

ಬೆಂಗಳೂರು: ಜೆಡಿಎಸ್ ಮುಗಿಸಬೇಕು ಎಂಬುದೇ ಕಾಂಗ್ರೆಸ್ ಲೀಡರ್ಗಳ ಅಜೆಂಡಾ. ಅದು ಆಕ್ರೋಶವೋ, ಭಯವೋ ಗೊತ್ತಿಲ್ಲ. ಬಿಜೆಪಿಗಿಂತ ಜೆಡಿಎಸ್ ಮೇಲೆಯೇ ಅವರಿಗೆ ಹೆಚ್ಚು ಸಿಟ್ಟಿದೆ ಎಂದು ಕಾಂಗ್ರೆಸ್ ನಾಯಕರ ವಿರುದ್ಧ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ವಾಗ್ದಾಳಿ ನಡೆಸಿದರು.
ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಲಗ್ಗೆರೆಯಲ್ಲಿ ಜೆಡಿಎಸ್ ಅಭ್ಯರ್ಥಿ ವಿ.ಕೃಷ್ಣಮೂರ್ತಿ ಪರ ನಡೆದ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ದೇವೇಗೌಡರ ಕುಟುಂಬವನ್ನು ದುಡ್ಡು ಕೊಟ್ಟು ಕೊಂಡುಕೊಳ್ಳಲು ಆಗುವುದಿಲ್ಲ. ಇಡೀ ದೇಶದಲ್ಲಿ ಸಾರ್ವಜನಿಕವಾಗಿ ಒಬ್ಬ ಮುಖ್ಯಮಂತ್ರಿ ದೇಶದಲ್ಲಿ ಕಣ್ಣೀರು ಹಾಕಿದ್ದಾರೆ ಅಂದರೆ ಅದು ನಾನು ಮಾತ್ರ. ಅಂತಹ ವಾತಾವರಣದಲ್ಲಿ ನಾನಿದ್ದೆ ಎಂದು ಬೇಸರ ವ್ಯಕ್ತಪಡಿಸಿದರು.
ಬಿಜೆಪಿ ಹಾಗೂ ಬಿಜೆಪಿ ಅಭ್ಯರ್ಥಿ ಬಗ್ಗೆ ಕುಮಾರಸ್ವಾಮಿ ಸಾಫ್ಟ್ಕಾರ್ನರ್ ಹೊಂದಿದ್ದಾರೆ ಎಂದು ಅಪಪ್ರಚಾರ ಮಾಡುತ್ತಿದ್ದಾರೆ. ಆದರೆ, ಜನರ ಹಣ ಲೂಟಿ ಹೊಡೆಯೋರ ಬಗ್ಗೆ ನಾನು ಮಾತಾಡಲ್ಲ. 250 ಕೋಟಿ ರೂ. ಕಳ್ಳ ಬಿಲ್ ಮಾಡಿ ಹಣ ಗುಳುಂ ಮಾಡಿದ್ದಾರೆ. ಜನರ ಪಾಪದ ಹಣದಲ್ಲಿ ಬಿಜೆಪಿ ಅಭ್ಯರ್ಥಿ ಫುಡ್ಕಿಟ್ ನೀಡಿದ್ದಾರೆ ಎಂದು ಮುನಿರತ್ನ ವಿರುದ್ಧ ಹರಿಹಾಯ್ದರು. ನನ್ನ ಸರ್ಕಾರವನ್ನು 10 ಪರ್ಸೆಂಟ್ ಸರ್ಕಾರ ಎಂದು ಯಾರೂ ಹೇಳಲಿಲ್ಲ ಎಂದು ಕಾಂಗ್ರೆಸ್ ನಾಯಕರನ್ನು ಟೀಕಿಸಿದರು.
ಯಾವ ಪುರುಷಾರ್ಥಕ್ಕೆ ಚುನಾವಣೆ?: ಮಾಜಿ ಸಚಿವ ಬಂಡೆಪ್ಪ ಕಾಶೆಂಪೂರ್ ಮಾತನಾಡಿ, ಆರ್ಆರ್ ನಗರದಲ್ಲಿ ಯಾವ ಪುರುಷಾರ್ಥಕ್ಕೆ ಚುನಾವಣೆ ಬಂದಿದೆ. ಶಾಸಕ ಸ್ಥಾನ ಮಾರಿಕೊಂಡಿದ್ದೇ ಈ ಚುನಾವಣೆಗೆ ಕಾರಣ ಎಂದು ಕಿಡಿಕಾರಿದರು.
ಮುನಿರತ್ನ ಅಲ್ಲ 'ಮನಿ'ರತ್ನ..!: ವಿಧಾನ ಪರಿಷತ್ ಮಾಜಿ ಸದಸ್ಯ ಟಿ.ಎ.ಶರವಣ ಮಾತನಾಡಿ, ಬಿಜೆಪಿ ಅಭ್ಯರ್ಥಿ ಮುನಿರತ್ನ ಅಲ್ಲ, 'ಮನಿ'ರತ್ನ ಆಗಿದ್ದಾರೆ. ದುಶ್ಯಾಸನಂತೆ ಕಾರ್ಪೋರೇಟರ್ ಸೀರೆ ಎಳೆದಿದ್ದ ಮುನಿರತ್ನ ಈಗ ಧರ್ಮರಾಯನಂತೆ ಕಾಣುತ್ತಿದ್ದಾರಾ ಎಂದು ಬಿಜೆಪಿ ವಾಗ್ದಾಳಿ ನಡೆಸಿದರು. ಸಿದ್ದರಾಮಯ್ಯ ಅವರು ಜೆಡಿಎಸ್ ಎಲ್ಲಿದೆ ಎಂದು ಪ್ರಶ್ನಿಸುತ್ತಾರೆ. ಜೆಡಿಎಸ್ ಎಲ್ಲಿದೆ ಎಂದು ಈಗಾಗಲೇ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ತೋರಿಸಿದ್ದೇವೆ ಎಂದು ತಿರುಗೇಟು ನೀಡಿದರು.
ಜೆಡಿಎಸ್ ಅಭ್ಯರ್ಥಿ ಕೃಷ್ಣಮೂರ್ತಿ, ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಕೆ. ಕುಮಾರಸ್ವಾಮಿ ಮತ್ತಿತರರು ಉಪಸ್ಥಿತರಿದ್ದರು.