ಒಬ್ಬನ ಹುಟ್ಟುಹಬ್ಬ, ಮತ್ತೊಬ್ಬನಿಗೆ ಸಾವು, ಇನ್ನೊಬ್ಬನಿಗೆ ಗಾಯ: ಅಷ್ಟಕ್ಕೂ ದೇಹ ಛಿದ್ರವಾಗಿದ್ದೇಕೆ?

Balloon
ಆಸ್ಪತ್ರೆಗೆ ದಾಖಲಿಸಲಾಗಿರುವ ಗಾಯಾಳು ಮಹದೇಶ್
Published on

ಬೆಂಗಳೂರು: ವ್ಯಕ್ತಿಯೊಬ್ಬರ ಜನ್ಮದಿನಾಚರಣೆಯ ಸಲುವಾಗಿ ಮನೆಗೆ ತೆರಳಿದ್ದ ಸಂಸ್ಥೆಯೊಂದರ ಇಬ್ಬರು ಕೆಲಸಗಾರರ ಪೈಕಿ ಒಬ್ಬನ ದೇಹ ಛಿದ್ರಗೊಂಡು ಸಾವಿಗೀಡಾಗಿದ್ದರೆ, ಮತ್ತೊಬ್ಬ ಗಾಯಗೊಂಡಿದ್ದಾನೆ. ತಮಿಳುನಾಡು ಮೂಲದ ಪರಪ್ಪನ ಅಗ್ರಹಾರ ನಿವಾಸಿಯಾದ ದಿನೇಶ್ (32) ಮೃತಪಟ್ಟ ವ್ಯಕ್ತಿ. ಮಹದೇಶ್​ ಗಾಯಾಳು. ಅಶೋಕನಗರ ಪೊಲೀಸ್ ಠಾಣಾ ವ್ಯಾಪ್ತಿಯ ರಿಚ್ಮಂಡ್ ಸರ್ಕಲ್ ಬಳಿ ಇರುವ ಖಾಸಗಿ ಅಪಾರ್ಟ್​ಮೆಂಟ್​ ಆವರಣದಲ್ಲಿ ಈ ಅವಘಡ ಸಂಭವಿಸಿದೆ.

ಅಪಾರ್ಟ್​ಮೆಂಟ್​ನ ನಿವಾಸಿಗರು ಕುಟುಂಬ ಸದಸ್ಯರೊಬ್ಬರ ಜನ್ಮದಿನಾಚರಣೆ ಸಲುವಾಗಿ ಮೈಪಾರ್ಟಿ.ಕಾಂ ಮೂಲಕ ಬರ್ತ್​ಡೇ ಅಲಂಕಾರಕ್ಕಾಗಿ ಬಲೂನ್ ಅಳವಡಿಸುವವರನ್ನು ಆಹ್ವಾನಿಸಿದ್ದರು. ಹೀಗಾಗಿ ದಿನೇಶ್​, ತನ್ನೊಂದಿಗೆ ಮಹದೇಶ್​ ಎಂಬಾತನನ್ನು ಕರೆದುಕೊಂಡು ಆ ಅಪಾರ್ಟ್​ಮೆಂಟ್​ಗೆ ತೆರಳಿದ್ದ.

ಅಪಾರ್ಟ್​ಮೆಂಟ್​ನಲ್ಲಿನ ಹೋಂಡಾ ಆ್ಯಕ್ಟಿವಾ ಸ್ಕೂಟರ್ ಮೇಲೆ ಸಿಲಿಂಡರ್ ಇಟ್ಟುಕೊಂಡು ಬಲೂನ್‌ಗೆ ಗ್ಯಾಸ್ ಫಿಲ್ ಮಾಡುತ್ತಿರುವ ವೇಳೆ ಏಕಾಏಕಿ ಸಿಲಿಂಡರ್ ಸ್ಫೋಟಗೊಂಡಿದೆ. ಪರಿಣಾಮ ದಿನೇಶ್ ದೇಹ ಛಿದ್ರವಾಗಿ, ಗಂಭೀರ ಗಾಯಗೊಂಡು ಸಾವಿಗೀಡಾಗಿದ್ದಾರೆ. ಸಹ ಕೆಲಸಗಾರ ಮಹದೇಶ್ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅಶೋಕನಗರ ಪೊಲೀಸರು ಸ್ಥಳಕ್ಕೆ ಭೇಟಿ ಪರಿಶೀಲನೆ ನಡೆಸಿದ್ದಾರೆ. ದಿನೇಶ್ ಹಾಗೂ ಮಹದೇಶ್ ನಾಲ್ಕು ವರ್ಷಗಳಿಂದ ಮೈ ಪಾರ್ಟಿ ಡಾಟ್‌ಕಾಮ್‌ನಲ್ಲಿ ಕೆಲಸ ಮಾಡುತ್ತಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net