

ಬೆಂಗಳೂರು: ಬರೀ ಒಂದೂವರೆ ಸಾವಿರ ರೂಪಾಯಿ ವಿಚಾರವಾಗಿ ನಡೆದ ಗಲಾಟೆಯಲ್ಲಿ ಒಬ್ಬ ಬರ್ಬರವಾಗಿ ಕೊಲೆಯಾಗಿ ಹೋಗಿದ್ದಾನೆ. ಅದರಲ್ಲೂ ಹದಿಮೂರು ಮಂದಿ ಒಟ್ಟಾಗಿ ಒಬ್ಬನನ್ನು ಲಾಂಗು-ಮಚ್ಚಿನಿಂದ ಕೊಚ್ಚಿ ಕೊಲೆ ಮಾಡಿದ್ದಾರೆ.
ಬೆಂಗಳೂರಿನ ಕೋಣನಕುಂಟೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಪ್ರಕರಣ ನಡೆದಿದ್ದು, ಮೆಹಬೂಬ್ (19) ಎಂಬಾತ ಕೊಲೆಯಾಗಿದ್ದಾನೆ. ಲಲಿತ್ ಹಾಗೂ ಮಣಿಕಂಠ ಎಂಬಿಬ್ಬರ ಮಧ್ಯೆ ಹಣಕಾಸಿನ ವಿಚಾರಕ್ಕೆ ಗಲಾಟೆ ನಡೆಯುತ್ತಿತ್ತು.
ನಿನ್ನೆ ರಾತ್ರಿ ಎ.ಕೆ. ಕಾಲನಿ ಬಳಿ ಇಬ್ಬರ ನಡುವಿನ ಗಲಾಟೆ ಸಂದರ್ಭದಲ್ಲಿ ಲಲಿತ್ ಬಣದಲ್ಲಿ ಮೆಹಬೂಬ್ ಇದ್ದ. ಗಲಾಟೆ ಅತಿರೇಕಕ್ಕೆ ಹೋಗಿ 13 ಮಂದಿ ಒಟ್ಟಾಗಿ ಮೆಹಬೂಬ್ನನ್ನು ಕೊಚ್ಚಿ ಕೊಲೆಗೈದು ಪರಾರಿಯಾಗಿದ್ದಾರೆ. ಸದ್ಯ ಕೊಲೆ ಆರೋಪಿಗಳಾದ ಮಣಿಕಂಠ, ಪವನ್, ಕಿರಣ್, ಕಾರ್ತಿಕ್ ಸೇರಿ 13 ಆರೋಪಿಗಳಿಗಾಗಿ ಕೋಣನಕುಂಟೆ ಪೊಲೀಸರು ಹುಡುಕಾಟಕ್ಕೆ ಇಳಿದಿದ್ದಾರೆ. ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.