

ಬೆಂಗಳೂರು: ಪೇಟಿಎಂ ಕೆವೈಸಿ ಅಪ್ಡೇಟ್ ಮಾಡ್ತೀವಿ, ಆನ್ಲೈನ್ ಚಾರ್ಚ್ 5 ರೂಪಾಯಿ ಆಗುತ್ತೆ ಎಂಬ ಅಪರಿಚಿತರ ಮಾತಿಗೆ ಮರುಳಾದ ಖಾಸಗಿ ಕಂಪನಿ ಉದ್ಯೋಗಿಯೊಬ್ಬರು ಬರೋಬ್ಬರಿ 1.74 ಲಕ್ಷ ರೂ. ಕಳೆದುಕೊಂಡಿದ್ದಾರೆ.
ಜೆ.ಪಿ.ನಗರದ ನಿವಾಸಿ ಭೀಮಸಿಂಹ (55) ಅವರ ಮೊಬೈಲ್ಗೆ ಅ.12ರಂದು ಕರೆ ಮಾಡಿದ್ದ ಅಪರಿಚಿತರು, ನಾವು ಪೇಟಿಎಂ ಕೆವೈಸಿ ಅಪ್ಡೇಟ್ ಮಾಡಿಕೊಡುತ್ತೇವೆ ಎಂದಿದ್ದರು. ಅಲ್ಲದೆ, ಭೀಮಸಿಂಹರ ಮೊಬೈಲ್ಗೆ ಲಿಂಕ್ ಕೂಡ ಕಳಿಸಿದ್ದರು. ಈ ಲಿಂಕ್ ಮೇಲೆ ಕ್ಲಿಕ್ ಮಾಡುವಂತೆ ಸೂಚಿಸಿ ಅದರಲ್ಲಿ ಬರುವ ಅಪ್ಲಿಕೇಶನ್ನ್ನು ಡೌನ್ಲೋಡ್ ಮಾಡುವಂತೆ ಹೇಳಿದ್ದರು. ಇದಾದ ನಂತರ ಆನ್ಲೈನ್ ಚಾರ್ಜ್ಗಾಗಿ 5 ರೂ.ಗಳನ್ನು ಕಳಿಸುವಂತೆ ತಿಳಿಸಿದ್ದರು.
ಅಪರಿಚಿತರ ಮಾತಿಗೆ ಮರುಳಾದ ಭೀಮಸಿಂಹ 5 ರೂ.ನ್ನು ಅವರು ಹೇಳಿದ ಖಾತೆಗೆ ಆನ್ಲೈನ್ ಮೂಲಕ ಕಳಿಸಿದ್ದರು. ಇದಾದ ಕೆಲ ಕ್ಷಣದಲ್ಲೇ ಹಂತ-ಹಂತವಾಗಿ ಭೀಮಸಿಂಹರ ಬ್ಯಾಂಕ್ ಖಾತೆಯಿಂದ ಒಟ್ಟು 1.74 ಲಕ್ಷ ರೂ. ಮಾಯವಾಗಿದೆ.
ಪೇಟಿಎಂ ಕೆವೈಸಿ ಅಪ್ಡೇಟ್ ಮಾಡಿಕೊಡುವ ಸೋಗಿನಲ್ಲಿ ಕರೆ ಮಾಡಿದ್ದ ಸೈಬರ್ ಕಳ್ಳರು, ಉದ್ಯೋಗಿಯ ಹಣ ಲಪಟಾಯಿಸಿದ್ದಾರೆ. ಈ ಕುರಿತು ದಕ್ಷಿಣ ಸಿಇಎನ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.