ಅತ್ಯಾಚಾರದ ವಿಷಯ ಚರ್ಚಿಸುತ್ತಿದ್ದಾಗಲೇ ಜಾರಿತು ಸಿದ್ದರಾಮಯ್ಯ ಪಂಚೆ!; ಹತ್ತಿರ ಬಂದು 'ಪಂಚೆ ಕಳಚಿದೆ ನೋಡಿ' ಎಂದ ಡಿಕೆಶಿ...

Siddaramayya vvani
Published on

ಬೆಂಗಳೂರು: ವಿಧಾನಸಭೆ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು, ಮೈಸೂರಿನಲ್ಲಿ ನಡೆದಿದ್ದ ಅತ್ಯಾಚಾರಕ್ಕೆ ಕುರಿತಂತೆ ಸದನದಲ್ಲಿ ಮಾತನಾಡುತ್ತಿದ್ದಾಗಲೇ ಅವರ ಪಂಚೆ ಜಾರಿದ ಪ್ರಸಂಗವೊಂದು ಜರುಗಿದೆ. ಈ ಸಂದರ್ಭದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು, ಸಿದ್ದರಾಮಯ್ಯ ಅವರ ಹತ್ತಿರ ಬಂದು, 'ಪಂಚೆ ಕಳಚಿದೆ' ಎಂದು ಪಿಸುಗಟ್ಟಿದ ಬಳಿಕವಷ್ಟೇ ಸಿದ್ದರಾಮಯ್ಯ ಅವರಿಗೆ ಪಂಚೆ ಜಾರಿರುವುದು ಗೊತ್ತಾಗಿದ್ದು.

ಡಿಕೆಶಿ ಹೇಳಿದ ತಕ್ಷಣವೇ ಸಿದ್ದರಾಮಯ್ಯ ತಮ್ಮ ಪಂಚೆಯನ್ನು ಸರಿಪಡಿಸಿಕೊಂಡರು. 'ನಮ್ಮ ಅಧ್ಯಕ್ಷರು ನಮ್ಮ ನಾಯಕರ ಮಾನ ಕಳೆಯುವ ಕೆಲಸ ಮಾಡಲಿಲ್ಲ, ಗುಟ್ಟಾಗಿ ಹೇಳಿದ್ರು. ಅದೇ ಈಶ್ವರಪ್ಪ ಆಗಿದ್ದರೆ ಬಹಿರಂಗವಾಗಿ ಹೇಳಿರುತ್ತಿದ್ದರು' ಎಂದು ಮಾಜಿ ಸ್ಪೀಕರ್ ರಮೇಶ್​ ಕುಮಾರ್ ಸದನದಲ್ಲಿ ನಗೆಯುಕ್ಕಿಸಿದರು.

ನಾನಿನ್ನು ಪಂಚೆ ಬಿಡಲ್ಲ ಎಂದು ಗಾಂಧಿ ಹೇಳಿದ್ದ ದಿನವೇ ಹೀಗಾಯ್ತು..

'ಇನ್ನುಮುಂದೆ ನಾನು ಪಂಚೆಯನ್ನು ಮಾತ್ರ ತೊಡುತ್ತೇನೆ' ಎಂಬುದಾಗಿ ಇಂದಿಗೆ ಸರಿಯಾಗಿ ನೂರು ವರ್ಷಗಳ ಹಿಂದೆ ಮಹಾತ್ಮ ಗಾಂಧಿಯವರು ತಮಿಳುನಾಡಿನ ಮಧುರೈನಲ್ಲಿ ಮಾತು ನೀಡಿದ್ದರು. ಅದರಂತೆಯೇ ನಡೆದುಕೊಂಡಿದ್ದರು. ಗಾಂಧಿಯವರು ಹಾಗಂದಿದ್ದ ನೂರು ವರ್ಷಗಳ ಬಳಿಕ ಅದೇ ದಿನ ಕಾಕತಾಳೀಯ ಎಂಬಂತೆ ಸಿದ್ದರಾಮಯ್ಯ ಅವರ ಪಂಚೆ ಜಾರಿದ ಪ್ರಸಂಗವೂ ಜರುಗಿದೆ.

ನಾನು ಕರೋನ ಬಂದ ಬಳಿಕ ವೇಟ್​ ಲಾಸ್ ಆಗಿದ್ದೇನೆ. ಜಿಂದಾಲ್​ಗೆ ಹೋಗಿ ಚಿಕಿತ್ಸೆ ಪಡೆದು ಬಂದ ಬಳಿಕ ದೇಹತೂಕ ಕಡಿಮೆ ಆಗಿದೆ. ಹೀಗಾಗಿ ಇತ್ತೀಚೆಗೆ ಪಂಚೆ ಜಾರುತ್ತಿದೆ ಎಂದು ಸಿದ್ದರಾಮಯ್ಯ ತಮಗುಂಟಾದ ಮುಜುಗರದ ಸನ್ನಿವೇಶದ ಕುರಿತು ಸಮಜಾಯಿಷಿ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net