

ಬೆಂಗಳೂರು: ಮೈಸೂರಿನಲ್ಲಿ ನಡೆದಿದ್ದ ಅತ್ಯಾಚಾರಕ್ಕೆ ಸಂಬಂಧಿಸಿದಂತೆ ಆರಂಭವಾದ ಚರ್ಚೆ ಸದನದಲ್ಲಿ ಭಾರಿ ಸದ್ದು ಮಾಡಲಾರಂಭಿಸಿದೆ. ಸಿಎಂ, ಮಾಜಿ ಸಿಎಂ ಮಾತ್ರವಲ್ಲದೆ ಶಾಸಕಿಯರೂ ಅತ್ಯಾಚಾರ ಪ್ರಕರಣಗಳಿಗೆ ಕುರಿತಂತೆ ತಂತಮ್ಮ ಅನಿಸಿಕೆ-ಅಭಿಪ್ರಾಯಗಳನ್ನು ಮಂಡಿಸಿದ್ದಾರೆ.
2016,17,18ರ ಅಂಕಿ-ಅಂಶಗಳನ್ನು ತೋರಿಸಿ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಆಗಿದ್ದ ಅವಧಿಯಲ್ಲೇ ಅತಿಹೆಚ್ಚು ಅತ್ಯಾಚಾರಳಾಗಿವೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು. ಇದಕ್ಕೆ ಸಿದ್ದರಾಮಯ್ಯ ಮತ್ತು ಇತರ ಕಾಂಗ್ರೆಸ್ ಆಕ್ಷೇಪ ವ್ಯಕ್ತಪಡಿಸಿದರು. ಇದಕ್ಕೂ ಮುನ್ನ ಸಿದ್ದರಾಮಯ್ಯ ಅವರು ಅತ್ಯಾಚಾರ ವಿಚಾರವಾಗಿ ಮಾತನಾಡುತ್ತಿದ್ದಾಗ ಅವರಿಗರಿವೇ ಇರದಂತೆ ಪಂಚೆ ಜಾರಿದ ಪ್ರಕರಣವೂ ನಡೆಯಿತು.
ಮೈಸೂರಿನಲ್ಲಿ ನಡೆದಿದ್ದ ಅತ್ಯಾಚಾರಕ್ಕೆ ಸಂಬಂಧಿಸಿದಂತೆ ಗೃಹಸಚಿವ ಆರಗ ಜ್ಞಾನೇಂದ್ರ ನೀಡಿದ್ದ ಹೇಳಿಕೆಗೆ ಸಂಬಂಧಿಸಿದಂತೆ ಮಾತನಾಡಿದ ಶಾಸಕಿ ಭಾರತಿ ಶೆಟ್ಟಿ, ಸಚಿವರು ಕೇಳಿದ್ದು ಸರಿಯಾಗಿಯೇ ಇದೆ ಎಂದು ಸಮರ್ಥಿಸಿಕೊಂಡರು. ಗಂಡು ಮಕ್ಕಳು ಸಿಗರೇಟು ಸೇದುತ್ತಾರೆ, ಕುಡಿಯುತ್ತಾರೆ, ನಾವೂ ಯಾಕೆ ಸೇದಬಾರದು ಕುಡಿಯಬಾರದು ಎಂಬ ಯೋಚನೆ ಹೆಣ್ಣುಮಕ್ಕಳಿಗೆ ಬರುತ್ತಿದೆ. ಇದು ಅಪಾಯಕಾರಿ, ಅವರಿಗೆ ಬುದ್ಧಿ ಹೇಳುವಂಥ ವ್ಯವಸ್ಥೆ ಶಿಕ್ಷಣದಲ್ಲೇ ಬರಬೇಕು. ಮತ್ತೊಂದೆಡೆ ಅತ್ಯಾಚಾರಿಗಳನ್ನು ಏಕಾಂಗಿಯಾಗಿ ಒದ್ದಾಡಿ ಒದ್ದಾಡಿ ಸಾಯುವಂತೆ ಮಾಡಬೇಕು. ಅಂಥವರ ಪುರುಷತ್ವವನ್ನೇ ಹರಣ ಮಾಡಬೇಕು ಎಂದು ಭಾರತಿ ಶೆಟ್ಟಿ ಆಕ್ರೋಶ ವ್ಯಕ್ತಪಡಿಸಿದರು.
ಇನ್ನು ಅತ್ಯಾಚಾರ ವಿಷಯವಾಗಿ ಮಾತನಾಡಿದ ವಿಧಾನ ಪರಿಷತ್ ಸದಸ್ಯೆ ತೇಜಸ್ವಿನಿ ಗೌಡ, ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಪತಿ ರಾಜ್ ಕುಂದ್ರಾ ಅವರನ್ನೂ ಪರೋಕ್ಷವಾಗಿ ಟೀಕಿಸಿದರು. 'ಬಾಂಬೆಯಲ್ಲಿ ಒಬ್ಬ ದೊಡ್ಡ ಮನುಷ್ಯ ಸಿಡಿ ಮಾಡ್ತಾನೆ' ಪೋರ್ನ್ ಮಾಡ್ತಾನೆ, ಏನೆನ್ನಬೇಕು?' ಎಂದ ತೇಜಸ್ವಿನಿ, ಮಹಿಳೆ ಸರಕು ಎಂಬಂತಾದಾಗಿನಿಂದ ಈ ಸಮಸ್ಯೆ ಶುರುವಾಗಿದೆ ಎಂದರು. ಕಾನೂನು ಎಷ್ಟೇ ಗಟ್ಟಿಯಾಗಿದ್ದರೂ ಅಪರಾಧಿಗಳು ತಪ್ಪಿಸಿಕೊಳ್ಳುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದ ಅವರು, ಕೆಟ್ಟದಾಗಿ ನೋಡಿ ಕಣ್ಣಲ್ಲೇ ಅತ್ಯಾಚಾರ ಮಾಡುತ್ತಾರೆ, ಮಕ್ಕಳ ಮೇಲೆ ಪೋರ್ನ್ ಮಾಡುತ್ತಾರೆ. ತನಿಖೆ ಮಾಡುವಾಗ ಪ್ರಶ್ನೆಗಳಿಂದಲೇ ನೂರು ಬಾರಿ ಅತ್ಯಾಚಾರ ಮಾಡುತ್ತಾರೆ ಎಂದರು. ಪೊಲೀಸ್ ಇಲಾಖೆಗೆ ಶಾರ್ಪ್ ಶೂಟರ್ ಮಹಿಳೆಯರು ಬರಬೇಕು ಎಂದೂ ತೇಜಸ್ವಿನಿ ಹೇಳಿದರು.