳೆಗೆ ಆರೋಪಿಯ ಪರಿಚಯವಿದ್ದ ಹಿನ್ನೆಲೆಯಲ್ಲಿ ‘ಏನು ರಾಜಣ್ಣ ಸಮಾಚಾರ?’ ಎಂದು ಮಹಿಳೆ ಕುಶಲೋಪರಿ ವಿಚಾರಿಸಿದ್ದಳು.

ಕೆಲ ಹೊತ್ತು ಮಹಿಳೆಯ ಮನೆಯಲ್ಲೇ ಸುಮ್ಮನೆ ಕುಳಿತಿದ್ದ ಆರೋಪಿ, ನಂತರ ‘ನೀನು ಐಶ್ವರ್ಯ ರೈ ಇದ್ದ ಹಾಗೆ ಇದ್ದೀಯಾ, ಬಂದು ನನ್ನ ಪಕ್ಕದಲ್ಲಿ ಕುಳಿತುಕೋ, ನನ್ನ ಕಣ್ಣಲ್ಲಿ ಕಣ್ಣಿಟ್ಟು ನೋಡು ನಿನ್ನದೇ ಪ್ರತಿಬಿಂಬ ಕಾಣುತ್ತದೆ’ ಎಂದು ಹೇಳಿದ್ದ. ರಾಜಣ್ಣನ ವರ್ತನೆ ಕಂಡು ಆತಂಕಗೊಂಡ ಮಹಿಳೆ, 'ಅಣ್ಣ ನೀವು ಈ ರೀತಿ ಮಾತನಾಡಬೇಡಿ, ಇಲ್ಲಿಂದ ಹೋಗಿ..' ಎಂದು ಹೇಳಿದ್ದಳು.

ಆಗ ಆರೋಪಿ ಏಕಾಏಕಿ ಮಹಿಳೆಯ ಕೈ ಹಿಡಿದು ಎಳೆದಾಡಿ ಅಸಭ್ಯವಾಗಿ ವರ್ತಿಸಿದ್ದಾನೆ. ಸಹಾಯಕ್ಕಾಗಿ ಮಹಿಳೆ ಕೂಗಿಕೊಳ್ಳುತ್ತಿದ್ದಂತೆ ಆರೋಪಿ ಅಲ್ಲಿಂದ ಓಡಿಹೋಗಿದ್ದಾನೆ. ನೆರೆಹೊರೆಯ ಮನೆಯವರು ಬಂದು ವಿಚಾರಿಸಿದಾಗ ಮಹಿಳೆ ನಡೆದ ಸಂಗತಿ ವಿವರಿಸಿದ್ದಾಳೆ. ಕಿರುಕುಳಕ್ಕೆ ಒಳಗಾದ ಮಹಿಳೆ ಪೀಣ್ಯ ಪೊಲೀಸರಿಗೆ ಕೊಟ್ಟ ದೂರಿನ ಆಧಾರದ ಮೇರೆಗೆ ರಾಜಣ್ಣ ವಿರುದ್ಧ ಎಫ್​ಐಆರ್ ದಾಖಲಿಸಿಕೊಂಡ ಪೊಲೀಸರು, ಸ್ಥಳಕ್ಕೆ ಧಾವಿಸಿ ಆರೋಪಿಯನ್ನು ಬಂಧಿಸಿದ್ದಾರೆ.

ಕುಡಿದ ಮತ್ತಿನಲ್ಲಿ ರಾಜಣ್ಣ ಅಸಭ್ಯವಾಗಿ ವರ್ತಿಸಿದ್ದಾನೆ. ಮಹಿಳೆ ಮನೆಯಲ್ಲಿ ಒಂಟಿಯಾಗಿ ಇರುವುದನ್ನು ಗಮನಿಸಿ ರಾಜಣ್ಣ ಅಲ್ಲಿಗೆ ಹೋಗಿದ್ದ ಎನ್ನಲಾಗಿದೆ. ವಿಚಾರ ತಿಳಿಯುತ್ತಿದ್ದಂತೆ ರಾಜಣ್ಣನ ಪತ್ನಿಯೂ ಆತನಿಗೆ ಬೈದು ಬುದ್ಧಿ ಹೇಳಿ ಇನ್ನು ಮುಂದೆ ಈ ರೀತಿ ಆಗದಂತೆ ನೋಡಿಕೊಳ್ಳುತ್ತೇನೆ ಎಂದು ಪೊಲೀಸರಿಗೆ ಹೇಳಿದ್ದಾಳೆ ಎಂದು ತಿಳಿದು ಬಂದಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net