

ಚಿಕ್ಕಬಳ್ಳಾಪುರ: ಗೆಳೆಯರ ನಡುವೆ ಏನೇನೋ ಆಸೆಗಳಿರುತ್ತವೆ. ಒಬ್ಬನ ಆಸೆಯನ್ನು ಇನ್ನೊಬ್ಬ ತೀರಿಸುವುದು, ತೀರಿಸಲು ಪ್ರಯತ್ನಿಸುವುದು ಸರ್ವೇಸಾಮಾನ್ಯ. ಹೀಗೆ ಗೆಳೆಯನೊಬ್ಬನ ಆಸೆಯನ್ನು ಮತ್ತೊಬ್ಬ ತೀರಿಸಲು ಹೋಗಿ ತಾನೇ ತೀರಿಹೋಗಿದ್ದಾನೆ.
ಚಿಕ್ಕಬಳ್ಳಾಪುರ ಜಿಲ್ಲೆ ಕಂದವಾರ ನಿವಾಸಿಗಳಾದ ಬಾಬು ಹಾಗೂ ಶಾಂತಾರಾಮ್ ಎಂಬಿಬ್ಬರು ಗೆಳೆಯರ ಪೈಕಿ ಶಾಂತಾರಾಮ್ ಪ್ರಾಣ ಕಳೆದುಕೊಂಡಿದ್ದಾನೆ. ಮದ್ಯಪಾನ ಮಾಡಿ ಮತ್ತೇರಿದ್ದ ಇಬ್ಬರೂ ಇಂದು ಕಂದವಾರ ಕೆರೆ ಏರಿ ಬಳಿ ವಾಕಿಂಗ್ ಮಾಡುತ್ತಿದ್ದರು.
ವಾಕ್ ಮಾಡುತ್ತಿದ್ದ ಸಂದರ್ಭದಲ್ಲಿ ಕೆರೆಯಲ್ಲಿ ಮೀನುಗಳು ಓಡಾಡುತ್ತಿರುವುದನ್ನು ಗಮನಿಸಿದ ಅವುಗಳನ್ನು ತಿನ್ನುವ ಆಸೆ ವ್ಯಕ್ತಪಡಿಸಿದ್ದಾನೆ. ಅದಕ್ಕೇನು, ಹೋಗಿ ತರುತ್ತೇನೆ ಎಂದು ಅಮಲಿನಲ್ಲಿ ನೀರಿಗಳಿದ ಶಾಂತಾರಾಮ್ ನೀರಲ್ಲಿ ಮುಳುಗಿ ಹೋಗಿದ್ದಾನೆ.
ಸ್ನೇಹಿತ ನೀರಿನಲ್ಲಿ ಮುಳುಗುತ್ತಿರುವುದನ್ನು ಗಮನಿಸಿದ ಬಾಬು, ರಕ್ಷಣೆಗಾಗಿ ಕೂಗಿ ಕೊಂಡಿದ್ದಾನೆ. ಆಗ ಹತ್ತಿರದಲ್ಲಿದ್ದ ಮೀನುಗಾರರು ಧಾವಿಸಿ ರಕ್ಷಣೆ ಮಾಡುವಷ್ಟರಲ್ಲಿ ಶಾಂತಾರಾಮ್ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾನೆ. ಬಳಿಕ ಸ್ಥಳೀಯರು ನೀರಿನಿಂದ ಶವ ಹೊರತೆಗೆದಿದ್ದಾರೆ.