

ಬೆಂಗಳೂರು: ರಾಜ್ಯದ ಎಂಟು ಸ್ಥಳಗಳಲ್ಲಿರುವ ಅಂಚೆ ಕಚೇರಿಗಳಲ್ಲಿ ಸೇವೆ ಒದಗಿಸುತ್ತಿರುವ ಪಾಸ್ಪೋರ್ಟ್ ಸೇವಾ ಕೇಂದ್ರ (ಪಿಒಪಿಎಸ್ಕೆ) ಶನಿವಾರವೂ ಗ್ರಾಹಕರಿಗೆ ತೆರೆದಿರುತ್ತದೆ.
ಹೆಚ್ಚಿನ ಜನರಿಗೆ ಸಕಾಲದಲ್ಲಿ ಪಾಸ್ಪೋರ್ಟ್ ಸೇವೆ ಒದಗಿಸಲು ಇಂಥದ್ದೊಂದು ಉಪಕ್ರಮಕ್ಕೆ ಬೆಂಗಳೂರು ಪ್ರಾದೇಶಿಕ ಪಾಸ್ಪೋರ್ಟ್ ಕಚೇರಿ ಮುಂದಾಗಿದೆ. ಈ ನಿರ್ಧಾರದಿಂದಾಗಿ ನಿತ್ಯ ಹೆಚ್ಚಿನ ಗ್ರಾಹಕರಿಗೆ ಪಾಸ್ಪೋರ್ಟ್ ಸಂಬಂಧಿತ ಸಮಸ್ಯೆಗಳಿಗೆ ಪರಿಹಾರ ಒದಗಿಸಲು ಸಾಧ್ಯವಾಗಲಿದೆ.
ಬೆಂಗಳೂರು (ಜಾಲಹಳ್ಳಿ), ಚಿಕ್ಕಬಳ್ಳಾಪುರ, ತುಮಕೂರು, ಮೈಸೂರು, ಹಾಸನ, ಬಳ್ಳಾರಿ, ವಿಜಯಪುರ ಹಾಗೂ ಬೀದರ್ ಪಿಒಪಿಎಸ್ಕೆಗಳು ಶನಿವಾರವೂ ಸೇವೆ ಒದಗಿಸಲಿವೆ. ಇದರಿಂದಾಗಿ ರಾಜ್ಯದ ವಿವಿಧೆಡೆ ಇರುವ ಸೇವಾ ಕೇಂದ್ರಗಳಲ್ಲಿ ಹೆಚ್ಚುವರಿಯಾಗಿ 500ಕ್ಕೂ ಅಧಿಕ ಮಂದಿಗೆ ಸೌಲಭ್ಯ ಸಿಗಲಿದೆ ಎಂದು ಬೆಂಗಳೂರು ಪ್ರಾದೇಶಿಕ ಪಾಸ್ಪೋರ್ಟ್ ಕಚೇರಿ ಅಧಿಕಾರಿಗಳು ತಿಳಿಸಿದ್ದಾರೆ.
ಪ್ರಸ್ತುತ ರಾಜ್ಯದಲ್ಲಿರುವ ಪಾಸ್ಪೋರ್ಟ್ ಕಚೇರಿಗಳಲ್ಲಿ ಸೇವೆ ಪಡೆಯಲು ಮುಂಚಿತವಾಗಿ ಸಮಯ ನಿಗದಿ ಮಾಡಿಕೊಳ್ಳಬೇಕಾಗುತ್ತದೆ. ಅಪಾಯಿಂಟ್ಮೆಂಟ್ ಪಡೆಯಲು 15 ದಿನಗಳಿಗೂ ಹೆಚ್ಚು ಕಾಲ ಹಿಡಿಯುತ್ತದೆ. ಇದರಿಂದ ನಾಗರಿಕರಿಗೆ ತ್ವರಿತವಾಗಿ ಸೇವೆ ಲಭಿಸಲು ಸಾಧ್ಯವಾಗದು. ಶನಿವಾರ ಹಾಗೂ ಭಾನುವಾರ ಈ ಕೇಂದ್ರಗಳಿಗೆ ರಜೆ ಇದ್ದ ಕಾರಣ ವಾರಾಂತ್ಯದಲ್ಲಿ ಆಗಮಿಸುವ ಗ್ರಾಹಕರು ಸೇವೆ ಪಡೆದುಕೊಳ್ಳಲು ಸಾಧ್ಯವಾಗುತ್ತಿರಲಿಲ್ಲ.
ಇದನ್ನೂ ಓದಿ: VIDEO | ಕಣ್ತುಂಬಿಕೊಳ್ಳಿ ನೂತನ ಸಂಸತ್ ಭವನದ ಈ ಸೊಬಗ..
ಈ ಸಮಸ್ಯೆ ನಿವಾರಿಸಲು ಪಿಒಪಿಎಸ್ಕೆಗಳಲ್ಲಿ ಶನಿವಾರವೂ ಕೆಲಸದ ದಿನವೆಂದು ಪರಿಗಣಿಸುವುದರಿಂದ ವಾರಾಂತ್ಯದಲ್ಲಿ ರಜೆ ಹಾಕಿ ಪಾಸ್ಪೋರ್ಟ್ ಸಂಬಂಧಿತ ಕೆಲಸಗಳನ್ನು ಪೂರ್ಣಗೊಳಿಸಲು ಸಹಕಾರಿಯಾಗಲಿದೆ. ಹೊಸದಾಗಿ ಸೇವೆ ನೀಡುವ ಕೇಂದ್ರಗಳು ಇತರ ಸಾಮಾನ್ಯ ದಿನಗಳಂತೆ ಬೆಳಗ್ಗೆ 9.30ರಿಂದ ಮಧ್ಯಾಹ್ನ 3.30ರ ವರೆಗೆ ನಾಗರಿಕರಿಗೆ ಸೌಲಭ್ಯ ಒದಗಿಸಲಿವೆ.